ನಕಲಿ ಐಫೋನ್ 16 ಬಗ್ಗೆ ಇರಲಿ ಎಚ್ಚರ, ಆರ್ಡರ್ ಮಾಡುವಾಗ ಇದನ್ನೂ ಚೆಕ್ ಮಾಡಿ!
ಐಫೋನ್ 16 ಪ್ರೊ ಮಾಡೆಲ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಕಾಯುತ್ತಿರುವ ಗ್ರಾಹಕರು ತಾವು ಖರೀದಿಸುತ್ತಿರುವುದು ಅಸಲಿಯೋ ಅಥವಾ ನಕಲಿಯೋ ಎಂದು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಡೂಪ್ಲೇಕೇಟ್ ಪತ್ತೆ ಹಚ್ಚುವುದು ಹೇಗೆ? ಆರ್ಡರ್ ಮಾಡುವ ಮುನ್ನ ಈ ವಿಚಾರ ಪರಿಶೀಲಿಸಿಕೊಳ್ಳಿ
ಐಫೋನ್ 16 ಪ್ರೊ (iPhone 16 Pro) ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ (iPhone 16 Pro Max) ಸ್ಮಾರ್ಟ್‌ಫೋನ್‌ಗಳನ್ನು ಆ್ಯಪಲ್ ಸೆಪ್ಟೆಂಬರ್ 9 ರಂದು ಅನಾವರಣ ಮಾಡಿದೆ. ಐಫೋನ್ 16 ಪ್ರೊ ಮಾದರಿಗಳಿಗೆ ಮುಂಗಡ ಬುಕಿಂಗ್‌ಗಳು ಶುಕ್ರವಾರ, ಸೆಪ್ಟೆಂಬರ್ 13 ರಂದು ಆರಂಭಗೊಂಡಿದೆ. ಹೊಸ ಐಫೋನ್ 16 ವಿತರಣೆಯು ಸೆಪ್ಟೆಂಬರ್ 20 ರಿಂದ ಪ್ರಾರಂಭವಾಗುತ್ತದೆ.
ಪ್ರಸ್ತುತ, ಐಫೋನ್ 16 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಅನ್ನು ಪ್ರಪಂಚದಲ್ಲಿ ಎಲ್ಲಿಯೂ ಖರೀದಿಸಲು ಸಾಧ್ಯವಿಲ್ಲ. ಸೆಪ್ಟೆಂಬರ್ 20 ರ ನಂತರವೇ ಐಫೋನ್ 16 ಮೊಬೈಲ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಗ್ರಾಹಕರಂತೆ ಮಾರಾಟಗಾರರು ಸಹ ಈ ಮೊಬೈಲ್‌ಗಳ ಮಾರಾಟ ಪ್ರಾರಂಭವಾಗಲು ಕಾಯುತ್ತಿದ್ದಾರೆ. ಆದರೆ, ವಂಚಕರು ಈಗಾಗಲೇ ಐಫೋನ್ ಅಭಿಮಾನಿಗಳನ್ನು ವಂಚಿಸಲು ಸಿದ್ಧರಾಗಿದ್ದಾರೆ.
ವಂಚಕರು ಐಫೋನ್ 16 ನಕಲಿ ಫೋನ್‌ಗಳನ್ನು ಮಾರಾಟ ಮಾಡಲು ಸಿದ್ಧರಾಗುತ್ತಿದ್ದಾರೆ ಎಂದು ಇನ್‌ಸ್ಟಾಗ್ರಾಮ್ ರೀಲ್ ವೀಡಿಯೊವೊಂದು ಬಹಿರಂಗಪಡಿಸಿದೆ. ವೈರಲ್ ಆಗಿರುವ ಈ ವೀಡಿಯೊದಲ್ಲಿ, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಮೊಬೈಲ್‌ಗಳಿಗಾಗಿ ನಕಲಿ ಸೀಲ್‌ಗಳನ್ನು ತೋರಿಸಲಾಗಿದೆ.
