ಭೂತಾನ್ ಎಂಬ ಭೂಲೋಕದ ಸ್ವರ್ಗ: ಅಚ್ಚರಿ ಮೂಡಿಸುತ್ತೆ ಪುಟ್ಟ ರಾಷ್ಟ್ರದ ವೈಶಿಷ್ಟ್ಯ!
ಕಣ್ಣು ಹಾಯಿಸಿದಷ್ಟು ದೂರ ಹಸಿರು. ಅಪರೂಪದ ವನಸಿರಿಯಲ್ಲಿ ಮೈ ಮರೆಯುವಂತೆ ಮಾಡುತ್ತದೆ ಭೂತಾನ್ ಎಂಬ ಪುಟ್ಟ ರಾಷ್ಟ್ರ. ವಿಶ್ದಾದ್ಯಂತ ಆಧುನಿಕತೆ ಎಷ್ಟೇ ಕಾಲಿಟ್ಟರೂ ಈ ಪುಟ್ಟ ರಾಷ್ಟ್ರದ ಜನರು ಮಾತ್ರ ತಮ್ಮ ಧರ್ಮ, ಆಚಾರ, ನಂಬಿಕೆ, ಜಾನಪದ, ಕಲೆ, ಸಂಸ್ಕೃತಿ, ಸಂಪ್ರದಾಯ, ಉಡುಪು, ಭಾಷೆ ಎಲ್ಲವನ್ನೂ ಉಳಿಸಿಕೊಂಡಿದ್ದಾರೆ. ಈ ರಾಷ್ಟ್ರ ಪುಟ್ಟದಾಗಿದ್ದರೂ, ಇಲ್ಲಿನ ವೈಶಿಷ್ಟ್ಯಗಳು ಮಾತ್ರ ಹಲವು. ಇಲ್ಲಿದೆ ನೋಡಿ ಭೂಲೋಕದ ಸ್ವರ್ಗದ ಕೆಲ ಅಚ್ಚರಿ ಮುಡಿಸುವ ಸಂಗತಿಗಳು
ಭೂತಾನ್‌ನಲ್ಲಿ ಆರ್ಥಿಕ ಪ್ರಗತಿಯನ್ನು ಜನರ ಸಂತೋಷದ ಮೇಲೆ ಅಳೆಯಲಾಗುತ್ತದೆ. ಆಧುನಿಕತೆ ಎಷ್ಟೇ ಕಾಲಿಟ್ಟರೂ ತನ್ನ ಧರ್ಮ, ಆಚಾರ, ನಂಬಿಕೆ, ಜಾನಪದ, ಕಲೆ, ಸಂಸ್ಕೃತಿ, ಸಂಪ್ರದಾಯ, ಉಡುಪು, ಭಾಷೆ ಎಲ್ಲವನ್ನೂ ಭೂತಾನ್ ಸಾಕಷ್ಟು ಉಳಿಸಿಕೊಂಡಿದೆ.
ದೇಶದ ಶೇ.60ರಷ್ಟುಭಾಗದಲ್ಲಿ ಅರಣ್ಯ ಇರಲೇಬೇಕು ಎಂದು ಸಂವಿಧಾನ ಹೇಳುತ್ತದೆ. ಹೀಗಾಗಿ ಭೂತಾನ್ ಶೇ.70ಕ್ಕಿಂತ ಹೆಚ್ಚು ವನ್ಯಸಂಪತ್ತು ಹೊಂದಿರುವ ಏಕೈಕ ರಾಷ್ಟ್ರ.
ಹಸಿರೇ ಉಸಿರನ್ನಾಗಿಸಿಕೊಂಡಿರುವ ಈ ಪುಟ್ಟ ರಾಷ್ಟ್ರದಲ್ಲಿ ಈವರೆಗೆ ವಾಯು ಮಾಲಿನ್ಯ ಸಮಸ್ಯೆ ತಲೆದೋರಿಲ್ಲ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಸಾವಿರಾರು ಜನರು ಇಲ್ಲಿ ಭೇಟಿ ನೀಡುತ್ತಾರೆ. ಇಲ್ಲಿನ ಅನೇಕ ವನಸ್ಪತಿ ಗಿಡಗಳಿಂದ ನಾನಾ ಕಾಯಿಲೆಗಳು ದೂರವಾಗುತ್ತವೆ.
ರಾಜಧಾನಿ ಥಿಂಪುವಿನಲ್ಲಿ ಇವತ್ತಿಗೂ ಟ್ರಾಫಿಕ್ ಸಿಗ್ನಲ್ ಇಲ್ಲ. ದೇಶದಲ್ಲಿ ತಂಬಾಕು ನಿಷೇಧವಿದೆ.
ಟೀವಿಗಳು ಈ ದೇಶಕ್ಕೆ ಪ್ರವೇಶಿಸಿದ್ದು ತೀರಾ ಇತ್ತೀಚೆಗೆ, ಅಂದರೆ 1999ರಲ್ಲಿ
ಇಲ್ಲಿನ ರಾಷ್ಟ್ರೀಯ ಗ್ರಂಥಾಲಯದಲ್ಲಿ ವಿಶ್ವದ ಅತೀ ದೊಡ್ಡ ಪುಸ್ತಕವಿದೆ.
