- Home
- Life
- ಯಾರೀಕೆ ಜೇನ್ ದೀಪಿಕಾ ಗ್ಯಾರೆಟ್? ಮಿಸ್ ಯುನಿವರ್ಸ್‌ನ ಮೊಟ್ಟಮೊದಲ Plus Size ಮಾಡೆಲ್‌ಗೆ ಸಿಕ್ತು ಫ್ಯಾನ್ಸ್ ಬೆಂಬಲ!
ಯಾರೀಕೆ ಜೇನ್ ದೀಪಿಕಾ ಗ್ಯಾರೆಟ್? ಮಿಸ್ ಯುನಿವರ್ಸ್‌ನ ಮೊಟ್ಟಮೊದಲ Plus Size ಮಾಡೆಲ್‌ಗೆ ಸಿಕ್ತು ಫ್ಯಾನ್ಸ್ ಬೆಂಬಲ!
Controversy at Miss Universe over Nepalese contestant ಮಿಸ್ ಯುನಿವರ್ಸ್ ಸ್ಪರ್ಧಾ ಕಣ ಈಗ ಭಾರೀ ಚರ್ಚೆಯಲ್ಲಿದೆ. ಅದಕ್ಕೆ ಕಾರಣ ನೇಪಾಳ ಮೂಲದ ಮಾಡೆಲ್ ಜೇನ್ ದೀಪಿಕಾ ಗ್ಯಾರೆಟ್. ಈಕೆಯ ಸ್ಪರ್ಧೆ ಪ್ಲಸ್ ಸೈಜ್ ಮಹಿಳೆಯರು ಅಂದರೆ ಧಡೂತಿ ಮಹಿಳೆಯರ ಸಬಲೀಕರಣದ ದೃಷ್ಟಿಯಲ್ಲಿ ಅತಿದೊಡ್ಡ ಸ್ಟೇಟ್‌ಮೆಂಟ್ ಎಂದೇ ಬಿಂಬಿಸಲಾಗುತ್ತಿದೆ.

2023ರ ಮಿಲ್ ಯುನಿವರ್ಸ್ ಸ್ಪರ್ಧೆಯ ಪ್ರಾಥಮಿಕ ಸುತ್ತಿನ ಸ್ಪರ್ಧೆಗಳು ಈಗಾಗಲೇ ಎಲ್ ಸಲ್ವಾಡೋರ್ ದೇಶದ ಸಾನ್ ಸಲ್ವಾಡೋರ್‌ನಲ್ಲಿ ಆರಂಭವಾಗಿದೆ.
72ನೇ ಆವೃತ್ತಿಯ ಸ್ಪರ್ಧೆಯ ಪ್ರಾಥಮಿಕ ಸುತ್ತಿನ ಬೆನ್ನಲ್ಲಿಯೇ ಪ್ರತಿಷ್ಠಿತ ಬ್ಯೂಟಿ ಪೇಜೆಂಟ್‌ನಲ್ಲಿ ಸ್ಪರ್ಧಿಯೊಬ್ಬರ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.
ನೇಪಾಳ ದೇಶದ ಪರವಾಗಿ ಸ್ಪರ್ಧೆ ಮಾಡುತ್ತಿರುವ ಜೇನ್ ದೀಪಿಕಾ ಗ್ಯಾರೆಟ್, ಈವರೆಗೂ ಇದ್ದ ಮಿಸ್ ಯುನಿವರ್ಸ್‌ನ ಪೂರ್ವಾಗ್ರಹವನ್ನು ದೂರ ಮಾಡುತ್ತಿದ್ದಾರೆ.
ವಿಶ್ವದ ಅತ್ಯಂತ ಪ್ರಖ್ಯಾತ ವಿಶ್ವ ಸುಂದರಿಗಳ ಕಣವಾಗಿರುವ ಮಿಸ್ ಯುನಿವರ್ಸ್‌ನಲ್ಲಿ ಸ್ಪರ್ಧಿಗಳು ತೆಳ್ಳಗೆ, ಜೀರೋ ಸೈಜ್‌ನಲ್ಲಿ ಇರಬೇಕು ಎನ್ನುವ ಪೂರ್ವಾಗ್ರಹವಿದೆ. ಆದರೆ, ಅಚ್ಚರಿ ಎನ್ನುವಂತೆ ಜೇನ್ ದೀಪಿಕಾ ಗ್ಯಾರೆಟ್ ಪ್ಲಸ್ ಸೈಜ್ ಮಹಿಳೆ. ಅಂದರೆ ದಢೂತಿ ದೇಹದ ಮಾಡೆಲ್. ಈಕೆಯ ಸ್ಪರ್ಧೆ ಧಡೂತಿ ಮಹಿಳೆಯರ ಸಬಲೀಕರಣದ ದೃಷ್ಟಿಯಲ್ಲಿ ಅತಿದೊಡ್ಡ ಸ್ಟೇಟ್‌ಮೆಂಟ್ ಎಂದೇ ಬಿಂಬಿಸಲಾಗುತ್ತಿದೆ.
