ಹೆಂಡ್ತಿಗೆ ಶಾಪಿಂಗ್ ಅಸಿಸ್ಟಂಟ್ ಆದ ಮೈಸೂರು ಮಹಾರಾಜ; ಇದೇ ಅಲ್ವಾ ಪ್ರೀತಿ ಅಂದ್ರೆ
ಅಯೋಧ್ಯೆ ರಾಮನ ಪ್ರತಿಷ್ಠಾಪನಾ ಸಂಭ್ರಮದಲ್ಲಿ ಭಾಗಿಯಾದ ಮೈಸೂರು ಮಹಾರಾಜ ಯದುವೀರ್ ಒಡೆಯರ್, ಬಳಿಕ ಅಲ್ಲಿ ಪತ್ನಿಯ ಶಾಪಿಂಗ್ ಅಸಿಸ್ಟಂಟ್ ಆಗಿದ್ರಂತೆ…. ಹೀಗಂತ ಮಹಾರಾಣಿ ತ್ರಿಷಿಕಾ ಕುಮಾರಿ ಹೇಳ್ಕೊಂಡಿದ್ದಾರೆ.
ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗಿಯಾಗಿರುವ ಮೈಸೂರು ಮಹಾರಾಜ ಶ್ರೀ ಯದುವೀರ್ ಚಾಮಾರಾಜ ಒಡೆಯರ್ (Yaduveer Krishnadatta Chamaraja Wadeyar) ದಂಪತಿಗಳು ಅಯೋಧ್ಯೆಯ ಸುತ್ತಮುತ್ತ ಶಾಪಿಂಗ್ ಮಾಡಿ ಸಂಭ್ರಮಿಸಿದ್ದಾರೆ.
ಹೌದು ಜನವರಿ 22 ರಂದು ಪತ್ನಿ ತೃಷಿಕಾ ಕುಮಾರಿ (Trishika Kumari) ಒಡೆಯರ್ ಜೊತೆ ಅಯೋಧ್ಯೆಗೆ ತೆರಳಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಮೈಸೂರು ಮಹಾರಾಜ, ಅಲ್ಲಿ ಕಳೆದ ಸುಂದರ ಕ್ಷಣಗಳನ್ನು ಮೆಲುಕು ಹಾಕಿದ್ದರು.
ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದ ಯದುವೀರ್ ಪವಿತ್ರ ಶ್ರೀರಾಮಜನ್ಮಭೂಮಿ ಕ್ಷೇತ್ರ ಶ್ರೀ ಅಯೋಧ್ಯಾ (Ayodhya) ಧಾಮದಲ್ಲಿ ನೂತನವಾಗಿ ನಿರ್ಮಿಸಿರುವ ಆಲಯದಲ್ಲಿ ನಡೆದ ಶ್ರೀ ರಾಮಚಂದ್ರ ಸ್ವಾಮಿಯವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ನನ್ನ ಧರ್ಮಪತ್ನಿ ಸೌಭಾಗ್ಯವತಿ ಮಹಾರಾಣಿ ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರವರ ಸಹಿತ ಭಾಗವಹಿಸಲಾಯಿತು ಹಾಗು ಶ್ರೀ ಕ್ಷೇತ್ರ ಅಯೋಧ್ಯಾ ಧಾಮದ ಪ್ರಮುಖ ಆಲಯಗಳಿಗೂ ಭೇಟಿ ನೀಡಲಾಯಿತು ಎಂದು ಬರೆದುಕೊಂಡಿದ್ದರು.
ಇದರ ಜೊತೆಗೆ ಎಲ್ಲರಿಗೂ ಶ್ರೀ ರಾಮಚಂದ್ರ ಸ್ವಾಮಿಯವರು ಸಮಸ್ತ ಸನ್ಮಂಗಳವನ್ನುಂಟು ಮಾಡಲಿ ಎಂದು ಶ್ರೀ ಸ್ವಾಮಿಯವರಲ್ಲಿ ಪ್ರಾರ್ಥಿಸಲಾಯಿತು ಎಂದು ಕ್ಯಾಪ್ಶನ್ ಹಾಕಿ, ದೇಗುಲಗಳ ದರ್ಶನ ಮಾಡಿದ ಫೋಟೋ, ರಾಮಲಲ್ಲನ ಫೋಟೊಗಳನ್ನು ಹಂಚಿಕೊಂಡಿದ್ದರು. ಇವರ ನಡೆಗೆ ದೇಶಾದ್ಯಂತ ಮೆಚ್ಚುಗೆಯನ್ನೂ ಸಹ ಸೂಚಿಸಲಾಗಿತ್ತು.
ಇದೀಗ ಮಹಾರಾಣಿ ತೃಷಿಕಾ ಕುಮಾರಿ ಒಡೆಯರ್ ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಅಯೋಧ್ಯೆಯಲ್ಲಿ ಕಳೆದ ಸುಂದರ ಸಮಯದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಒಂದು ಫೋಟೋಗೆ ಯದುವೀರ್ ಅವರನ್ನು ಶಾಪಿಂಗ್ ಅಸಿಸ್ಟಂಟ್ ಎಂದು ಕರೆದಿದ್ದಾರೆ.
ಹೌದು ಮಹಾರಾಜ ಯದುವೀರ್ ಒಡೆಯರ್ ಅವರು ಕೈಗಳಲ್ಲಿ ಹಲವಾರು ಬ್ಯಾಗ್ ಹಿಡಿದಿರುವ ಫೋಟೋ ಒಂದನ್ನು ಹಂಚಿಕೊಂಡಿರುವ ತೃಷಿಕಾ ಕುಮಾರಿ, ಶಾಪಿಂಗ್ ಅಸಿಸ್ಟಂಟ್ (Shopping Assistant) ಹೊಂದಿರೋದು ಯಾವಾಗಲೂ ಲಾಭವೇ ಎಂದು ಬರೆದುಕೊಂಡಿದ್ದಾರೆ. ಇದು ಅವರಿಬ್ಬರ ನಡುವಿನ ಮುದ್ದಾದ ಪ್ರೀತಿಯನ್ನು ತೋರಿಸಿತ್ತಿರೋದಂತೂ ನಿಜ.
ಜೊತೆಗೆ ತೃಷಿಕಾ ಕುಮಾರಿ, ಅಯೋಧ್ಯೆಯಲ್ಲಿ ಗಾಜಿನ ಬಳೆ ಮಾಡುವವರ ಬಳಿ ತೆರಳಿ, ಬಳೆ ಮಾಡಿಸಿ, ತಾವು ತೊಟ್ಟಿದ್ದಾರೆ, ಅಲ್ಲದೇ ಅಲ್ಲಿನ ಅದರ ವಿಡಿಯೋವನ್ನು ಸಹ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮೈಸೂರು ಮಹಾರಾಜ ಮತ್ತು ಮಹಾರಾಣಿಯ ಪಟ್ಟ ಹೊಂದಿದ್ದರೂ ಸಹ, ಹೆಚ್ಚಾಗಿ ಸಾಮಾನ್ಯರಂತೆ ದೇಗುಲ ಭೇಟಿ ಮಾಡುತ್ತಾ, ಬೀದಿ ಬೀದಿ ತಿರುಗಿ ಶಾಪಿಂಗ್ ಮಾಡುವ ಇವರನ್ನು ಕಂಡರೆ ಕನ್ನಡಿಗರಿಗಂತೂ ಹೆಮ್ಮೆ.