ಸುಳ್ಳು ಹೇಳೋದೇ ಬಿಜೆಪಿಯವ್ರ ಗ್ಯಾರಂಟಿ: ಮಲ್ಲಿಕಾರ್ಜುನ ಖರ್ಗೆ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 9 ತಿಂಗಳಲ್ಲೇ ತಾನು ಜನತೆಗೆ ನೀಡಿದ್ದ ಪಂಚ ವಾಗ್ದಾನಗಳಾದ ಶಕ್ತಿ, ಯುವನಿಧಿ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಜಾರಿಗೊಳಿಸಿರೋದಕ್ಕೆ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಕಲಬುರಗಿ (ಮಾ.14): ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 9 ತಿಂಗಳಲ್ಲೇ ತಾನು ಜನತೆಗೆ ನೀಡಿದ್ದ ಪಂಚ ವಾಗ್ದಾನಗಳಾದ ಶಕ್ತಿ, ಯುವನಿಧಿ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಜಾರಿಗೊಳಿಸಿರೋದಕ್ಕೆ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಜಿಪಂ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಡವರ ಬಾಳು ಬೆಳಗುವ ಪಂಚ ಗ್ಯಾರಂಟಿ ಜಾರಿಗೆ ತರುವ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಮತ್ತವರ ಸಂಪುಟದ ಸಹೋದ್ಯೋಗಿಗಳು ಉತ್ತಮ ಕೆಲಸ ಮಾಡಿದ್ದಾರೆಂದು ಶಹಬ್ಬಾಸ್‌ಗಿರಿ ನೀಡಿದರು. ನಮ್ಮ ಗ್ಯಾರಂಟಿ ನೋಡ್ಕೊಂಡು ಬಿಜೆಪಿಯವರು ಮೋದಿ ಗ್ಯಾರಂಟಿ ಅಂತ ಹೇಳ್ಕೋಂತ ಹೊಂಟಿದ್ದಾರೆಂದು ಲೇವಡಿ ಮಾಡಿದ ಖರ್ಗೆ, ಅದೇನು ಮೋದಿ ಗ್ಯಾರಂಟಿ? ಸುಳ್ಳು ಹಳೋದೇ ಅವರ ಗ್ಯಾರಂಟಿ, ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೇವೆ ಅಂತ ಹೇಳಿದವರು ಕಳೆದ 10 ವರ್ಷದಲ್ಲಿ ಮಾಡಿದ್ದೇನು? ಮೋದಿ, ಬಿಜೆಪಿ ತಮ್ಮ ಕೊಡುಗೆ ಹೇಳಿ ಮತ ಕೇಳಲಿ, ಅವರು ಬಂದಾಗ ನೀವೆಲ್ಲರು ಪ್ರಶ್ನಿಸಿರಿ ಎಂದು ಜನತೆಗೆ ಕರೆ ನೀಡಿದರು.
ರೇಲ್ವೆ ಸ್ಟೇಷನ್‌ದಾಗ ಹಸಿರು ಝಂಡಾ ಹಿಡ್ಕೊಂಡು ಓಡಾಡಿದ್ರ ಏನ್ ಬಂತು?: ರೇಲ್ವೆ ನಿಲ್ದಾಣದೊಳ್ಗ ಹಸಿರು ಝಂಡಾ ಹಿಡಕೊಂಡು ಓಡಾಡಿದರ ಏನ್ ಬಂತು? ಸಾವಿರಾರು ಕೋಟಿ ಯೋಜನೆಗಳಿಗೆ ಚಾಲನೆ ನೀಡಲು ಹೋಗಬೇಕಾದವರು ರೇಲ್ವೆ ಸ್ಟೇಷನ್ ಅಲಿತಿದ್ದಾರ, ಇದರಿಂದ ದೇಶದ ಪ್ರಗತಿ ಆಗ್ತದಾ? ನಮ್ದೇ ಹಳಿಗಳ ಮ್ಯಾಗ ಮೋದಿ ರೈಲ ಓಡಸ್ಲಿಕತ್ತಾನ ಎಂದರು ಖರ್ಗೆ. ಮೋದಿ ಪದೇ ಪದೇ ಕಲಬುರಗಿಗೆ ಹೊಂಟಾನ ಮಾರಾಯ, ರಾಜ್ಯಸಭೆ ವಿರೋಧ ಪಕ್ಷ ನಾಯಕರ ಕಚೇರಿಯಲ್ಲಿ ಮೊನ್ನೆ ಸಿಕ್ಕಾಗ ಕೇಳ್ದೆ, ಯಾಕ ಕಲಬುರಗಿಗೆ ಹೊಂಟೀರಿ? ಕೆಟ್ಟ ಬಿಸಿಲ, ನೀರಿಗೂ ಪರದಾಟ ಅದ ಅಲ್ಲಿ ಅಂದೆ, ನಿಮ್ಮೂರಲ್ಲಿ ದೊಡ್ಡ ಏರ್‌ಸ್ಟ್ರಿಪ್ ಇದೆ.