ಹೆಚ್ಚಾಗಿ ಸಾವಯವ ಕೃಷಿಗೆ ಆದ್ಯತೆ ಕೊಟ್ಟಿದ್ದರಿಂದ ತಾಜಾ ತರಕಾರಿ, ಹಣ್ಣು-ಹಂಪಲುಗಳು ಎಲ್ಲೆಂದರಲ್ಲಿ ಲಭ್ಯವಾಗುತ್ತವೆ. ವಿಶೇಷವಾಗಿ ಇವರ ಅಡುಗೆಯಲ್ಲಿ 'ಎಮಾ'[ಮೆಣಸಿನಕಾಯಿ]ಗೆ ಹೆಚ್ಚು ಆದ್ಯತೆ.
ಇಲ್ಲಿನ ಅಂಗಡಿ, ಮಾಲ್, ಹೋಟೆಲ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಭಾರತದ ಹಣ ಚಲಾವಣೆಯಾಗುತ್ತದೆ. ಪಾಸ್ ಪೋರ್ಟ್ ಅಗತ್ಯವಿಲ್ಲ. ಭಾರತೀಯರು ಕೇವಲ 40 ಸಾವಿರದಲ್ಲಿ ಊಟ, ತಿಂಡಿ ಹಾಗೂ ಇಡೀ ಭೂತಾನ್ ಸುತ್ತಾಡಿ ಮರಳಿ ಬೆಂಗಳೂರಿಗೆ ಬರಬಹುದು.
ಫೆಬ್ರವರಿಯಿಂದ ಜುಲೈ ತನಕ ಈ ರಾಷ್ಟ್ರಕ್ಕೆ ಪ್ರವಾಸ ಕೈಗೊಂಡರೆ ಉತ್ತಮ. ಈ ಅವಧಿಯಲ್ಲಿ ಭಾರತದಿಂದ ಶೇ. 60ರಷ್ಟು ಜನ ಕುಟುಂಬ, ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುತ್ತಾರೆ.
ಇಲ್ಲಿನ ಉಡುಗೆ, ತೊಡುಗೆ ನಿಜಕ್ಕೂ ವಿಭಿನ್ನ ಹಾಗೂ ವಿಶಿಷ್ಟ. ಸರಕಾರಿ ನೌಕರರಿಗೆ ಸಮವಸ್ತ್ರ ಕಡ್ಡಾಯ. ಸಮವಸ್ತ್ರ ಧರಿಸಿಕೊಂಡೇ ಕಚೇರಿಗೆ ಹೋಗಬೇಕು. ಭೂತಾನ್ ಭಾಷೆಯಲ್ಲಿ ಪುರುಷರ ಉಡುಪಿಗೆ 'ಘೋ', ಮಹಿಳೆಯರ ಉಡುಪಿಗೆ 'ಕಿರಾ' ಎನ್ನುತ್ತಾರೆ. ನೌಕರರು ಯೂನಿಫಾರ್ಮ್ ಮೇಲೆ 'ಕಬ್ನೆ' ಹಾಗೂ ಮಹಿಳೆಯರು 'ರಾಚು' ಎಂಬ ಶಾಲನ್ನು ಭುಜದ ಮೇಲೆ ಹಾಕಿಕೊಂಡು ಹೋಗಬೇಕು
ಇದು ಮಹಿಳಾ ಪ್ರಧಾನ ರಾಷ್ಟ್ರ. ಇಲ್ಲಿ ಮದುವೆಯಾದ ಹುಡುಗಿ ಅತ್ತೆ ಮನೆಗೆ ಹೋಗುವ ಬದಲು ಹುಡುಗನೇ ಅತ್ತೆ ಮನೆಗೆ ಬರುತ್ತಾನೆ. ಹೆಚ್ಚಾಗಿ ಪ್ರೇಮ ವಿವಾಹಗಳು ಜರಗುತ್ತವೆ. ಹೆಣ್ಣು ಮಕ್ಕಳ ದುಡಿಮೆಯಿಂದಲೇ ಮನೆ ನಡೆಯುತ್ತದೆ.
ಅತ್ಯಾಚಾರ, ಹೆಣ್ಣು ಭ್ರೂಣಹತ್ಯೆ, ವರದಕ್ಷಣೆ ಕಿರುಕುಳ, ಮಹಿಳಾ ದೌರ್ಜನ್ಯಗಳು ನಡೆಯುವುದಿಲ್ಲ. ಹೆಣ್ಣು ಮಗು ಹುಟ್ಟಿದರೆ ಊರೆಲ್ಲ ಸಿಹಿ ಹಂಚಿ, ಖುಷಿಪಡುತ್ತಾರೆ. ಮಹಿಳೆಯರು ಮಾತ್ರ ಆಸ್ತಿಗೆ ಉತ್ತರಾಧಿಕಾರಿ.
ಭೂತಾನ್ ಮಿಲಿಟರಿಯಲ್ಲಿ ಸುಮಾರು 16 ಸಾವಿರ ಸೈನಿಕರಿದ್ದಾರೆ. ಅವರೆಲ್ಲ ಭಾರತೀಯ ಸೇನೆಯಿಂದ ತರಬೇತಿ ಪಡೆದವರು.