ನಿಮ್ಮ ಮನೆಯಲ್ಲೂ ಅತಿ ಬೇಗ ಕಿಟಕಿಗೆ ಹಾಕಿರೋ ಸೊಳ್ಳೆ ನೆಟ್ ಕೊಳಕಾಗುತ್ತಾ? ತೆಗೆಯದೇ ಹೀಗೆ ಕ್ಲೀನ್ ಮಾಡಿ
ರಾತ್ರಿ ಪೂರ್ತಿ ನಿದ್ರೆ ಕೊಡದ ಸೊಳ್ಳೆಯಿಂದ ತಪ್ಪಿಸಿಕೊಳ್ಳೋದು ಒಂದು ಚಾಲೆಂಜ್. ಈ ಸೊಳ್ಳೆಗಳಿಂದ ಮುಕ್ತಿಪಡೆಯಲು ಜನರು ಕಿಟಕಿ, ಬಾಗಿಲಿಗೆ ಸೊಳ್ಳೆ ನೆಟ್ ಹಾಕ್ತಾರೆ. ಆದ್ರೆ ಈ ನೆಟ್ ಬಹುಬೇಗ ಕೊಳಕಾಗುತ್ತದೆ. ಅದನ್ನು ಸುಲಭವಾಗಿ ಕ್ಲೀನ್ ಮಾಡುವ ವಿಧಾನ ಇಲ್ಲಿದೆ.

ಸೊಳ್ಳೆ ನೆಟ್‌ಗೆ ಬೇಗ ಧೂಳು ಹಿಡಿಯುವುದೇಕೆ?
ನೆಟ್ ನಲ್ಲಿ ತುಂಬಾ ಚಿಕ್ಕದಾದ ರಂಧ್ರಗಳಿರುತ್ತವೆ. ಇವುಗಳ ಮೂಲಕ ಗಾಳಿ ಒಳಗೆ ಬರುವಾಗ ಗಾಳಿಯಲ್ಲಿರುವ ಧೂಳಿನ ಕಣಗಳು ಜಾಲದ ಮೇಲೆ ಅಂಟಿಕೊಳ್ಳುತ್ತವೆ. ದಿನ ಕಳೆದಂತೆ ಧೂಳು ಹೆಚ್ಚಾಗಿ, ನೆಟ್ ಮೇಲೆ ಕೊಳೆಯ ಪದರದಂತೆ ಕಾಣಿಸುತ್ತದೆ. ದೀರ್ಘಕಾಲ ಸ್ವಚ್ಛಗೊಳಿಸದಿದ್ದರೆ ಕಿಟಕಿಯ ಫ್ರೇಮ್ ಮತ್ತು ಟ್ರ್ಯಾಕ್ನಲ್ಲೂ ಧೂಳು ತುಂಬಿಕೊಳ್ಳುತ್ತದೆ.
ಮೊದಲು ಒಣ ಧೂಳನ್ನು ತೆಗೆಯಿರಿ
ನೆಟ್ ಕ್ಲೀನ್ ಮಾಡುವ ಮೊದಲು ಅದರ ಮೇಲಿರುವ ಸಡಿಲ ಧೂಳನ್ನು ತೆಗೆಯಬೇಕು. ಇದಕ್ಕಾಗಿ ಮೃದುವಾದ ಬ್ರಷ್ ಅಥವಾ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಬಹುದು. ನೆಟ್ ಅನ್ನು ಜೋರಾಗಿ ಉಜ್ಜಬೇಡಿ. ಹಾಗೆ ಮಾಡಿದರೆ ನೆಟ್ ಎಳೆಯಲ್ಪಟ್ಟು ಹಾಳಾಗುವ ಸಾಧ್ಯತೆ ಇರುತ್ತದೆ. ಮನೆಯಲ್ಲಿ ವ್ಯಾಕ್ಯೂಮ್ ಕ್ಲೀನರ್ ಇದ್ದರೆ ಸಾಫ್ಟ್ ಬ್ರಷ್ ಅಟ್ಯಾಚ್ಮೆಂಟ್ ಬಳಸಿ ನಿಧಾನವಾಗಿ ಧೂಳನ್ನು ತೆಗೆಯಬಹುದು. ಆದರೆ ವ್ಯಾಕ್ಯೂಮ್ ನಳಿಕೆಯನ್ನು ನೆಟ್ ಗೆ ಬಲವಾಗಿ ಒತ್ತಬಾರದು.