ಅದಕ್ಕೆ ನಮ್ಮ ವಿಮಾನ ಅಲ್ಲಿ ಇಳಿಸಿ ಹೋಗಲು ಅನುಕೂಲ ಎಂದು ಮೋದಿ ಹೇಳಿದರು. ಬಂದು ಹೋಗ್ಲಿ, ಹಂಗೇ ಬರುವಾಗ ನಮಗ ಯೋಜನೆಗಳ ಕೊಡುಗೆ ಕೊಡಬಹುದಲ್ಲ? ಎಂದರು. ಮಾತಿನುದ್ದಕ್ಕೂ ಸಿಂಹಪಾಲು ಮೋದಿಯ ಮಾತು, ಡೈಲಾಗ್ ಎಲ್ಲವನ್ನು ಅಣಕಿಸುತ್ತ , ಹಲವು ಬಾರಿ ಏಕ ವಚನದಲ್ಲೇ ಪದಪ್ರಯೋಗ ಮಾಡುತ್ತ ಮಾತನಾಡಿದ ಖರ್ಗೆ, ಕಾಂಗ್ರೆಸ್ ದೇಶವನ್ನೇ ಹಾಳು ಮಾಡಿದೆ ಅಂತಾನ, ನೀ ಎಷ್ಟು ಬೈತಿ ಬಯ್ಯೋ ಮಾರಾಯ, ನಿನ್ನ ಬೈಗುಳ ತಿಂತೀವಿ, ನೀನರ ಕೆಲ್ಸ ಮಾಡಿ ತೋರಿಸು, ಕೆಲಸಕ್ಕಿಂತ ಪ್ರಚಾರನೇ ಹೆಚ್ಚಾಯ್ತು ಎಂದು ಕೇಂದ್ರದ ಸಾಧನೆ ಶೂನ್ಯವೆಂದು ಟೀಕಿಸಿದರು.
ಲೋಕಸಭೆಗೂ ಕಾಂಗ್ರೆಸ್ ಗ್ಯಾರಂಟಿ: ಲೋಕ ಸಮರಕ್ಕೂ ನಾವು ಗ್ಯಾರಂಟಿಗಳೊಂದಿಗೆ ಬಂದಿದ್ದೇವೆ ಎಂದ ಖರ್ಗೆ, ಜಾತಿ ಜನಗಣತಿ ದೇಶಾದ್ಯಂತ ನಡೆಸಿ ಅದರ ಆಧಾರದಲ್ಲಿ ಸವಲತ್ತು, ಯೋಜನೆ ನೀಡುವ ಭಾಗಿದಾರಿ ನ್ಯಾಯ ಗ್ಯಾರಂಟಿ, ಕನಿಷ್ಠ ಬೆಂಬಲ ಬೆಲೆ ಗ್ಯಾರಂಟಿ, ಇದನ್ನೇ ಕಾನೂನತ್ಮಕವಾಗಿಸುವ ಗ್ಯಾರಂಟಿ, ದೇಶದ ಯುವಕರಿಗೆ ಕೌಶಲ್ಯ ತರಬೇತಿ ಕೊಟ್ಟು 1 ಲಕ್ಷ ರು. ಅವರಿಗೆ ಕೊಟ್ಟು ಉದ್ಯಮಶೀಲರಾಗುವಂತಹ ಯುವನ್ಯಾಯ ಗ್ಯಾರಂಟಿ, ಮಹಿಳಾ ಗ್ಯಾರಂಟಿ ಹೀಗೆ ಇನ್ನೂ ಹಲವು ಗ್ಯಾರಂಟಿಗಳೊಂದಿಗೆ ಲೋಕ ಸಮರದಲ್ಲಿ ಹೆಚ್ಚಿನ ಪ್ರಾಬಲ್ಯ ಮೆರೆಯುತ್ತೇವೆಂದರು.