ಅಂತರ್ಜಾತಿ ವಿವಾಹವಾದ ಮಗನ ಸುಳಿವು ಕೇಳುವ ನೆಪದಲ್ಲಿ, ಧಾರವಾಡದ ಕುಂದಗೋಳ ಪೊಲೀಸರು ಆತನ ತಾಯಿ ಲಕ್ಷ್ಮವ್ವ ಮೇಲೆ ಠಾಣೆಯಲ್ಲಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಜೊತೆಗೆ ಹಣ, ಚಿನ್ನಾಭರಣ ದೋಚಿದ್ದಾರೆ ಎಂದು ಆರೋಪಿಸಲಾಗಿದ್ದು, ಸಂತ್ರಸ್ತೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹುಬ್ಬಳ್ಳಿ/ಧಾರವಾಡ (ಡಿ.15): ಅಂತರ್ಜಾತಿ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಮಗನ ಸುಳಿವು ನೀಡುವಂತೆ ಕೇಳಿ, ಪೊಲೀಸರೇ ಆತನ ತಾಯಿಯ ಮೇಲೆ ಠಾಣೆಯೊಳಗೆ ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಕೇಳಿಬಂದಿದೆ. ಹಲ್ಲೆಗೊಳಗಾದ ಮಹಿಳೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂದಗೋಳ ತಾಲೂಕಿನ ಮುಳ್ಳಳ್ಳಿ ಗ್ರಾಮದ ಲಕ್ಷ್ಮವ್ವ ಬೆಂತೂರು ಹಲ್ಲೆಗೊಳಗಾದ ಮಹಿಳೆ. ಲಕ್ಷ್ಮವ್ವ ಅವರ ಪುತ್ರ ದೇವರಾಜ್, ಎದುರು ಮನೆಯ ಸುಧಾ ಎಂಬ ಯುವತಿಯನ್ನು ಪ್ರೀತಿಸಿ ತಿಂಗಳ ಹಿಂದೆ ಓಡಿ ಹೋಗಿ ವಿವಾಹವಾಗಿದ್ದರು. ಇದು ಅಂತರ್ಜಾತಿ ವಿವಾಹವಾಗಿದ್ದರಿಂದ ಯುವತಿಯ ಮನೆಯವರು ಕುಂದಗೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ನಿನ್ನೆ (ಭಾನುವಾರ) ಕುಂದಗೋಳ ಪೊಲೀಸರು ಲಕ್ಷ್ಮವ್ವ ಅವರನ್ನು ಠಾಣೆಗೆ ಕರೆಸಿದ್ದಾರೆ. ಠಾಣೆಯಲ್ಲಿ ಕೂಡಿ ಹಾಕಿ, ಪುರುಷ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿಕೊಂಡು ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಚಿನ್ನಾಭರಣ ದೋಚಿದ ಆರೋಪ:
ಪೊಲೀಸರು ಬೆಲ್ಟ್‌ನಿಂದ ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಲಕ್ಷ್ಮವ್ವ ಕಣ್ಣೀರು ಹಾಕಿದ್ದಾರೆ. 'ನನ್ನ ಮಗ ಎಲ್ಲಿದ್ದಾನೆ ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದರೂ ನನ್ನನ್ನು ಬಿಡಲಿಲ್ಲ. ಹುಡುಗ-ಹುಡುಗಿಯ ಪ್ರೀತಿಗೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ' ಎಂದು ಮಾಧ್ಯಮಗಳ ಎದುರು ಅಳಲು ತೋಡಿಕೊಂಡಿದ್ದಾರೆ. ಇನ್ನು ಗಂಭೀರ ವಿಚಾರವೆಂದರೆ, ಹಲ್ಲೆ ಮಾಡುವ ಜೊತೆಗೆ ಪೊಲೀಸರು ಲಕ್ಷ್ಮವ್ವ ಅವರ ಬಳಿ ಇದ್ದ ₹ 20 ಸಾವಿರ ನಗದು, ಹಾಗೂ ಸುಮಾರು 27 ಗ್ರಾಂ ಚಿನ್ನದ ಸರ (ನೆಕ್ಲೇಸ್) ಮತ್ತು ಕಿವಿಯೋಲೆಗಳನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ ಎಂಬ ದೂರು ಕೂಡ ಕೇಳಿಬಂದಿದೆ.
ಪೊಲೀಸರ ಥಳಿತದಿಂದ ಅಸ್ವಸ್ಥಗೊಂಡ ಲಕ್ಷ್ಮವ್ವ, ಸದ್ಯ ಊರು ಬಿಟ್ಟು ಹುಬ್ಬಳ್ಳಿಗೆ ಬಂದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿ, ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


