- Home
- Karnataka Districts
- ಕೋಗಿಲು ನಿರಾಶ್ರಿತರಿಗೆ ವಸತಿ ನೀಡುವ ಬಗ್ಗೆ ಮಹತ್ವದ ಸಭೆ, ಕನ್ನಡಿಗರಿಗೆ ಮೊದಲ ಆದ್ಯತೆ, ಇನ್ನೂ ಹಲವು ವಿಚಾರ ಚರ್ಚೆ
ಕೋಗಿಲು ನಿರಾಶ್ರಿತರಿಗೆ ವಸತಿ ನೀಡುವ ಬಗ್ಗೆ ಮಹತ್ವದ ಸಭೆ, ಕನ್ನಡಿಗರಿಗೆ ಮೊದಲ ಆದ್ಯತೆ, ಇನ್ನೂ ಹಲವು ವಿಚಾರ ಚರ್ಚೆ
ಕೋಗಿಲು ಕ್ರಾಸ್ ನಿರಾಶ್ರಿತರಿಗೆ ಮನೆ ನೀಡುವ ಕುರಿತು ರಾಜ್ಯ ಸರ್ಕಾರವು ಕಾನೂನುಬದ್ಧ ಹಾಗೂ ಮಾನವೀಯ ಕ್ರಮಗಳನ್ನು ಅನುಸರಿಸಲು ನಿರ್ಧರಿಸಿದೆ. ಸಚಿವ ಸಭೆಯಲ್ಲಿ, ಅರ್ಹತೆ ಪರಿಶೀಲಿಸಿ, ಐದು ವರ್ಷಕ್ಕೂ ಹೆಚ್ಚು ಕಾಲ ವಾಸವಿರುವ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ.

ವಿಕಾಸಸೌಧದಲ್ಲಿರುವ ಸಚಿವ ಕೃಷ್ಣಭೈರೇಗೌಡರಿಂದ ಮೀಟಿಂಗ್
ಬೆಂಗಳೂರು: ಕೋಗಿಲು ಕ್ರಾಸ್ ಪ್ರದೇಶದ ನಿರಾಶ್ರಿತರಿಗೆ ಮನೆ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಕಾನೂನುಬದ್ಧ ಹಾಗೂ ಮಾನವೀಯ ಕ್ರಮ ಅನುಸರಿಸಲು ತೀರ್ಮಾನಿಸಿದೆ. ಈ ಸಂಬಂಧ ವಿಕಾಸಸೌಧದಲ್ಲಿರುವ ಸಚಿವ ಕೃಷ್ಣಭೈರೇಗೌಡ ಅವರ ಕಚೇರಿಯಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಕಂದಾಯ ಇಲಾಖೆ ಹಾಗೂ ಜಿಬಿಎ (GBE) ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ತೀರ್ಮಾನಗಳು
ಸಭೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ವಿಚಾರವಾಗಿ ಸ್ಪಷ್ಟ ನಿಲುವು ಕೈಗೊಳ್ಳಲಾಗಿದೆ. ಸರ್ಕಾರಿ ಜಮೀನಿನಲ್ಲಿ ಯಾರಿಗಾದರೂ ಹಣ ನೀಡಿ ಒತ್ತುವರಿ ಮಾಡಿಸಿಕೊಂಡಿದ್ದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು. ಅಲೆಮಾರಿಗಳು ತಾತ್ಕಾಲಿಕವಾಗಿ ಬಂದು ಹೋಗುವವರಾಗಿರುವುದರಿಂದ ಅವರಿಗೆ ಭೂ ಒತ್ತುವರಿ ಅಗತ್ಯವಿಲ್ಲ. ಆದರೆ, ಉದ್ದೇಶಪೂರ್ವಕವಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡುವವರನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸರ್ಕಾರಿ ಜಮೀನಿನಲ್ಲಿ ಶೆಡ್ ಹಾಕಿದ ತಕ್ಷಣ ಮನೆ ನೀಡುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ. ಇದರಿಂದ ಸರ್ಕಾರವೇ ಪರೋಕ್ಷವಾಗಿ ಭೂ ಒತ್ತುವರಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಈಗಾಗಲೇ ಸಾವಿರಾರು ಜನ ಸರ್ಕಾರಿ ಮನೆಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವಾಗ, ಒತ್ತುವರಿದಾರರಿಗೆ ಏಕಾಏಕಿ ಮನೆ ನೀಡುವುದು ನ್ಯಾಯಸಮ್ಮತವಲ್ಲ ಎಂದು ಸಚಿವರು ಹೇಳಿದರು.
