ಅನ್ ಲಾಕ್ ಖುಷಿಯಲ್ಲಿ ನಂದಿ ಬೆಟ್ಟದ ಕಡೆ ಹೊರಟವರು ಎಲ್ಲ ಮರೆತರು!
ಚಿಕ್ಕಬಳ್ಳಾಪುರ (ಅ. 04) ಅನ್ ಲಾಕ್ ನಂತರ ಪ್ರವಾಸಿ ತಾಣಗಳು ತೆರೆದುಕೊಂಡಿವೆ. ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ಅನ್‌ಲಾಕ್ ಬಳಿಕ ಭಾನುವಾರ ಇದೇ ಮೊದಲ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಆಗಮಿಸಿದ್ದರಿಂದ ನಂದಿಗಿರಿಧಾಮ ದಿನವೀಡಿ ಪ್ರವಾಸಿಗರಿಂದ ಹೌಸ್‌ಫುಲ್ ಆಗಿತ್ತು.
ಕೇಂದ್ರ ಸರ್ಕಾರ ಅನ್‌ಲಾಕ್ ಮಾರ್ಗಸೂಚಿ ಪ್ರಕಟಿಸಿದ ಬಳಿಕ ಜಿಲ್ಲಾಡಳಿತ ಕಳೆದ ಸೆ.7 ರಿಂದಲೇ ಪ್ರವಾಸಿಗರಿಗೆ ನಂದಿಗಿರಿಧಾಮವನ್ನು ಮುಕ್ತಗೊಳಿಸಿತ್ತು. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಗಿರಿಧಾಮದ ಕಡೆಗೆ ಹೆಜ್ಜೆ ಹಾಕಿರಲಿಲ್ಲ. ಆದರೆ ಭಾನುವಾರ ನಿರೀಕ್ಷೆಗೂ ಮೀರಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಗಿರಿಧಾಮಕ್ಕೆ ಆಗಮಿಸಿ ಗಮನ ಸೆಳೆದರು.
ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ಪ್ರವಾಸಿಗರು, ಐಟಿ, ಬಿಟಿ ಟೆಕ್ಕಿಗಳು, ಯುವಕ, ಯುವತಿಯರು ಕಾರು, ಬೈಕ್ ಏರಿ ಗಿರಿಧಾಮದ ಕಡೆಗೆ ಹೊರಟಿದ್ದರು. ಬೆಳಗ್ಗೆ 5 ಗಂಟೆಗೆ ಗಿರಿಧಾಮದ ಪ್ರವೇಶ ದ್ವಾರದಲ್ಲಿ ಒಳ ಪ್ರವೇಶಕ್ಕೆ ಕಾದು ಕುಳಿತಿದ್ದರು. ಸಾಮಾಜಿಕ ಅಂತರ ಇಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಕಾರು, ಬೈಕ್ ಗಿರಿಧಾಮದಕ್ಕೆ ಆಗಮಿಸಿದ್ದರಿಂದ ಮೊದಲೇ ತಿರುವುಗಳಿಂದ ಕೂಡಿದ್ದ ಗಿರಿಧಾಮದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ತೀವ್ರ ಪರದಾಡಬೇಕಾಯಿತು.
ಕೆಲ ಪ್ರವಾಸಿಗರು ಪ್ರವೇಶಕ್ಕೆ ತಡ ಮಾಡಿದ್ದರಿಂದ ಗಲಾಟೆ ನಡೆಸಿದ್ದಾರೆ. ಇನ್ನು ಕೆಲವರು ಕಾರುಗಳ ಮೇಲೆ ಕೂತು ಸಿಗರೇಟ್ ಸೇದಿದ್ದಾರೆ. ಇದನ್ನು ಕೆಲವರು ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಪ್ರವಾಸಿಗರ ಮೋಜು, ಮಸ್ತಿಗೆ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ಈ ಬಗ್ಗೆ ನಂದಿಗಿರಿಧಾಮ ವಿಶೇಷ ಅಧಿಕಾರಿ ಗೋಪಾಲ್‌ರನ್ನು ಸಂಪರ್ಕಿಸಿದರೆ ಎಲ್ಲದಕ್ಕೂ ನಾವು ಕಾವಲು ಇರಲು ಸಾಧ್ಯವಿಲ್ಲ ಎಂದರು.
ನಂದಿಗಿರಿಧಾಮಕ್ಕೆ ಭಾನುವಾರ ಬೇಟಿ ನೀಡಿ ರಾಜ್ಯ ತೋಟಗಾರಿಕೆ ಹಾಗು ರೇಷ್ಮೆ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕೋಟಾರಿಯಾ ಸಾಮಾಜಿಕ ಅಂತರ ಹಾಗೂ ಮಾಸ್‌ಕ್ ಧರಿಸದೇ ಬರುವ ಪ್ರವಾಸಿಗರಿಗೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸುವಂತೆ ಸೂಚಿಸಿದರು.
ಅಲ್ಲದೇ ಗಿರಿಧಾಮದಲ್ಲಿ ಪ್ರವಾಸಿಗರಿಗೆ ಅರಿವು ಮೂಡಿಸುವ ಹಲವು ಜಾಗೃತಿ ಫಲಕಗಳ ಅಳವಡಿಕೆಗೆ ಗಿರಿಧಾಮದ ವಿಶೇಷಾಧಿಕಾರಿ ಗೋಪಾಲ್‌ಗೆ ಸೂಚಿಸಿದರು.