- Home
- Karnataka Districts
- ಕಳೆದು ಹೋದ ಸಾಕು ನಾಯಿ ಹುಡುಕಲು ಹೋದ ಮಗ ರೈಲ್ವೆ ಟ್ರ್ಯಾಕ್ ಹೆಣವಾದ; ರೈಲು ಡಿಕ್ಕಿಯಾಗಿ 16ರ ಬಾಲಕ ಸಾವು!
ಕಳೆದು ಹೋದ ಸಾಕು ನಾಯಿ ಹುಡುಕಲು ಹೋದ ಮಗ ರೈಲ್ವೆ ಟ್ರ್ಯಾಕ್ ಹೆಣವಾದ; ರೈಲು ಡಿಕ್ಕಿಯಾಗಿ 16ರ ಬಾಲಕ ಸಾವು!
ನೆಲಮಂಗಲದಲ್ಲಿ, ಕಾಣೆಯಾದ ತನ್ನ ಸಾಕು ನಾಯಿಯನ್ನು ಹುಡುಕಲು ಹೋಗಿದ್ದ 16 ವರ್ಷದ ಪಿಯುಸಿ ವಿದ್ಯಾರ್ಥಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಯೋಗೇಂದ್ರ ಎಂಬ ಈ ಬಾಲಕ, ಭರವಸೆಯ ಕ್ರೀಡಾಪಟುವಾಗಿದ್ದು, ಈ ದುರ್ಘಟನೆಯು ಕುಟುಂಬ ಮತ್ತು ಸ್ನೇಹಿತರಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.

ನಾಯಿ ಹುಡುಕಲು ಹೋಗಿ ರೈಲ್ವೆ ಟ್ರ್ಯಾಕ್ ಹೆಣವಾದ ಮಗ
ಬೆಂಗಳೂರು (ಜ.24): ಸಾಕು ಪ್ರಾಣಿಗಳ ಮೇಲಿನ ಅತಿಯಾದ ಪ್ರೀತಿ ಇಂದು ಒಂದು ಅಮೂಲ್ಯ ಜೀವವನ್ನು ಬಲಿಪಡೆದಿದೆ. ಕಾಣೆಯಾದ ತನ್ನ ನೆಚ್ಚಿನ ಸಾಕು ನಾಯಿಯನ್ನು ಹುಡುಕುತ್ತಾ ಹೋದ 16 ವರ್ಷದ ಪಿಯುಸಿ ವಿದ್ಯಾರ್ಥಿಯೋರ್ವ ರೈಲು ಡಿಕ್ಕಿಯಾಗಿ ಕೊನೆಯುಸಿರೆಳೆದ ಮನಕಲಕುವ ಘಟನೆ ನೆಲಮಂಗಲ ತಾಲೂಕಿನ ಮುದ್ದಲಿಂಗನಹಳ್ಳಿ ಗೇಟ್ ಬಳಿ ನಡೆದಿದೆ.
ಘಟನೆಯ ವಿವರ
ಮುದ್ದಲಿಂಗನಹಳ್ಳಿಯ ಶ್ರೀನಿವಾಸ್ ಮತ್ತು ಚನ್ನಮ್ಮ ದಂಪತಿಯ ಪುತ್ರ ಯೋಗೇಂದ್ರ (16) ಮೃತಪಟ್ಟ ಬಾಲಕ. ಯೋಗೇಂದ್ರ ಅವರ ಮನೆಯಲ್ಲಿದ್ದ ಸಾಕು ನಾಯಿಯು ಕಳೆದ ಎರಡು ದಿನಗಳ ಹಿಂದೆ ಕಾಣೆಯಾಗಿತ್ತು. ನಾಯಿಯ ಮೇಲೆ ಅತಿಯಾದ ಒಲವು ಹೊಂದಿದ್ದ ಯೋಗೇಂದ್ರ, ಅದು ಕಾಣೆಯಾದಾಗಿನಿಂದಲೂ ತೀವ್ರವಾಗಿ ಮನನೊಂದಿದ್ದ.
ಯೋಗೇಂದ್ರನಿಗೆ ಡಿಕ್ಕಿ
ಇಂದು ಬೆಳಿಗ್ಗೆ ಯಾರಿಗೂ ತಿಳಿಸದೆ, ತನ್ನ ನೆಚ್ಚಿನ ನಾಯಿ ಎಲ್ಲಿದೆ ಎಂದು ಹುಡುಕುತ್ತಾ ರೈಲ್ವೇ ಹಳಿಯ ಬಳಿ ತೆರಳಿದ್ದ ಎನ್ನಲಾಗಿದೆ. ಈ ವೇಳೆ ಹಳಿಯ ಮೇಲೆ ವೇಗವಾಗಿ ಬಂದ ರೈಲು ಯೋಗೇಂದ್ರನಿಗೆ ಡಿಕ್ಕಿ ಹೊಡೆದಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಓಡಿಬಂದ ಪೋಷಕರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಕಳೆದುಹೋಯಿತು ಕ್ರೀಡಾ ಲೋಕದ ಪ್ರತಿಭೆ
ಮೃತ ಯೋಗೇಂದ್ರ ಕೇವಲ ವಿದ್ಯಾರ್ಥಿಯಲ್ಲದೆ, ಒಬ್ಬ ಉತ್ತಮ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದ. ಲಾಂಗ್ ಜಂಪ್‌ನಲ್ಲಿ ಆಸಕ್ತಿ ಹೊಂದಿದ್ದ ಆತ, ಶಾಲಾ ಹಂತದಲ್ಲಿ ಹಲವಾರು ಪದಕ ಹಾಗೂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ. ಭವಿಷ್ಯದಲ್ಲಿ ಕ್ರೀಡಾ ಲೋಕದಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದ ಯುವಕನಿಗೀಗ ವಿಧಿಯು ಸಾವಿನ ರೂಪದಲ್ಲಿ ಬಂದಪ್ಪಿರುವುದು ದುರಂತವೇ ಸರಿ.
ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ
ಇನ್ನು ಘಟನಾ ಸ್ಥಳಕ್ಕೆ ಯಶವಂತಪುರ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ನೆಲಮಂಗಲದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಯಿತು. ಶವಗಾರದ ಬಳಿ ಸೇರಿದ ಮೃತನ ಗೆಳೆಯರು ಹಾಗೂ ಕುಟುಂಬಸ್ಥರ ಕಣ್ಣೀರು ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸುತ್ತಿತ್ತು. ಈ ಕುರಿತು ಯಶವಂತಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