ಕೋಗಿಲು ಪ್ರಕರಣದಲ್ಲಿ ಮಾನವೀಯತೆ ಅಗತ್ಯ
ಕೋಗಿಲು ಕ್ರಾಸ್ ಪ್ರಕರಣದಲ್ಲಿ ಬಡವರಿಗೆ ಮಾನವೀಯ ನೆಲೆಯಲ್ಲಿ ಮನೆ ನೀಡಬೇಕಾದ ಅಗತ್ಯವಿದೆ ಎಂಬುದನ್ನು ಸಭೆ ಒಪ್ಪಿಕೊಂಡಿದೆ. ಆದರೆ, ಆ ಪ್ರಕ್ರಿಯೆ ಕಾನೂನುಬದ್ಧವಾಗಿಯೇ ನಡೆಯಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಗುಡಿಸಲು ಹಾಕಿರುವವರು ಎಲ್ಲಿಂದ ಬಂದವರು, ಎಷ್ಟು ವರ್ಷಗಳಿಂದ ಇಲ್ಲೇ ನೆಲೆಸಿದ್ದಾರೆ ಎಂಬುದರ ಬಗ್ಗೆ ಮೊದಲು ಸಮಗ್ರ ತನಿಖೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಐದಾರು ಕುಟುಂಬಗಳು ಈ ಪ್ರದೇಶದಲ್ಲಿರುವ ಮಾಹಿತಿ ಲಭ್ಯವಾಗಿದೆ. ಆದರೂ, ಅರ್ಹರಿಗೆ ಮಾತ್ರ ಮನೆ ನೀಡಬೇಕು ಎಂಬ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕದಿಂದ ಬೆಂಗಳೂರಿಗೆ ಬಂದು ನೆಲೆಸಿರುವವರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಕೋಗಿಲು ಲೇಔಟ್‌ನಲ್ಲಿ ಐದು ವರ್ಷಕ್ಕಿಂತ ಹೆಚ್ಚು ವಾಸಿಸುತ್ತಿರುವವರಿಗೆ ಆದ್ಯತೆ
ಕನ್ನಡಿಗರಾಗಿದ್ದು, ಕೋಗಿಲು ಲೇಔಟ್‌ನಲ್ಲಿ ಐದು ವರ್ಷಕ್ಕಿಂತ ಹೆಚ್ಚು ಕಾಲ ವಾಸಿಸುತ್ತಿರುವವರಿಗೆ ಆದ್ಯತೆಯಾಗಿ ಮನೆ ನೀಡಬೇಕು. ಮಾತೃಭಾಷೆ ಬೇರೆ ಇದ್ದರೂ ತಲೆಮಾರುಗಳಿಂದ ಕರ್ನಾಟಕದಲ್ಲಿ ನೆಲೆಸಿರುವವರು ಬೆಂಗಳೂರಿಗೆ ವಲಸೆ ಬಂದಿದ್ದರೆ, ಅವರ ಮೂಲ ತಾಲೂಕು ಹಾಗೂ ಊರನ್ನು ಪತ್ತೆ ಹಚ್ಚಿ ವಿಎ ಹಾಗೂ ದಫೇದಾರ್ ಮೂಲಕ ಪರಿಶೀಲನೆ ನಡೆಸಿದ ನಂತರ ಮನೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ವಸೀಂ ಕಾಲೋನಿಯ ನಿವಾಸಿಗಳು ಮಾತೃಭಾಷೆ ಬೇರೆ ಇದ್ದರೂ ಕರ್ನಾಟಕದ ಮೂಲದವರಾಗಿರುವುದರಿಂದ, ಅವರು ಕರ್ನಾಟಕದಲ್ಲೇ ನೆಲೆಸಿದ್ದರೆ ಮನೆ ನೀಡಬೇಕು ಎಂಬ ತೀರ್ಮಾನವೂ ಕೈಗೊಳ್ಳಲಾಗಿದೆ. “ಬಡವರು ಬಡವರೇ, ಭಾರತೀಯರು ಭಾರತೀಯರೇ. ಆದರೆ ಮನೆ ಹಂಚಿಕೆಯಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಇರಬೇಕು” ಎಂಬ ನಿಲುವು ಸಭೆಯಲ್ಲಿ ವ್ಯಕ್ತವಾಯಿತು. ಕರ್ನಾಟಕದವರು ಆದರೆ ಕನ್ನಡಿಗರಲ್ಲದೆ ಐದು ವರ್ಷಕ್ಕಿಂತ ಹೆಚ್ಚು ಕಾಲ ರಾಜ್ಯದಲ್ಲಿ ವಾಸಿಸುತ್ತಿದ್ದರೆ, ಅಂತವರು ಸರ್ಕಾರದ ಒಂದು ಲಕ್ಷ ರೂ. ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿ ಮನೆ ಪಡೆಯಬೇಕು ಎಂದು ಸೂಚಿಸಲಾಗಿದೆ.