ತಕ್ಷಣ ನೀರು ಹಾಕ್ಬೇಡಿ
ನೆಟ್ ಮೇಲೆ ಧೂಳು ಕಾಣಿಸಿದ ತಕ್ಷಣ ನೀರು ಹಾಕಿ ತೊಳೆಯಲು ಹೋಗಬೇಡಿ. ಮೊದಲು ಒಣ ಧೂಳನ್ನು ತೆಗೆಯುವುದು ಉತ್ತಮ. ಇಲ್ಲದಿದ್ದರೆ ಧೂಳು ನೀರಿನಿಂದ ತೇವಗೊಂಡು ನೆಟ್ ಗೆ ಅಂಟಿಕೊಳ್ಳಬಹುದು. ಧೂಳನ್ನು ತೆಗೆದ ನಂತರ ಸ್ವಲ್ಪ ಒದ್ದೆಯಾದ ಮೈಕ್ರೋಫೈಬರ್ ಬಟ್ಟೆಯಿಂದ ನಿಧಾನವಾಗಿ ಒರೆಸಿ. ಅಗತ್ಯವಿದ್ದರೆ ನೀರಿಗೆ ಸ್ವಲ್ಪ ಮೃದುವಾದ ಸೋಪ್ ಸೇರಿಸಬಹುದು. ಆದರೆ ನೆಟ್ ತಯಾರಿಸಿದ ಕಂಪನಿ ಸೂಚಿಸಿರುವ ಕ್ಲೀನಿಂಗ್ ವಿಧಾನವನ್ನು ಅನುಸರಿಸುವುದು ಉತ್ತಮ.
ಕಿಟಕಿಯ ಟ್ರ್ಯಾಕ್ ಕ್ಲೀನಿಂಗ್
ಸ್ಲೈಡಿಂಗ್ ಕಿಟಕಿಗಳಲ್ಲಿ ನೆಟ್ ಮಾತ್ರವಲ್ಲ, ಅದರ ಕೆಳಭಾಗ ಮತ್ತು ಬದಿಗಳಲ್ಲಿರುವ ಟ್ರ್ಯಾಕ್ನಲ್ಲೂ ಧೂಳು, ಕೂದಲು ಮತ್ತು ಸಣ್ಣ ಕಣಗಳು ಸೇರಿಕೊಳ್ಳುತ್ತವೆ. ಇದರಿಂದ ಕಿಟಕಿ ತೆರೆಯಲು ಮತ್ತು ಮುಚ್ಚಲು ಕಷ್ಟವಾಗಬಹುದು. ಮೊದಲು ಬ್ರಷ್ ಅಥವಾ ಒಣ ಬಟ್ಟೆಯಿಂದ ಟ್ರ್ಯಾಕ್ನಲ್ಲಿರುವ ಧೂಳನ್ನು ತೆಗೆಯಿರಿ. ನಂತರ ಅಗತ್ಯವಿದ್ದರೆ ಸ್ವಲ್ಪ ಒದ್ದೆಯಾದ ಬಟ್ಟೆಯಿಂದ ಒರೆಸಿ. ಮೋಟರ್ ಅಥವಾ ಎಲೆಕ್ಟ್ರಿಕಲ್ ಭಾಗಗಳಿರುವ ನೆಟ್ ಬಳಿ ನೀರು ಬಳಸಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