ಜೇನ್ ದೀಪಿಕಾ ಗ್ಯಾರೆಟ್ ಅವರು ಮಿಸ್ ಯೂನಿವರ್ಸ್ ನೇಪಾಳ 2023 ರ ಪ್ಲಸ್-ಸೈಜ್ ವಿಜೇತರಾಗಿ ಹೊರಹೊಮ್ಮಿದ್ದಾರೆ, ಸಾಂಪ್ರದಾಯಿಕ ಸೌಂದರ್ಯದ ಸಂಪ್ರದಾಯವನ್ನು ಅವರು ಒಂದೇ ಕ್ಷಣದಲ್ಲಿ ಛಿದ್ರಗೊಳಿಸಿದ್ದರು.
ನೇಪಾಳದ ಕಠ್ಮಂಡು ಮೂಲದ 22 ವರ್ಷದ ಜೇನ್ ದೀಪಿಕಾ ಗ್ಯಾರೆಟ್, 5 ಅಡಿ 7 ಇಂಚು ಎತ್ತರವಿದ್ದಾರೆ. 80 ಕೆಜಿ ತೂಕ ಹೊಂದಿರುವ ಈಕೆ, ತನ್ನ ಪ್ರತಿಸ್ಪರ್ಧೆಯಲ್ಲಿ ಆತ್ಮವಿಶ್ವಾಸದಿಂದಲೇ ಸ್ಪರ್ಧೆ ಮಾಡಿದ್ದಾರೆ.
ನರ್ಸಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಈಕೆ, ತಮ್ಮ ದೈಹಿಕ ನೋಟದಿಂದ ಮಾತ್ರವಲ್ಲದೆ ನಿರ್ಣಯ ಮತ್ತು ಬುದ್ಧಿವಂತಿಕೆಯಿಂದ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಗುರಿಯಲ್ಲಿದ್ದಾರೆ. ಇವರಿಗೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳ ಬೆಂಬಲವೂ ವ್ಯಕ್ತವಾಗಿದೆ.
ಆಕೆಯ ಕೌಟುಂಬಿಕ ಹಿನ್ನೆಲೆಯ ಬಗ್ಗೆ ವಿವರಗಳು ಬಹಿರಂಗವಾಗಿಲ್ಲವಾದರೂ, ಯಶಸ್ಸಿನ ಕಡೆಗೆ ಆಕೆಯ ಸ್ಪೂರ್ತಿದಾಯಕ ಪ್ರಯಾಣವು ಅನೇಕರಿಗೆ ಸಾಕಷ್ಟು ಸ್ಫೂರ್ತಿ ತುಂಬಲಿದೆ.
ಜೇನ್ ದೀಪಿಕಾ ಗ್ಯಾರೆಟ್, ಅಮೇರಿಕನ್-ನೇಪಾಳಿ ನರ್ಸ್ ಆಗಿದ್ದು, ಬ್ಯುಸಿನೆಸ್ ಡೆವಲಪರ್ ಮತ್ತು ಬ್ಯೂಟಿ ಕ್ವೀನ್ ಕೂಡ ಆಗಿದ್ದಾರೆ. ವೈವಿಧ್ಯಮಯ ಹಿನ್ನೆಲೆಯನ್ನು ಹೊಂದಿರುವ ಈಕೆ, ಈಗ ಮಿಸ್ ಯುನಿವರ್ಸ್ ಕಣದಲ್ಲಿ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ.
ಅಮೆರಿಕದಲ್ಲಿಯೇ ಜನಿಸಿರುವ ಗ್ಯಾರೆಟ್, ವಾಷಿಂಗ್ಟನ್ ಡಿಸಿಯಲ್ಲಿ ವಾಹಸ್ತವ್ಯ ಮಾಡಿದ್ದರು. ಅವರು ಏಪ್ರಿಲ್ 2018 ರಿಂದ ಮೇ 2018 ರವರೆಗೆ ನೇಪಾಳದಲ್ಲಿ ಯಂಗ್ ಲೈಫ್‌ಗೆ ಬೋಧಕರಾಗಿ ತಮ್ಮ ಸಮಯವನ್ನು ಕಳೆದಿದ್ದಾರೆ.
