- Home
- Karnataka Districts
- ಏಷ್ಯಾ ಖಂಡದ ಅತಿದೊಡ್ಡ 'ಮಧುಗಿರಿ ಏಕಶಿಲಾ ಬೆಟ್ಟ'ವನ್ನು ಸೈಕಲ್ ಸಮೇತ ಏರಿದ ಸಾಹಸಿ ಟೆಕ್ಕಿ ಸಾಯಿಕುಮಾರ್!
ಏಷ್ಯಾ ಖಂಡದ ಅತಿದೊಡ್ಡ 'ಮಧುಗಿರಿ ಏಕಶಿಲಾ ಬೆಟ್ಟ'ವನ್ನು ಸೈಕಲ್ ಸಮೇತ ಏರಿದ ಸಾಹಸಿ ಟೆಕ್ಕಿ ಸಾಯಿಕುಮಾರ್!
ಸಾಹಸಿ ಟೆಕ್ಕಿ ಸಾಯಿಕುಮಾರ್ ಅವರು ಏಷ್ಯಾ ಖಂಡದ ಎರಡನೇ ಅತಿದೊಡ್ಡ ಏಕಶಿಲಾ ಬೆಟ್ಟವಾದ ಮಧುಗಿರಿಯನ್ನು ತನ್ನ ಸೈಕಲ್ ಸಮೇತ ಏರಿ ವಿನೂತನ ಸಾಹಸ ಮೆರೆದಿದ್ದಾರೆ. ಕಡಿದಾದ ಬಂಡೆಗಳಿರುವ ಈ ಬೆಟ್ಟದಲ್ಲಿ ಸೈಕಲ್ ಸಮೇತ ಸಾಗಿದ ಸಾಹಸಗಾಥೆ ಇಲ್ಲಿದೆ ನೋಡಿ.

ತುಮಕೂರು (ಸೆ.29): ಬರಿಗೈಯಲ್ಲಿ ನಡೆದುಕೊಂಡು ಹೋಗುವುದೇ ಕಷ್ಟವಾಗಿರುವ, ಒಂದು ಬಾಟಲ್ ನೀರು ಮತ್ತು ತಿಂಡಿ ಕೊಂಡೊಯ್ಯಲೂ ಆಯಾಸವಾಗುವಂತಹ ದುರ್ಗಮವಾದ ಬೆಟ್ಟವನ್ನು ಯುವಕನೊಬ್ಬ ತನ್ನ ಸೈಕಲ್ ಸಮೇತ ಏರುವ ಮೂಲಕ ವಿನೂತನ ಸಾಹಸವೊಂದಕ್ಕೆ ನಾಂದಿ ಹಾಡಿದ್ದಾನೆ. ಏಷ್ಯಾ ಖಂಡದ ಎರಡನೇ ಅತಿದೊಡ್ಡ ಏಕಶಿಲಾ ಬೆಟ್ಟ (Monolith Hill) ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತುಮಕೂರು ಜಿಲ್ಲೆಯ ಐತಿಹಾಸಿಕ ಮಧುಗಿರಿ ಬೆಟ್ಟದಲ್ಲಿ ಈ ಅಪರೂಪದ ಸಾಹಸಯಾತ್ರೆ ನಡೆದಿದೆ.
ನೆರೆ ರಾಜ್ಯ ಆಂಧ್ರಪ್ರದೇಶದ ಹಿಂದೂಪುರ ಮೂಲದ ಎಂಜಿನಿಯರ್ ಆಗಿರುವ ಸಾಯಿಕುಮಾರ್ ಈ ರೋಮಾಂಚಕಾರಿ ಚಾರಣ ಮಾಡಿದ ಸಾಹಸಿ. ಇವರು ಸೈಕ್ಲಿಂಗ್ ಮತ್ತು ಚಾರಣ (Trekking) ಎರಡನ್ನೂ ಸಂಯೋಜಿಸಿ ಐತಿಹಾಸಿಕ ತಾಣಗಳನ್ನು ಅನ್ವೇಷಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.
ಕಡಿದಾದ ಬಂಡೆಗಳ ಮೇಲೆ ಸೈಕಲ್ ಹೊತ್ತು ಸಾಗಿದ ಯುವಕ!