ಒಂದು ರೇಷನ್ ಕಾರ್ಡ್- ಒಂದೇ ಮನೆ
ಒಂದೇ ಕುಟುಂಬದವರು ಮನೆಗಾಗಿ ಎರಡು ಅರ್ಜಿ ಸಲ್ಲಿಸಿದ್ದರೆ, ಒಂದು ರೇಷನ್ ಕಾರ್ಡ್ ಆಧಾರದಲ್ಲಿ ಒಂದೇ ಮನೆ ನೀಡಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿದೆ. ಹೊರ ರಾಜ್ಯದವರ ಪತ್ತೆಗಾಗಿ ಸಮಯ ಕಳೆದು ಕನ್ನಡಿಗರಿಗೆ ಮನೆ ನೀಡಲು ವಿಳಂಬ ಮಾಡುವುದು ಸರಿಯಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು. ಅರ್ಹರಿಗೆ ಮೊದಲ ಹಂತದಲ್ಲೇ ಮನೆ ಹಂಚಿಕೆ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪಕೀರ್ ಕಾಲೋನಿಯಲ್ಲಿ 35 ಮನೆಗಳಿದ್ದು, ಬಹುಪಾಲು ಜನ ಅರ್ಹರಾಗಿದ್ದಾರೆ. ಈ ಪೈಕಿ ಗುರುವಾರದೊಳಗೆ 25ರಿಂದ 30 ಜನರಿಗೆ ಮನೆ ಹಂಚಿಕೆ ಮಾಡಬೇಕು. ಉಳಿದ ಅರ್ಹರಿಗೆ ಹಂತ ಹಂತವಾಗಿ ಮನೆ ನೀಡುವ ಕೆಲಸ ನಡೆಯಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಗೆ ಮುನ್ನ ಸಚಿವ ಜಮೀರ್ ಅಹ್ಮದ್ ಹೇಳಿಕೆ
ಸಭೆಗೆ ಮುನ್ನ ಬೆಳಗ್ಗೆ ಮಾತನಾಡಿದ್ದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, “ಕೃಷ್ಣಭೈರೇಗೌಡರು ಈಗ ಬೆಂಗಳೂರಿಗೆ ಬಂದಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿ ಈಗಾಗಲೇ ಶುಕ್ರವಾರ ಚರ್ಚಿಸಿದ್ದಾರೆ. ಮನೆ ಹಂಚಿಕೆ ಬಗ್ಗೆ ನಾವು ಈಗಾಗಲೇ ಸಭೆ ನಡೆಸಿ ನಿರ್ಧಾರ ಕೈಗೊಂಡಿದ್ದೇವೆ. ನಮ್ಮ ರಾಜ್ಯದವರನ್ನು ಹೊರತುಪಡಿಸಿ ಬೇರೆ ಯಾರಿಗೂ ಅವಕಾಶವಿಲ್ಲ” ಎಂದು ಸ್ಪಷ್ಟಪಡಿಸಿದರು. “ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳು ಇರಬೇಕು. 280 ಜನ ಅರ್ಜಿ ಸಲ್ಲಿಸಿದ್ದು, 167 ಮನೆಗಳು ಧ್ವಂಸಗೊಂಡಿವೆ.
