Gadag| ಅನ್ನದಾನ ಶ್ರೀಗಳ ಅಂತಿಮ ದರ್ಶನಕ್ಕೆ ಲಕ್ಷ ಭಕ್ತರು: ತ್ರಿವಿಧ ದಾಸೋಹಿಗೆ ಕಣ್ಣೀರ ವಿದಾಯ
ಗದಗ(ನ.24): ಸೋಮವಾರ ಬೆಂಗಳೂರಿನಲ್ಲಿ ಶಿವೈಕ್ಯರಾದ, ಜ್ಞಾನ ದಾಸೋಹಿ, ಅನ್ನ, ಶಿಕ್ಷಣ ದಾಸೋಹಿ, ಹಿಂದುಳಿದ ಪ್ರದೇಶಗಳಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಲಕೆರೆ ಅಭಿನವ ಅನ್ನದಾನೇಶ್ವರ ಶ್ರೀಗಳ(Dr Abhinava Annadaneshwara Swamiji) ಅಂತಿಮ ದರ್ಶನಕ್ಕೆ 1 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು.
ಅನ್ನ-ಜ್ಞಾನ ದಾಸೋಹಿಯಾಗಿದ್ದ ಅವರ ಅಂತಿಮ ದರ್ಶನಕ್ಕೆ ಗಜೇಂದ್ರಗಡ ತಾಲೂಕಿನ ಹಾಲಕೆರೆಯ ಅನ್ನದಾನ ಮಠದಲ್ಲಿ ಸಕಲ ವ್ಯವಸ್ಥೆ ಜತೆಗೆ ಸೂಕ್ತ ಪೊಲೀಸ್(Police) ಬಂದೋಬಸ್ತ್ ಒದಗಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮ, ಪಟ್ಟಣ, ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಹರಿದು ಬಂದ ಭಕ್ತರು ಲಿಂಗೈಕ್ಯ ಶ್ರೀಗಳ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.
ಶಿವಯೋಗಿ ಮಂದಿರದ(Shivayoga Mandir) ಮೂಲಕ ಈ ನಾಡಿಗೆ ನೂರಾರು ಸ್ವಾಮೀಜಿಗಳನ್ನು ತಯಾರಿಸಿ ನಾಡಿಗೆ(Karnataka) ಸಮರ್ಪಿಸಿದ ಅನ್ನದಾನ ಶ್ರೀಗಳ ಅಂತಿಮ ದರ್ಶನಕ್ಕೆ ಚಿತ್ರದುರ್ಗದ ಮುರಘಾ ಶರಣರು, ಕೋಡಿಮಠದ ಶ್ರೀ, ಧಾರವಾಡ ಮುರುಘಾ ಮಠದ ಶ್ರೀ, ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ 250ಕ್ಕೂ ಸ್ವಾಮೀಜಿಗಳು(Swamijis) ಆಗಮಿಸಿದ್ದರು.
ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ಜಿ.ಎಸ್. ಪಾಟೀಲ, ಮಾಜಿ ಸಂಸದ ಎಸ್.ಆರ್. ಪಾಟೀಲ ಸೇರಿದಂತೆ ಅನೇಕ ಗಣ್ಯರು ಸಹ ಅನ್ನದಾನ ಶ್ರೀಗಳ ಪಾರ್ಥಿವ ಶರೀರದ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು. ಜಿಲ್ಲಾಡಳಿತದ ಪರವಾಗಿ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಶಾಸಕ ಕಳಕಪ್ಪ ಬಂಡಿ ಸೇರಿದಂತೆ ಅನೇಕರು ಸ್ಥಳದಲ್ಲಿ ಹಾಜರಿದ್ದರು.
