ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವುದು ಹಿರಿಯ ನಾಯಕರಿಗೆ ಬೆದರಿಕೆ ಹಾಕುವ ನಾಟಕ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಸಿ.ಟಿ. ರವಿ ಅವರ ಮೇಲೆ ಎಫ್‌ಐಆರ್‌ ಮಾಡುವ ಪೊಲೀಸರು, ಹಿಂದೂ ಧರ್ಮವನ್ನು ನಿಂದಿಸುವವರ ಮೇಲೆ ಏನು ಕ್ರಮ ಜರುಗಿಸಿದ್ದಾರೆ?

 ಬೆಂಗಳೂರು (ಜು.28): ಹಿರಿಯ ನಾಯಕರಿಗೆ ಬೆದರಿಕೆ ಹಾಕುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ನಾಟಕ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಹತ್ತು ವರ್ಷಗಳಿಂದ ರಾಜಕೀಯ ನಿವೃತ್ತಿ ಎನ್ನುತ್ತಿದ್ದಾರೆ. ಚುನಾವಣೆ ಸಮೀಪ ಬಂದಾಗ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಹಿರಿಯ ನಾಯಕರಿಗೆ ಬೆದರಿಕೆ ಹಾಕಲು ಅವರು ಈ ರೀತಿ ನಾಟಕ ಮಾಡುತ್ತಿದ್ದಾರೆ. ಯಾವುದೇ ನಾಯಕರು ಶಾಶ್ವತವಲ್ಲ. ಯಾವ ನಾಯಕರು ಹೋದರೂ ಮತ್ತೊಬ್ಬರು ಬೆಳೆಯುತ್ತಾರೆ ಎಂದರು.

ಬಿಜೆಪಿ ಮುಖಂಡರ ಮೇಲೆ ಕೇಸ್‌:

ಚುನಾವಣೆಗೆ ಸಮೀಪವಾಗುವಾಗ ಬಿಜೆಪಿ ಮುಖಂಡರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಪ್ರಕಾಶ್‌ ರಾಜ್‌, ಭಗವಾನ್‌ ಮೊದಲಾದವರು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದರೂ ಅವರ ವಿರುದ್ಧ ಕ್ರಮ ಇರುವುದಿಲ್ಲ. ನೀಟ್‌ ಪ್ರತಿಭಟನೆ ಸಮಯದಲ್ಲಿ ಕೆಲವರು ಪೋಸ್ಟರ್‌ಗಳನ್ನು ಹಿಡಿದು ಪೊಲೀಸರಿಗೆ ಸವಾಲು ಹಾಕಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರು ಸಿ.ಟಿ.ರವಿ ವಿರುದ್ಧ ಮಾತ್ರ ಎಫ್‌ಐಆರ್‌ ಮಾಡಿದ್ದಾರೆ. ಅವರ ಹೇಳಿಕೆಯನ್ನು ತಿರುಚಲಾಗಿದೆ. ಇದರ ವಿರುದ್ಧ ಚಿಕ್ಕಮಗಳೂರಿನಲ್ಲಿ ಹೋರಾಟ ಮಾಡುವುದಾಗಿ ಅಶೋಕ್‌ ಹೇಳಿದರು.