ರಾಜ್ಯದವರಿಗೆ ಮಾತ್ರ ಮನೆ ನೀಡಲಾಗುತ್ತದೆ: ಜಮೀರ್
ರಾಯಚೂರು, ಯಾದಗಿರಿ, ಕಲಬುರಗಿ ಭಾಗದವರು ಕೆಲವರು ಇದ್ದಾರೆ. ಬೇರೆ ರಾಜ್ಯಗಳಿಂದಲೂ ಅರ್ಜಿಗಳು ಬಂದಿವೆ. ಆದರೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಸುಮಾರು 15–18 ಜನ ಹೊರ ರಾಜ್ಯದವರು ಇರಬಹುದು ಎಂಬ ಮಾಹಿತಿ ಇದೆ. ಇದು ಯಾರ ಮನೆ ಆಸ್ತಿಯಲ್ಲ, ಇದು ಸರ್ಕಾರದ ಆಸ್ತಿ. ರಾಜ್ಯದವರಿಗೆ ಮಾತ್ರ ಮನೆ ನೀಡಲಾಗುತ್ತದೆ” ಎಂದು ಜಮೀರ್ ಅಹ್ಮದ್ ಹೇಳಿದರು. ಅಲ್ಲಿ ಒಟ್ಟು 1180 ಮನೆಗಳಿದ್ದು, ಎಂಎಲ್‌ಎ ಕೋಟಾದಡಿ ಶೇ.50 ಮೀಸಲಾತಿ ಇದೆ. ಈ ಎಲ್ಲ ಅಂಶಗಳ ಬಗ್ಗೆ ಮಧ್ಯಾಹ್ನ 2 ಗಂಟೆಗೆ ಕೃಷ್ಣಭೈರೇಗೌಡರ ಜೊತೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಜಮೀರ್ ಹೇಳಿಕೆಗೆ ಕೃಷ್ಣಭೈರೇಗೌಡ ತಿರುಗೇಟು
ಇನ್ನು ಜಮೀರ್ ಹೇಳಿಕೆ ಹಿನ್ನೆಲೆಯಲ್ಲಿ ಮಾತನಾಡಿದ್ದ ಸಚಿವ ಕೃಷ್ಣಭೈರೇಗೌಡ, “ಯಾರೋ ಏನೋ ಹೇಳಿದ ತಕ್ಷಣ ಮನೆ ಹಂಚಿಕೆ ಮಾಡಲು ಸಾಧ್ಯವಿಲ್ಲ. ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಮನೆ ನೀಡಲಾಗುತ್ತದೆ. ಮುಖ್ಯಮಂತ್ರಿ ಕೂಡ ನೈಜತೆಯನ್ನು ಪರಿಶೀಲಿಸಿ ಮನೆ ನೀಡಬೇಕು ಎಂದು ಸೂಚಿಸಿದ್ದಾರೆ. ಅಧಿಕಾರಿಗಳು ಈಗಾಗಲೇ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಅದು ಪೂರ್ಣಗೊಂಡ ಬಳಿಕ ಮನೆ ಹಂಚಿಕೆ ಮಾಡಲಾಗುತ್ತದೆ” ಎಂದು ಹೇಳಿದರು. “ಒತ್ತುವರಿ ತೆರವು ಮಾಡಿ ಒವರ್‌ನೈಟ್ ಮನೆ ನೀಡಲು ಸಾಧ್ಯವಿಲ್ಲ. ಎಲ್ಲವೂ ಪ್ರಕ್ರಿಯೆ ಮೂಲಕವೇ ನಡೆಯಬೇಕು. ತರಾತುರಿಯಲ್ಲಿ ಮನೆ ನೀಡಲು ಸಾಧ್ಯವಿಲ್ಲ. ಅಲ್ಲಿ ಅಕ್ರಮವೇ, ನೈಜತೆ ಏನು ಎಂಬುದನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಈ ವಿಚಾರದಲ್ಲಿ ಪರ–ವಿರೋಧಗಳಿರುತ್ತವೆ. ನಾವು ನಿಷ್ಠುರವಾಗಿ ಕ್ರಮ ಕೈಗೊಂಡಾಗ, ಕೆಲವರು ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಟಾರ್ಗೆಟ್ ಮಾಡುವ ಸಾಧ್ಯತೆಯೂ ಇದೆ” ಎಂದು ಕೃಷ್ಣಭೈರೇಗೌಡ ಸ್ಪಷ್ಟಪಡಿಸಿದರು.