ಜ್ಞಾನ ದಾಸೋಹದೊಂದಿಗೆ ಅನ್ನದಾಸೋಹಕ್ಕೂ ಹೆಸರುವಾಸಿಯಾಗಿದ್ದ ಅನ್ನದಾನ ಶ್ರೀಗಳ ಅಗಲಿಕೆಯಿಂದ ಸಾವಿರಾರು ಭಕ್ತರು(Devotees) ದುಃಖತಪ್ತರಾಗಿದ್ದಾರೆ. ಶ್ರೀಗಳ ಅಂತಿಮ ದರ್ಶನಕ್ಕೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಹಾಲಕೆರೆ ಮಠಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ದೌಡಾಯಿಸಿದ್ದರು. ಬಂದ ಭಕ್ತರು ಹಸಿವಿನಿಂದ ಬಳಲಬಾರದು ಎಂದು ಶ್ರೀಮಠದಿಂದ ಅನ್ನ, ಸಾಂಬಾರ, ಸಜ್ಜಕ, ಬದನೆಕಾಯಿ ಪಲ್ಲೆ ಪ್ರಸಾದ ವ್ಯವಸ್ಥೆ ವ್ಯವಸ್ಥೆ ಮಾಡಲಾಗಿತ್ತು. ತಮ್ಮ ಜೀವನದುದ್ದಕ್ಕೂ ಅನ್ನದಾಸೋಹಗೈದ ಶ್ರೀಗಳ ಅಂತಿಮ ದರ್ಶನ ಪಡೆದ ಭಕ್ತರು, ದುಃಖತಪ್ತರಾಗಿಯೇ ಪ್ರಸಾದ ಸ್ವೀಕರಿಸಿದರು.
ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ವೇಳೆ ನಾಡಿನ ವಿವಿಧ ಭಾಗಗಳಿಂದ ಶ್ರೀಮಠದ ಭಕ್ತರು ತಮ್ಮ ವಾದ್ಯ ಮೇಳಗಳೊಂದಿಗೆ ಆಗಮಿಸಿ ಮೆರವಣಿಗೆಯಲ್ಲಿ ಭಾಗಿಯಾಗಿ ತಮ್ಮ ಸೇವೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಭಜನೆ, ಜಾಂಜಮೇಳ, ಕೋಲಾಟ, ಹೆಜ್ಜೆ ಮೇಳ ಮುಂತಾದವುಗಳು ಭಾಗಿಯಾಗಿದ್ದರೆ, ಹೊನ್ನಿಗನೂರಿನ ಭಕ್ತರು ನಂದಿ ಸಮೇತ ಆಗಮಿಸಿ ಮುಂದೆ ಭಜನೆ ತೆರಳುತ್ತಿದ್ದರೆ ಟ್ರ್ಯಾಕ್ಟರನಲ್ಲಿ ನಂದೀಶ ನಮಸ್ಕರಿಸುತ್ತಾ ತನ್ನ ಸೇವೆ ಕೂಡ ಶ್ರೀಗಳಿಗೆ ಸಲ್ಲಿಸಿದನು.
ಶ್ರೀಗಳ ಪಾರ್ಥಿವ ಶರೀರ ನಿನ್ನೆ ಸಂಜೆಯೇ ಬೆಂಗಳೂರಿನಿಂದ ಹೊಸಪೇಟೆ ಮಾರ್ಗವಾಗಿ ಹಾಲಕೆರೆ ತಲುಪಿತ್ತು. ಇಂದು ಮಧ್ಯಾಹ್ನದ ವರೆಗೆ ಮಠದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು.
ಮಧ್ಯಾಹ್ನ 3.30ಕ್ಕೆ ಶ್ರೀ ಮಠದ ಆವರಣದಲ್ಲಿಯೇ ಜಿಲ್ಲಾ ಪೊಲೀಸ್ ಇಲಾಖೆಯಿಂದ ಗೌರವ ರಕ್ಷೆ ಸಲ್ಲಿಸಲಾಯಿತು. ಆನಂತರ ಶ್ರೀಗಳನ್ನು ತೆರೆದ ಗಾಜಿನ ವಾಹನದಲ್ಲಿ ಗ್ರಾಮದಾದ್ಯಂತ ಮೆರವಣಿಗೆ ಮಾಡಿ ಗ್ರಾಮಸ್ಥರಿಗೆ ಶ್ರೀಗಳ ಅಂತಿಮ ದರ್ಶನ ಮಾಡಿಸಲಾಯಿತು.
