ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಹೌದಾ? ನಮ್ಮ ರಾಜ್ಯದಲ್ಲಿ ಅನ್ಯ ಭಾಷಿಗರು ಎಷ್ಟಿದ್ದಾರೆ?
ಬೆಂಗಳೂರು: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕನ್ನಡ ನಮ್ಮ ರಾಜ್ಯದ ಆಡಳಿತ ಭಾಷೆ ಕೂಡಾ ಹೌದು. ದೇಶದ ಅಭಿವೃದ್ದಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿರುವ ಕರ್ನಾಟಕದಲ್ಲಿ ಕನ್ನಡಿಗರು ಮಾತ್ರವಲ್ಲ, ಬೇರೆ ಭಾಷಿಕರು ಜೀವನ ನಡೆಸುತ್ತಿದ್ದಾರೆ. ನಾವು ಕನ್ನಡಿಗರಲ್ಲವೇ, ವಿಶಾಲ ಹೃದಯದವರು... ಬನ್ನಿ ನಾವಿಂದು, ನಮ್ಮ ರಾಜ್ಯದಲ್ಲಿ ಕನ್ನಡ ಸೇರಿದಂತೆ ಯಾವ ಯಾವ ಭಾಷಿಕರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂದು ನೋಡೋಣ...

1. ಕನ್ನಡ:
ಮೊದಲೇ ಹೇಳಿದಂತೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ನಮ್ಮ ರಾಜ್ಯದ ಬಹುತೇಕ ಮಂದಿಯ ತಾಯ್ನುಡಿ ಕನ್ನಡ. ನಮ್ಮ ಕರುನಾಡಿನಲ್ಲಿ ಶೇಕಡ 66.5% ಮಂದಿ ಕನ್ನಡವನ್ನೇ ಮಾತನಾಡುತ್ತಾರೆ. ಇದು ಜನಗಣತಿಯ ವರದಿಯಿಂದ ತಿಳಿದು ಬಂದಿದೆ.
2. ಉರ್ದು:
ಕನ್ನಡದ ಬಳಿಕ ನಮ್ಮ ರಾಜ್ಯದಲ್ಲಿ ಅತಿಹೆಚ್ಚು ಮಾತನಾಡುವ ಭಾಷೆ ಉರ್ದು. ಮುಸಲ್ಮಾನರು ಹೆಚ್ಚಾಗಿ ಉರ್ದುವಿನಲ್ಲಿ ಮಾತನಾಡುವುದನ್ನು ನಾವೆಲ್ಲರೂ ನೋಡಿರುತ್ತೇವೆ. ನಮ್ಮ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡ 10.8% ಮಂದಿ ಉರ್ದು ಮಾತನಾಡುತ್ತಾರೆ.
3. ತೆಲಗು:
ಕರ್ನಾಟಕವು ನೆರೆಯ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಜತೆ ಗಡಿ ಹಂಚಿಕೊಂಡಿದೆ. ಬಳ್ಳಾರಿ, ಪಾವಗಡ ಸೇರಿದಂತೆ ಹಲವು ಭಾಗಗಳಲ್ಲಿ ತೆಲುಗು ಭಾಷೆಯ ಪ್ರಭಾವವಿದೆ. ನಮ್ಮ ರಾಜ್ಯದ 5.8% ಮಂದಿ ತೆಲುಗು ಮಾತನಾಡುತ್ತಾರೆ.
4. ತಮಿಳು:
ತಮಿಳುನಾಡಿನ ಮಾತೃಭಾಷೆಯಾಗಿರುವ ತಮಿಳು, ನಮ್ಮ ರಾಜ್ಯದಲ್ಲಿ ಮಾತನಾಡುವ 4ನೇ ದೊಡ್ಡ ಭಾಷೆ ಎನಿಸಿದೆ. ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ತಮಿಳು ಮಾತನಾಡುವವರನ್ನು ನಾವು ಕಾಣಬಹುದಾಗಿದೆ. ರಾಜ್ಯದಲ್ಲಿ ಶೇ.3.5% ಮಂದಿ ತಮಿಳು ಭಾಷಿಕರಿದ್ದಾರೆ.
5. ಮರಾಠಿ:
ಉತ್ತರ ಕರ್ನಾಟಕದ ಬೆಳಗಾವಿ ಭಾಗಗಳಲ್ಲಿ ಆಗಾಗ ಗಡಿ, ಭಾಷೆ ವಿಚಾರದಲ್ಲಿ ಗಲಾಟೆಗಳಾಗುವುದು ಸಾಮಾನ್ಯ ಜನರಿಗೂ ಗೊತ್ತಿದೆ. ಉತ್ತರ ಕರ್ನಾಟಕದ ಬಹುತೇಕ ಗಡಿಭಾಗಗಳಲ್ಲಿ ಕನ್ನಡ ಪ್ರೀತಿಸುವ ಮರಾಠಿ ಭಾಷಿಕರೂ ಇದ್ದಾರೆ. ಜನಗಣತಿಯ ವರದಿ ಪ್ರಕಾರ ನಮ್ಮ ರಾಜ್ಯದಲ್ಲಿ 3.4% ಮಂದಿ ಮರಾಠಿ ಭಾಷಿಕರು ಇದ್ದಾರೆ.
