- Home
- Karnataka Districts
- Mysuru
- ಮಾದರಿಯಾದ ಸಚಿವ ಯತೀಂದ್ರ ನಡೆ.. ಚಾಮುಂಡಿ ಬೆಟ್ಟಕ್ಕೆ ಬಂದರೂ ದರ್ಶನ ಪಡೆಯಲಿಲ್ಲ! ಯಾಕೆ ಗೊತ್ತಾ?
ಮಾದರಿಯಾದ ಸಚಿವ ಯತೀಂದ್ರ ನಡೆ.. ಚಾಮುಂಡಿ ಬೆಟ್ಟಕ್ಕೆ ಬಂದರೂ ದರ್ಶನ ಪಡೆಯಲಿಲ್ಲ! ಯಾಕೆ ಗೊತ್ತಾ?
ಮೊದಲ ಆಷಾಢ ಶುಕ್ರವಾರದಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಗಣ್ಯರ ದರ್ಶನಕ್ಕೆ ನಿಗದಿತ ಸಮಯ ಮೀರಿದ್ದರಿಂದ ನಿಯಮ ಪಾಲಿಸಿ ದರ್ಶನ ಪಡೆಯದೆ ಹಿಂತಿರುಗಿದರು. ಜನಸಾಮಾನ್ಯರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ನಿರ್ಧಾರ ಕೈಗೊಂಡಿದ್ದಾರೆ.

ದೇವಸ್ಥಾನಕ್ಕೆ ಬಂದರೂ ಸಿಗದ ದರ್ಶನ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಇಂದು ಮೊದಲ ಆಷಾಢ ಶುಕ್ರವಾರದ ಸಂಭ್ರಮ ಮನೆಮಾಡಿದೆ. ಸಾವಿರಾರು ಭಕ್ತರು ಬೆಟ್ಟಕ್ಕೆ ಹರಿದು ಬರುತ್ತಿರುವ ಈ ಸಂದರ್ಭದಲ್ಲಿ, ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ನಿಯಮ ಪಾಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಯತೀಂದ್ರ ಸಿದ್ದರಾಮಯ್ಯ ಅವರು ದೇವರ ದರ್ಶನ ಪಡೆಯದೆ ವಾಪಸ್ ಬಂದಿದ್ದಾರೆ. ಹೌದು, ದೇವಸ್ಥಾನಕ್ಕೆ ಬಂದಿದ್ದರೂ ಅವರು ಗರ್ಭಗುಡಿಯತ್ತ ಹೋಗದೆ ಹೊರಗಿನಿಂದಲೇ ಮರಳಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಮಯದ ಮಿತಿ ಮತ್ತು ಜನಸಾಮಾನ್ಯರ ಹಿತ.
ನಿಯಮ ಉಲ್ಲಂಘಿಸಲು ನಿರಾಕರಣೆ
ಆಷಾಢ ಶುಕ್ರವಾರದಂದು ಭಕ್ತರ ದಟ್ಟಣೆ ಹೆಚ್ಚಿರುವುದರಿಂದ ಜಿಲ್ಲಾಡಳಿತವು ಗಣ್ಯರ (VIP) ದರ್ಶನಕ್ಕೆ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ ಕಾಲಾವಕಾಶ ನೀಡಿತ್ತು. ಆದರೆ ಯತೀಂದ್ರ ಸಿದ್ದರಾಮಯ್ಯ ಅವರು ದೇವಸ್ಥಾನಕ್ಕೆ ತಲುಪುವಾಗ ನಿಗದಿತ ಸಮಯ ಮೀರಿತ್ತು. ನಿಯಮದ ಪ್ರಕಾರ 10 ಗಂಟೆಯ ನಂತರ ಗಣ್ಯರ ದರ್ಶನಕ್ಕೆ ಅವಕಾಶವಿರಲಿಲ್ಲ. ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಯತೀಂದ್ರ ಅವರು ತಮಗಾಗಿ ನಿಯಮ ಸಡಿಲಿಸಲು ಒಪ್ಪದೆ, ದರ್ಶನ ಪಡೆಯದೆ ಮರಳಲು ನಿರ್ಧರಿಸಿದರು.
ಮಾಧ್ಯಮಗಳಿಗೆ ಯತೀಂದ್ರ ಸ್ಪಷ್ಟನೆ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವೇ ನಿಯಮಗಳನ್ನು ಮಾಡಿ, ನಾವೇ ಅದನ್ನು ಉಲ್ಲಂಘಿಸುವುದು ಸರಿಯಲ್ಲ. ನಾನು ತಡವಾಗಿ ಬಂದ ಕಾರಣ ದರ್ಶನ ಮಾಡಲಿಲ್ಲ. ನಾವು ಮಧ್ಯದಲ್ಲಿ ದರ್ಶನಕ್ಕೆ ಹೋದರೆ ಸರತಿ ಸಾಲಿನಲ್ಲಿ ನಿಂತಿರುವ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಅವರ ಹಿತದೃಷ್ಟಿಯಿಂದ ನಾನು ದರ್ಶನ ಪಡೆಯದಿರಲು ತೀರ್ಮಾನಿಸಿದೆ ಎಂದು ತಿಳಿಸಿದರು.
ಗಣ್ಯರಿಗೆ ಮನವಿ
ಇದೇ ವೇಳೆ ಇತರ ಗಣ್ಯ ವ್ಯಕ್ತಿಗಳಿಗೂ ಮನವಿ ಮಾಡಿದ ಯತೀಂದ್ರ ಅವರು, ಶುಕ್ರವಾರ, ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10 ಗಂಟೆಯೊಳಗೆ ಬಂದರೆ ಯಾರಿಗೂ ತೊಂದರೆಯಾಗುವುದಿಲ್ಲ. ಜನಸಾಮಾನ್ಯರಿಗೆ ತೊಂದರೆ ಕೊಡದೆ ದರ್ಶನ ಪಡೆಯುವುದು ಎಲ್ಲರ ಕರ್ತವ್ಯ ಎಂದಿದ್ದಾರೆ.
ತಮ್ಮ ಅಧಿಕಾರ ಅಥವಾ ಪ್ರಭಾವವನ್ನು ಬಳಸದೆ, ಸಾಮಾನ್ಯ ಭಕ್ತರಂತೆ ನಿಯಮಕ್ಕೆ ತಲೆಬಾಗಿದ ಯತೀಂದ್ರ ಸಿದ್ದರಾಮಯ್ಯ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

