ನವಿಲು ಗರಿ ಸಮುದ್ರದಾಳದಲ್ಲಿಟ್ಟರೆ ಬೆಳೆಯುತ್ತಾ: ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಟಾಂಗ್
ನವಿಲುಗರಿ ಸಮುದ್ರದ ಆಳದಲ್ಲಿ ಹೋಗಿ ಹಾಕಿದ್ರೆ ಅದು ಮತ್ತೆ ಅಲ್ಲಿ ಬೆಳೆಯುತ್ತೆ ಏನೋ ಗೊತ್ತಿಲ್ಲ. ನಿಸರ್ಗದ ನಿಯಮದ ಪ್ರಕಾರ ನವಿಲುಗರಿ ಅಲ್ಲಿ ಬೆಳೆಯುತ್ತಾ ನೀವೇ ಹೇಳಿ ನೋಡೋಣ?
ಕಲಬುರಗಿ (ಫೆ.27): ನವಿಲುಗರಿ ಸಮುದ್ರದ ಆಳದಲ್ಲಿ ಹೋಗಿ ಹಾಕಿದ್ರೆ ಅದು ಮತ್ತೆ ಅಲ್ಲಿ ಬೆಳೆಯುತ್ತೆ ಏನೋ ಗೊತ್ತಿಲ್ಲ. ನಿಸರ್ಗದ ನಿಯಮದ ಪ್ರಕಾರ ನವಿಲುಗರಿ ಅಲ್ಲಿ ಬೆಳೆಯುತ್ತಾ ನೀವೇ ಹೇಳಿ ನೋಡೋಣ? ಎಂದು ಸ್ಕೂಬಾ ಡೈವಿಂಗ್ ಮೂಲಕ ಸಮುದ್ರದಲ್ಲಿ ಶ್ರೀಕೃಷ್ಣ ನಗರಿಯ ದರುಶನ ಪಡೆದ ಪ್ರಧಾನಿ ನರೇಂದ್ರ ಮೋದಿ ಕುರಿತಂತೆ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.
ದ್ವಾರಕೆ ಸಮುದ್ರದಾಳದಲ್ಲಿ ಹೋಗಿ ನವಿಲು ಗರಿ ಇಟ್ಟು ಬಂದರೆ ಏನು ಫಲ? ನಿಸರ್ಗದ ನಿಯಮದ ಪ್ರಕಾರ ನವಿಲುಗರಿ ಅಲ್ಲಿ ಬೆಳೆಯುತ್ತಾ? ನಿಸರ್ಗದ ನಿಯಮದಲ್ಲಿ ನಾನು ನಂಬಿಕೆ ಇಟ್ಟಿರೋನು, ಆ ಪ್ರಕಾರವೇ ನಡೆಯಬೇಕು. ನಿಸರ್ಗದ ವಿರುದ್ಧ ಯಾರಿಗೂ ಕೂಡ ಯಶಸ್ವಿ ಸಿಗೋದಿಲ್ಲ. ಇದೇ ಬುದ್ಧನ ತತ್ವ ಎಂದು ಡಾ. ಖರ್ಗೆ ಕಲಬುರಗಿಯಲ್ಲಿ ಹೇಳಿದ್ದಾರೆ.
ಸುರಪುರ ಶಾಸಕ ರಾಜಾ ವಂಕಟಪ್ಪ ನಾಯಕ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ಖರ್ಗೆ, ಅರಬ್ಬಿ ಸಮುದ್ರದಲ್ಲಿ ಪ್ರಧಾನಿ ಮೋದಿ ಪೂಜೆ ಮಾಡಿರುವ ವಿಚಾರವಾಗಿ ಮಾತಿನುದ್ದಕ್ಕೂ ಲೇವಡಿ ಮಾಡಿದರು.
ರಷ್ಯಾದಿಂದ ಕಲಬುರಗಿಯವರನ್ನು ಕರೆ ತರೋ ವಿಚಾರ: ರಷ್ಯಾದಲ್ಲಿ ಸಿಲುಕಿರುವ ಕಲಬುರಗಿ ಮತ್ತು ಬೇರೆ ರಾಜ್ಯದ ಯುವಕರನ್ನ ವಾಪಸ್ ಕರೆ ತರುವ ವಿಚಾರವಾಗಿ ಈಗಾಗಲೇ ವಿದೇಶಾಂಗ ಸಚಿವ ಜೈಶಂಕರ್‌ಗೆ ಪತ್ರ ಬರೆದು ಗಮನ ಸೆಳೆದಿರೋದಾಗಿ ಖರ್ಗೆ ಹೇಳಿದರು. ಹಲವು ನಕಲಿ ಏಜಂಟ್‌ಗಳು ನಮ್ಮ ಯುವಕರಿಗೆ ಕೆಲಸ ಕೋಡಿಸುವುದಾಗಿ ಆಸೆ ತೋರಿಸಿ ಕರೆದೊಯ್ದಿದ್ದಾರೆ.
ರಷ್ಯಾದಲ್ಲಿ ನಮ್ಮ ಮಕ್ಕಳನ್ನ ಮಿಲಿಟರಿಯಲ್ಲಿ ಟ್ರೈನಿಂಗ್ ಇಲ್ಲದೆ ಅವರನ್ನ ಮುಂದಿಟ್ಟು ಬಲಿ ಕೊಡ್ತಿದ್ದಾರೆ. ಅವರನ್ನ ಬಿಡಿಸಬೇಕು ಅಂತಾ ಪತ್ರ ಬರೆದಿದ್ದೇನೆ. ಆದರೆ ಅವರಿಂದ ಇನ್ನೂ ಉತ್ತರ ಬಂದಿಲ್ಲ. ಇನ್ನೊಂದು ಬಾರಿ ಅವರೊಂದಿಗೆ ಮಾತನಾಡೋದಾಗಿ ಹೇಳಿದರು.