6. ಹಿಂದಿ:
ದೇಶದ ಆಡಳಿತ ಭಾಷೆಗಳಲ್ಲಿ ಒಂದಾಗಿರುವ ಹಿಂದಿ ಭಾಷೆಯನ್ನು ನಮ್ಮ ರಾಜ್ಯದಲ್ಲಿ ಬಳಸುವ ಮಂದಿ ಕೇವಲ 3.3% ಮಾತ್ರ. ಕನ್ನಡಿಗರ ಮೇಲೆ ಹಿಂದಿ ಹೇರಿಕೆ ವಿಚಾರದ ಕುರಿತಂತೆ ಕನ್ನಡಪರ ಸಂಘಟನೆಗಳ ಹೋರಾಟವನ್ನು ನಾವು ನೀವೆಲ್ಲರೂ ನೋಡಿದ್ದೇವೆ. ಹಿಂದಿ ಯಾವುತ್ತೂ ನಮ್ಮ ರಾಷ್ಟ್ರ ಭಾಷೆಯಲ್ಲ ಎನ್ನುವುದು ನೆನಪಿನಲ್ಲಿರಲಿ.
7. ಕೊಂಕಣಿ:
ಗೋವಾ ರಾಜ್ಯದ ಅಧಿಕೃತ ಆಡಳಿತ ಭಾಷೆಯಾಗಿರುವ ಕೊಂಕಣಿಯನ್ನು ನಮ್ಮ ರಾಜ್ಯದ ಕರಾವಳಿ ಭಾಗದ ಮಂದಿಯೂ ಮಾತನಾಡುತ್ತಾರೆ. ಮಂಗಳೂರಿನ ಭಾಗದಲ್ಲಿ ಕೊಂಕಣಿಯ ಬಳಕೆ ನಮ್ಮ ರಾಜ್ಯದಲ್ಲಿ ಹೆಚ್ಚಿದೆ. ನಮ್ಮ ರಾಜ್ಯದಲ್ಲಿ ಕೊಂಕಣಿ ಬಳಸುವವರ ಸಂಖ್ಯೆ ಶೇಕಡ 1.3%.
8. ಮಲೆಯಾಳಂ:
ಕೇರಳ ಹಾಗೂ ಪಾಂಡಿಚೆರಿಯ ಅಧಿಕೃತ ಆಡಳಿತ ಭಾಷೆಯಾಗಿರುವ ಮಲೆಯಾಳಂ, ದಕ್ಷಿಣ ಕರ್ನಾಟಕದಲ್ಲಿ ಕೇರಳದ ಜತೆ ಗಡಿ ಹಂಚಿಕೊಂಡಿರುವ ಭಾಗಗಳಲ್ಲಿ ಮಲೆಯಾಳಂನ ಪ್ರಭಾವವಿದೆ. ನಮ್ಮ ರಾಜ್ಯದಲ್ಲಿ ಮಲೆಯಾಳಿ ಭಾಷಿಕರ ಸಂಖ್ಯೆ 1.3% ಇದೆ.
9. ಗುಜರಾತಿ:
ವ್ಯಾಪರ ವಹಿವಾಟು ಮಾಡುವ ಉದ್ದೇಶದಿಂದ ನಮ್ಮ ರಾಜ್ಯಕ್ಕೆ ಬಂದು ಬದುಕು ಕಟ್ಟಿಕೊಂಡವರ ಪೈಕಿ ಗುಜರಾತಿಗಳು ಇದ್ದಾರೆ. ನಮ್ಮ ಕರ್ನಾಟಕದಲ್ಲಿ ಗುಜರಾತಿ ಭಾಷೆ ಮಾತನಾಡುವವರ ಸಂಖ್ಯೆ 0.2% ಇದೆ.
8. ಇತರೆ ಭಾಷಿಕರ ಪ್ರಮಾಣ ಶೇಕಡ 3.9:
ಮೇಲ್ಕಂಡ ಭಾಷೆಗಳನ್ನು ಹೊರತುಪಡಿಸಿ, ನಮ್ಮ ರಾಜ್ಯದಲ್ಲಿ ತುಳು, ಕೊಡವ ಸೇರಿದಂತೆ ಇನ್ನಿತರ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಶೇಕಡ 3.9% ಇದೆ. ಎಲ್ಲಾ ಭಾಷಿಕರು ನಾವೆಲ್ಲರೂ ಕರ್ನಾಟಕದವರು ಎಂದು ಎದೆಯುಬ್ಬಿಸಿ ಜೀವನ ಸಾಗಿಸುತ್ತಿದ್ದಾರೆ.