ಅಕ್ರಮವಾಗಿ ಆಮದು ಮಾಡಿಕೊಳ್ಳಲಾದ ಬಾಕ್ಸ್ ತೆರೆದ ಫೋನ್‌ಗಳನ್ನು ಮತ್ತೆ ಪ್ಯಾಕ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ವಂಚನೆ ಗುಂಪು ಸಿದ್ಧವಾಗಿದೆ. ಇದಕ್ಕಾಗಿ ನಕಲಿ ಸೀಲ್‌ಗಳನ್ನು ಬಳಸಲಾಗುತ್ತದೆ. ಅವುಗಳು ಅಸಲಿ ಆಪಲ್ ಸೀಲ್‌ನಂತೆಯೇ ಇರುತ್ತವೆ. ಆದ್ದರಿಂದ ಐಫೋನ್ ಖರೀದಿದಾರರು ಮೂಲ ಆಪಲ್ ಐಫೋನ್ ಸೀಲ್ ಇದೆಯೇ ಎಂದು ಪರಿಶೀಲಿಸಬೇಕು.
ವಂಚಕರು ಹೆಚ್ಚಾಗಿ ಐಫೋನ್ ಪ್ರೊ ಮಾದರಿಗಳನ್ನು ಅಕ್ರಮವಾಗಿ ಆಮದು ಮಾಡಿಕೊಂಡು ಭಾರತದಲ್ಲಿ ಉತ್ತಮ ಲಾಭಕ್ಕಾಗಿ ಮಾರಾಟ ಮಾಡುತ್ತಾರೆ. ಗ್ರಾಹಕರು ತಾವು ಖರೀದಿಸುವ ಐಫೋನ್ 16 ಪ್ರೊ ಮಾದರಿಗಳು ಅಸಲಿಯೇ ಎಂದು ತಿಳಿದುಕೊಳ್ಳಲು ಆಪಲ್ ಕಂಪನಿಯು ಆನ್‌ಲೈನ್ ಸೌಲಭ್ಯವನ್ನು ಒದಗಿಸಿದೆ.
https://checkcoverage.apple.com/ ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಖರೀದಿ ದಿನಾಂಕವನ್ನು ಕಂಡುಹಿಡಿಯಬಹುದು. ಗ್ರಾಹಕರಿಗೆ ವಾರಂಟಿ ಮುಕ್ತಾಯ ದಿನಾಂಕಕ್ಕೆ ಒಂದು ವರ್ಷದ ಮೊದಲು ಖರೀದಿ ದಿನಾಂಕ ಇರಬೇಕು. ಉದಾಹರಣೆಗೆ, ಕವರೇಜ್ ಮುಕ್ತಾಯ ದಿನಾಂಕ ಸೆಪ್ಟೆಂಬರ್ 13, 2025 ಆಗಿದ್ದರೆ, ಮೊಬೈಲ್ ಖರೀದಿ ದಿನಾಂಕ ಸೆಪ್ಟೆಂಬರ್ 13, 2024 ಆಗಿರುತ್ತದೆ.
ಐಫೋನ್ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿಯೇ ವಾರಂಟಿಯನ್ನು ಪರಿಶೀಲಿಸಬಹುದು. ಸೆಟ್ಟಿಂಗ್‌ಗಳ ವಿಭಾಗಕ್ಕೆ ಹೋಗಿ, ಅಲ್ಲಿ 'ಜನರಲ್' ಆಯ್ಕೆಮಾಡಿ. ನಂತರ 'About' ವಿಭಾಗದಲ್ಲಿ ಸ್ಕ್ರಾಲ್ ಮಾಡುವ ಮೂಲಕ, ಕೆಳಗೆ ಐಫೋನ್‌ಗಾಗಿ ವಾರಂಟಿ ಮುಕ್ತಾಯ ದಿನಾಂಕವನ್ನು ನೋಡಬಹುದು.