ಇದರಲ್ಲಿ ಪಡೆದ ಅನುಭವವೇ ಅವರಿಗೆ ಮಿಸ್ ಯುನಿವರ್ಸ್ ನೇಪಾಳ 2023ಯಲ್ಲಿ ಸ್ಪರ್ಧೆ ಮಾಡುವಂತೆ ಪ್ರೇರೇಪಿಸಿದ್‌ದು ಮಾತ್ರವಲ್ಲದೆ, ಎಲ್ಲಾ ಸವಾಲುಗಳನ್ನು ದಿಟ್ಟವಾಗಿ ಎದುರಿಸುವ ಶಕ್ತಿ ನೀಡಿತ್ತು.
ನವೆಂಬರ್ 15, ಬುಧವಾರದಂದು ನಡೆದ ಪ್ರಾಥಮಿಕ ಮಿಸ್ ಯುನಿವರ್ಸ್ ಸುತ್ತಿನಲ್ಲಿ, ಗ್ಯಾರೆಟ್ ಕ್ಯಾಟ್‌ವಾಕ್‌ನಲ್ಲಿ ತನ್ನ ಸೊಬಗನ್ನು ತೋರಿಸಿದ್ದು ಮಾತ್ರವಲ್ಲದೆ, ಈಜುಡುಗೆ ಸುತ್ತಿನಲ್ಲಿ ಬಹಳ ಆತ್ಮವಿಶ್ವಾಸದಿಂದ ಕಂಡರು.
ಗ್ಯಾರೆಟ್ ಭಾಗವಹಿಸುವಿಕೆಯು ಕೇವಲ ಒಂದು ಫ್ಯಾಶನ್ ಶೋ ಮಾತ್ರವೇ ಆಗಿರಲಿಲ್ಲ. ಇದು ಪ್ಲಸ್ ಸೈಜ್ ಮಹಿಳೆಯರ ಸಬಲೀಕರಣದ ಪ್ರಬಲ ಹೇಳಿಕೆ ಎಂದು ತಿಳಿಸಲಾಗಿದೆ.
ಸೌಂದರ್ಯ ಸ್ಪರ್ಧೆಗಳಲ್ಲಿ ಸಂಪ್ರದಾಯಬದ್ಧವಾಗಿ ಬೇರೂರಿರುವ ನಿರೀಕ್ಷೆಗಳಿಗೆ ಸವಾಲು ಹಾಕುವ ಮೂಲಕ ಗ್ಯಾರೆಟ್, ಸೌಂದರ್ಯಕ್ಕೆ ತೆಳ್ಳಗೆ ಇರೋದು ಮುಖ್ಯವಲ್ಲ ಎಂದು ಜಗತ್ತಿಗೆ ತೋರಿಸಿದ್ದಾರೆ.
ಮಿಸ್ ಯೂನಿವರ್ಸ್‌ನಲ್ಲಿ ಅವರ ಉಪಸ್ಥಿತಿಯು ವೈವಿಧ್ಯತೆಯನ್ನು ಆಚರಿಸುವುದು ಮಾತ್ರವಲ್ಲದೆ, ಎಲ್ಲಾ ಶೇಪ್‌ನ ಎಲ್ಲಾ ಸೈಜ್‌ನಲ್ಲೂ ಸೌಂದರ್ಯವಿರುತ್ತದೆ ಎಂದು ಸಾಬೀತು ಮಾಡಿದ್ದಾರೆ.
ನವೆಂಬರ್ 18 ರಂದು ಸ್ಯಾನ್ ಸಾಲ್ವಡಾರ್‌ನ ಅಡಾಲ್ಫೊ ಪಿನೆಡಾ ನ್ಯಾಷನಲ್ ಜಿಮ್ನಾಷಿಯಂನಲ್ಲಿ ನಡೆಯಲಿರುವ ವಿಶ್ವ ಸುಂದರಿ ಸ್ಪರ್ಧೆಯ ಅಂತಿಮ ಸಮಾರಂಭದೊಂದಿಗೆ ಎಲ್ ಸಾಲ್ವಡಾರ್‌ನಲ್ಲಿ ಈ ವರ್ಷದ ಶ್ರೇಷ್ಠ ವಿಶ್ವ ಸುಂದರಿ ಕಾರ್ಯಕ್ರಮ ಮುಕ್ತಾಯವಾಗಲಿದೆ.