ಮಧುಗಿರಿ ಬೆಟ್ಟವು ಅತ್ಯಂತ ಕಡಿದಾದ ಬಂಡೆಗಳಿಂದ ಕೂಡಿದ್ದು, ಸಾಮಾನ್ಯ ಚಾರಣಿಗರಿಗೂ ಇದು ಸವಾಲೊಡ್ಡುತ್ತದೆ. ಆದರೆ, ಸಾಯಿಕುಮಾರ್ ಅವರು ತಮ್ಮ ಸೈಕಲ್‌ನೊಂದಿಗೆ ಈ ಏಕಶಿಲಾ ಬೆಟ್ಟವನ್ನು ಏರಿ ಅಚ್ಚರಿ ಮೂಡಿಸಿದ್ದಾರೆ. ಹೆಜ್ಜೆಗಳನ್ನಿಡಲು ಕಷ್ಟವಾಗುವಂತಹ ಜಾಗದಲ್ಲಿ ಸೈಕಲ್ ಅನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಬೆಟ್ಟದ ತುದಿಯನ್ನು ತಲುಪಿದ್ದಾರೆ. ಸೈಕಲ್ ಸಮೇತ ಮಧುಗಿರಿ ಬೆಟ್ಟ ಏರಿರುವುದು ಇದೇ ಮೊದಲು ಎಂದು ಸಾಯಿಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
ರಾಯಲಸೀಮೆ ಇತಿಹಾಸಕ್ಕೆ ಗೌರವ
ತಮ್ಮ ಈ ಸಾಹಸಯಾತ್ರೆಗಳ ಮೂಲಕ ರಾಯಲಸೀಮೆಯ ಇತಿಹಾಸ ಮತ್ತು ಸಂಸ್ಕೃತಿಗೆ ಗೌರವ ಸಲ್ಲಿಸುವುದು ಸಾಯಿಕುಮಾರ್ ಅವರ ಉದ್ದೇಶವಾಗಿದೆ. ಮಧುಗಿರಿಯ ಐತಿಹಾಸಿಕ ಕೋಟೆ ಬೆಟ್ಟ ಮಾತ್ರವಲ್ಲದೆ, ಈ ಹಿಂದೆ ಆಂಧ್ರಪ್ರದೇಶದ ಮಡಕಶಿರಾ ಐತಿಹಾಸಿಕ ಬೆಟ್ಟ ಸೇರಿದಂತೆ ಹಲವು ಕಠಿಣ ಬೆಟ್ಟಗಳನ್ನು ಸೈಕಲ್ ಮೂಲಕವೇ ಏರಿ ಅವರು ಸೈ ಎನಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲೂ ಸೈಕ್ಲಿಂಗ್ ಪ್ರವಾಸ
ಕೇವಲ ಬೆಟ್ಟಗಳನ್ನು ಏರುವುದು ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಯಿಕುಮಾರ್ ತಮ್ಮ ಸೈಕಲ್ ಪಯಣ ಮಾಡಿದ್ದಾರೆ. ನೇಪಾಳ, ಥೈಲ್ಯಾಂಡ್, ಪಾಕಿಸ್ತಾನ ಮತ್ತು ಮಲೇಷ್ಯಾ ಸೇರಿದಂತೆ ಹಲವು ದೇಶಗಳಿಗೆ ಸೈಕಲ್ ಮೂಲಕವೇ ಪ್ರವಾಸ ಮಾಡಿ ಅಲ್ಲಿನ ಸಂಸ್ಕೃತಿ, ಪರಿಸರವನ್ನು ಅಧ್ಯಯನ ಮಾಡಿದ್ದಾರೆ.
ಒಟ್ಟಿನಲ್ಲಿ, ದೈಹಿಕ ಸಾಮರ್ಥ್ಯ ಮತ್ತು ಅಪಾರ ಇಚ್ಛಾಶಕ್ತಿಯಿಂದ ಕಡಿದಾದ ಮಧುಗಿರಿ ಬೆಟ್ಟವನ್ನು ಸೈಕಲ್ ಸಮೇತ ಏರಿದ ಸಾಯಿಕುಮಾರ್ ಅವರ ಈ ವಿನೂತನ ಸಾಹಸಕ್ಕೆ ಪ್ರವಾಸಿಗರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

