- Home
- Karnataka Districts
- ಬಿಲ್ ಪಾವತಿಸದ ಸರ್ಕಾರ; ತಾಲೂಕು ಆಫೀಸಿನ ಟೇಬಲ್, ಕುರ್ಚಿ, ಕಂಪ್ಯೂಟರ್ ಜಪ್ತಿ ಮಾಡಿದ ಕೋರ್ಟ್!
ಬಿಲ್ ಪಾವತಿಸದ ಸರ್ಕಾರ; ತಾಲೂಕು ಆಫೀಸಿನ ಟೇಬಲ್, ಕುರ್ಚಿ, ಕಂಪ್ಯೂಟರ್ ಜಪ್ತಿ ಮಾಡಿದ ಕೋರ್ಟ್!
ಸರ್ಕಾರದಿಂದ ಹಾರ್ಡ್‌ವೇರ್ ವ್ಯಾಪಾರಿಗೆ ಪಾವತಿಸಬೇಕಿದ್ದ ₹6 ಲಕ್ಷ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ನ್ಯಾಯಾಲಯವು ತಾಲ್ಲೂಕು ಪಂಚಾಯತಿ ಕಚೇರಿಯ ಪೀಠೋಪಕರಣ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಲು ಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ, ಅಧಿಕಾರಿಗಳು ಕುರ್ಚಿ, ಕಂಪ್ಯೂಟರ್ ವಶಕ್ಕೆ ಪಡೆದಿದ್ದಾರೆ.

ರಾಯಚೂರು (ಡಿ.15): ಗ್ರಾಮ ಪಂಚಾಯತಿಯೊಂದು ಹಾರ್ಡ್‌ವೇರ್ ವ್ಯಾಪಾರಿಯಿಂದ ವಸ್ತುಗಳನ್ನು ಖರೀದಿಸಿ ಒಂದು ವರ್ಷ ಕಳೆದರೂ ಹಣ ಪಾವತಿ ಮಾಡದ ಕಾರಣ, ಮಾನ್ವಿ ತಾಲ್ಲೂಕು ನ್ಯಾಯಾಲಯವು ವಿಶಿಷ್ಟ ಆದೇಶ ನೀಡಿದೆ. ನ್ಯಾಯಾಲಯದ ಆದೇಶದ ಮೇರೆಗೆ, ನ್ಯಾಯಾಧಿಕಾರಿಗಳು ಮಾನ್ವಿ ತಾಲ್ಲೂಕು ಪಂಚಾಯತಿ (ತಾ. ಪಂ.) ಕಚೇರಿಯ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು ವ್ಯಾಪ್ತಿಯ ಉಟಕನೂರು ಗ್ರಾಮ ಪಂಚಾಯತಿಯಿಂದ ಬಾಲಾಜಿ ಹಾರ್ಡ್‌ವೇರ್ ಮಳಿಗೆಯ ಮಾಲೀಕ ರಮೇಶ್ ಅವರಿಂದ ವಿವಿಧ ಕಚೇರಿ ಬಳಕೆಯ ವಸ್ತುಗಳನ್ನು ಖರೀದಿಸಲಾಗಿತ್ತು. ಈ ಖರೀದಿ ನಡೆದು ವರ್ಷ ಕಳೆದರೂ, ಸುಮಾರು ₹ 6 ಲಕ್ಷ ರೂಪಾಯಿಗಳ ಬಿಲ್ ಮೊತ್ತವನ್ನು ಪಂಚಾಯತಿ ಪಾವತಿ ಮಾಡಿರಲಿಲ್ಲ.
ಗ್ರಾಮ ಪಂಚಾಯತಿಯ ಈ ನಿರ್ಲಕ್ಷ್ಯದಿಂದ ಬೇಸತ್ತ ವ್ಯಾಪಾರಿ ರಮೇಶ್ ಅವರು ನ್ಯಾಯ ಕೋರಿ ಮಾನ್ವಿ ತಾಲೂಕು ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಈ ದಾವೆಯ ವಿಚಾರಣೆ ವೇಳೆ, ತಾಲ್ಲೂಕು ಪಂಚಾಯತಿ ಅಧಿಕಾರಿಗಳು ವ್ಯಾಪಾರಿಗೆ ಚೆಕ್ ಮೂಲಕ ಹಣ ಪಾವತಿ ಮಾಡುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು.
ಆದರೆ, ಭರವಸೆ ನೀಡಿದ ಬಳಿಕವೂ ಅಧಿಕಾರಿಗಳು ಹಣ ಪಾವತಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಕುಪಿತಗೊಂಡ ವ್ಯಾಪಾರಿ ರಮೇಶ್ ಅವರು ನ್ಯಾಯಾಲಯದಲ್ಲಿ ಹಣ ವಸೂಲಾತಿಗೆ ಮತ್ತೆ ಮನವಿ ಸಲ್ಲಿಸಿದರು. ವ್ಯಾಪಾರಿಯ ಮನವಿಯನ್ನು ಪುರಸ್ಕರಿಸಿದ ಮಾನ್ವಿ ತಾಲ್ಲೂಕು ನ್ಯಾಯಾಲಯವು, ಬಾಕಿ ಇರುವ ಹಣ ವಸೂಲಿಗಾಗಿ ಮಾನ್ವಿ ತಾ. ಪಂ. ಕಚೇರಿಯ ಪೀಠೋಪಕರಣ ಜಪ್ತಿಗೆ ಆದೇಶ ನೀಡಿದೆ.
ನ್ಯಾಯಾಲಯದ ಆದೇಶದ ಮೇರೆಗೆ ಇಂದು, 52 ಕುರ್ಚಿಗಳು, 10 ಕಪಾಟುಗಳು (ಅಲೆಮಾರಿಗಳು), 6 ಕಂಪ್ಯೂಟರ್‌ಗಳು ಸೇರಿ ಇನ್ನಿತರ ಮೌಲ್ಯಯುತ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಪಂಚಾಯತಿ ಮಾಡಿದ ತಪ್ಪಿಗೆ, ತಾಲ್ಲೂಕು ಪಂಚಾಯತಿ ಕಚೇರಿಯ ಪೀಠೋಪಕರಣಗಳು ಜಪ್ತಿಯಾಗಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸರ್ಕಾರದ ಕಚೇರಿಯಿಂದಲೇ ಹಣ ಪಾವತಿ ವಿಳಂಬವಾಗಿ ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ನಡೆದ ಈ ಘಟನೆ ಸ್ಥಳೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದೆ.

