ಚಿತ್ರೀಕರಣದ ಮುನ್ನ ಎಲ್ರೂ ಲಸಿಕೆ ಹಾಕಿಸಿಕೊಳ್ಳಿ: ಸಚಿವ ಸುಧಾಕರ್ ಮನವಿ
ಬೆಂಗಳೂರು(ಜೂ.09): ಸೆಮಿ ಲಾಕ್‌ಡೌನ್ ಮುಕ್ತಾಯಗೊಂಡು ಎಲ್ಲಾ ಕ್ಷೇತ್ರಗಳು ಎಂದಿನಂತೆ ಆರಂಭವಾಗುತ್ತದೆ. ಹೀಗಾಗಿ ಚಿತ್ರರಂಗ ಕೂಡ ಆರಂಭಗೊಂಡು, ಚಿತ್ರೀಕರಣಕ್ಕೆ ತೆರಳುವ ಮುನ್ನ ಎಲ್ಲರೂ ಆದಷ್ಟು ಬೇಗ ಎರಡು ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದು ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದ್ದಾರೆ.
ಚಿತ್ರರಂಗದ ಮಂದಿಗಾಗಿಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಡಾ.ಕೆ. ಸುಧಾಕರ್
ಕೋವಿಡ್ ಲಸಿಕೆ ಬಗ್ಗೆ ಜನರಲ್ಲಿ ಇನ್ನೂ ಅನುಮಾನಗಳಿವೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ. ಆರೋಗ್ಯ ತುಂಬಾ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲರಿಗೂ ಲಸಿಕೆ ಪೂರೈಸುತ್ತಿದೆ. ಚಿತ್ರರಂಗದಲ್ಲಿ ಇರುವ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಸರ್ಕಾರ ಬದ್ಧವಾಗಿದೆ. ಹೀಗಾಗಿ ಸಿನಿಮಾ ಮಂದಿ ಸಿನಿಮಾಗಳ ಶೂಟಿಂಗ್ ಕೆಲಸಗಳಿಗೆ ತೆರಳುವ ಮುನ್ನ ಎರಡು ಡೋಸ್ ಲಸಿಕೆ ಹಾಕಿಸಿಕೊಳ್ಳಿ. ಸಾಮಾನ್ಯ ಜನರಲ್ಲಿ ನೀವು ಲಸಿಕೆ ಬಗ್ಗೆ ಅರಿವು ಮೂಡಿಸಿ. ಸೆಲೆಬ್ರಿಟಿಗಳು ಜನರಲ್ಲಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದರೆ ಉತ್ತಮ ರೀತಿಯಲ್ಲಿ ಪರಿಣಾಮ ಬೀರಲಿದೆ. ಜನರ ಆರೋಗ್ಯ ರಕ್ಷಣೆಗೆ ನಮ್ಮ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’ ಎಂದು ಹೇಳಿದ ಸುಧಾಕರ್
ಇದೇ ಸಂದರ್ಭದಲ್ಲಿ ಹಾಜರಿದ್ದ ಸಚಿವ ಸಿ.ಸಿ. ಪಾಟೀಲ್ ಮಾತನಾಡಿ, ‘ಚಿತ್ರರಂಗದಲ್ಲಿ ತೊಡಗಿಸಿಕೊಂಡವರಿಗೆ ಆದ್ಯತೆ ಮೇರೆಗೆ ಉಚಿತ ಲಸಿಕೆ ನೀಡುತ್ತಿದ್ದೇವೆ. ಉದ್ಯಮ ಬೇಡಿಕೆಗಳನ್ನು ಆದಷ್ಟುಈಡೇರಿಸುತ್ತೇವೆ’ ಎಂದು ಭರವಸೆ ನೀಡಿದರು.
ಉಚಿತ ಕೋವಿಡ್ ಲಸಿಕೆ ನೀಡುತ್ತಿರುವ ಸರ್ಕಾರಕ್ಕೆ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್ ಕೃತಜ್ಞತೆ ಸಲ್ಲಿಸಿದರು. ಬಿಬಿಎಂ ಆಯುಕ್ತ ಗೌರವ್ ಗುಪ್ತಾ, ವಿಶೇಷ ಅಧಿಕಾರಿ ರಾಜೇಂದ್ರ ಚೋಳನ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎನ್ ಸುರೇಶ್, ನಟಿ ತಾರಾ, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಉಚಿತ ಲಸಿಕಾ ಶಿಬಿರದ ನೋಡಲ್ ಅಧಿಕಾರಿ ಹಾಗೂ ಚಲನಚಿತ್ರ ನಿರ್ದೇಶಕಿ ರೂಪಾ ಅಯ್ಯರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಹಾಜರಿದ್ದರು.