ಬಳಿಕ ವಿವಿಧ ಮಠಾಧೀಶರ ಸಾನಿಧ್ಯ, ಮಠದ ಪ್ರಮುಖ ಭಕ್ತರ ನೇತೃತ್ವದಲ್ಲಿ ಕ್ರಿಯಾಸಮಾಧಿಯಲ್ಲಿ ಶಿವಯೋಗ ಮಂದಿರದಿಂದ ತರರಿಸಲಾಗಿದ್ದ ವಿಭೂತಿ, ಪತ್ರಿ-ಪುಷ್ಪ, ಶ್ರೀಗಂಧ, ರುದ್ರಾಕ್ಷಿ ಇತ್ಯಾದಿಗಳೊಂದಿಗೆ ಸಮಾಧಿಸ್ಥರನ್ನಾಗಿ ಮಾಡಲಾಯಿತು. ಈ ಮೂಲಕ ನಾಡಿನ ಬಹುದೊಡ್ಡ ಬಸವ ಪರಂಪರೆಯ ಕೊಂಡಿ ತೆರೆಗೆ ಸರಿದಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹ ಶ್ರೀಗಳಿಗೆ ಕಣ್ಣೀರ ವಿದಾಯ ಹೇಳಿತು.
ಶ್ರೀಗಳ ಅಂತ್ಯ ಕ್ರಿಯೆಯಲ್ಲಿ ಒಟ್ಟು 10 ಸಾವಿರ ವಿಭೂತಿ ಗಟ್ಟಿ ಬಳಸಲಾಗಿದೆ. ಇದರಲ್ಲಿ 1 ಸಾವಿರ ಕ್ರಿಯಾಗಟ್ಟಿ, 5 ಸಾವಿರ ಸಾದಾ ಗಟ್ಟಿಯನ್ನು ಶಿವಯೋಗಮಂದಿರದಿಂದ ತರಿಸಲಾಗಿದೆ. ಇದರೊಟ್ಟಿಗೆ 4 ಸಾವಿರ ಭಕ್ತರು ತಂದಿದ್ದು ವಿಭೂತಿಗಳು ಸೇರಿದಂತೆ ಒಟ್ಟು 10 ಸಾವಿರ ವಿಭೂತಿಯನ್ನು ಅಂತಿಮ ಸಂಸ್ಕಾರಕ್ಕೆ ಬಳಸಲಾಗಿದೆ, ವೀರಶೈವ ಲಿಂಗಾಯತ ಸಂಪ್ರದಾಯದಂತೆ ಕ್ರಿಯಾ ಸಮಾಧಿ ಶ್ರೀಗಳಿದ್ದಾಗಲೇ ಅವರೇ ಸಿದ್ಧಪಡಿಸಿದ್ದರು. ಮಂಗಳವಾರ ಅಂತ್ಯಕ್ರಿಯೆ ಕೂಡಾ ಅವರ ಇಚ್ಛೆಯಂತೆಯೇ ನಡೆಸಲಾಯಿತು. ಅಂತ್ಯಕ್ರಿಯೆ ಪ್ರಕ್ರಿಯೆ ಮತ್ತು ವಿಧಿ-ವಿಧಾನಗಳನ್ನು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೇಂದ್ರ ಶ್ರೀ ಹಾಗೂ ಒಳಬಳ್ಳಾರಿಯ ಸಿದ್ದಲಿಂಗ ಶ್ರೀಗಳವರ ನೇತೃತ್ವದಲ್ಲಿ ನಾಡಿನ 100ಕ್ಕೂ ಅಧಿಕ ಹರ ಗುರು ಚರ ಮೂರ್ತಿಗಳು ಹಾಗೂ ಅಪಾರ ಭಕ್ತ ಸಮೂಹದ ಉಪಸ್ಥಿತಿಯಲ್ಲಿ ಡಾ. ಅಭಿನವ ಅನ್ನದಾನ ಶ್ರೀಗಳು ಭೂ ತಾಯಿಯ ಮಡಿಲು ಸೇರಿದರು.
ಸೋಮವಾರ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದ ಹಾಲಕೆರೆ ಅನ್ನದಾನೇಶ್ವರ ಮಠದ ಪೀಠಾಧಿಪತಿ ಡಾ.ಅಭಿನವ ಅನ್ನದಾನ ಮಹಾಸ್ವಾಮಿಗಳ ಪಾರ್ಥಿವ ಶರೀರದ ಅಂತ್ಯಕ್ರಿಯೆ(Funeral) ಹಾಲಕೆರೆಯ ಮಠದ ಆವರಣದಲ್ಲಿನ ಕ್ರಿಯಾಸಮಾಧಿಯಲ್ಲಿ ಮಂಗಳವಾರ ಸಂಜೆ ಅಪಾರ ಭಕ್ತ ಸಮೂಹದ ಸಮ್ಮುಖದಲ್ಲಿ ವೀರಶೈವ-ಲಿಂಗಾಯತ(Veerashaiva Lingayat) ವಿಧಿ ವಿಧಾನದಂತೆ ನೆರವೇರಿತು.
ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಗ್ರಾಮದಲ್ಲಿ ಪ್ರಾರಂಭವಾಗುತ್ತಿದ್ದಂತೆ ಮನೆ ಸೇರಿದಂತೆ ಎತ್ತರದ ಸ್ಥಳಗಳಲ್ಲಿ ನಿಂತಿದ್ದ ಭಕ್ತರು ಕೈಯಲ್ಲಿ ಹೂವು ಹಿಡಿದುಕೊಂಡು ಶ್ರೀಗಳಿಗೆ ಅನ್ನದಾನೇಶ್ವರ ಮಹಾರಾಜ ಕೀ ಜೈ ಎಂದು ಜೈ ಘೋಷ ಕೂಗಿ ಪುಷ್ಪವೃಷ್ಟಿಅರ್ಪಿಸಿದರು. ಬಾಯಲ್ಲಿ ಶ್ರೀಗಳಿಗೆ ಜಯಘೋಷ ಹಾಕುತ್ತಿದ್ದರೆ ಕಣ್ಣಲ್ಲಿ ನೀರು ಜಿನುಗುತ್ತಿತ್ತು.
ಶ್ರೀಗಳ ಅಂತಿಮ ದರ್ಶನ ಹಾಗೂ ಅವರ ಅಂತಿಮಯಾತ್ರೆಗೆ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬಂದಿದ್ದರು. ಇದರಿಂದ ಕೆಲ ಗಂಟೆಗಳ ಕಾಲ ಹಾಲಕೆರೆ ಗ್ರಾಮ ಅಕ್ಷರಶಹ ಶ್ರೀಗಳ ಜಯಘೋಷದಲ್ಲಿ ಮುಳುಗಿ ಹೋಗಿದ್ದರೆ, ಬಂದಿದ್ದ ಭಕ್ತರು, ವಾದ್ಯ ಮೇಳಗಳನ್ನು ಸರಿಯಾಗಿ ನಿರ್ವಹಿಸಿ ಎಲ್ಲರಿಗೂ ದರ್ಶನ ಭಾಗ್ಯ ಸಿಗುವಂತೆ ಮಾಡುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹರಸಾಹಸ ಪಡಬೇಕಾಯಿತು. ಇದರೊಟ್ಟಿಗೆ ಕೆಲ ಎನ್‌ಸಿಸಿ ಹಾಗೂ ಹೋಂ ಗಾರ್ಡ್ ಕೂಡಾ ಬಿಡುವಿಲ್ಲದೇ ಕಾರ್ಯ ನಿರ್ವಹಿಸಿದರೂ ಜನ ದಟ್ಟಣೆ ಮಾತ್ರ ತಪ್ಪಿಸಲು ಸಾಧ್ಯವಾಗಲಿಲ್ಲ.