ಪ್ರವಾಸಿ ತಾಣದಲ್ಲಿ ಎಣ್ಣೆಪಾರ್ಟಿ; ಪುಂಡರ ನಶೆ ಇಳಿಸಿದ ಚಿಕ್ಕಮಗಳೂರು ಪೊಲೀಸರು
ಪ್ರವಾಸಕ್ಕೆಂದು ಬಂದು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸಿ ಮೋಜು-ಮಸ್ತಿ ಮಾಡುತ್ತಿದ್ದವರಿಗೆ ಚಿಕ್ಕಮಗಳೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ವಿವಿಧಡೆ 30 ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೂಡಿಗೆರೆ ತಾಲ್ಲೂಕು ಬಣಕಲ್ ಠಾಣೆ ವ್ಯಾಪ್ತಿಯ ಪ್ರವಾಸಿ ತಾಣಗಳಲ್ಲಿ ವಾಹನಗಳಲ್ಲೆ ಮದ್ಯ ಸೇವಿಸುತ್ತಾ ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದವರು ಹಾಗೂ ತರೀಕೆರೆ ತಾಲ್ಲೂಕು ಲಿಂಗದಹಳ್ಳಿ ಠಾಣೆ ವ್ಯಾಪ್ತಿಯ ಪ್ರವಾಸಿ ಸ್ಥಳಗಳಲ್ಲಿ ಅತಿವೇಗದ ಚಾಲನೆ, ಹಾಗೂ ಕುಡಿದು ವಾಹನ ಚಲಾಯಿಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಣಕಲ್ನ ಪ್ರವಾಸಿ ತಾಣವಾದ ದೇವರ ಮನೆಗೆ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡಿದ್ದ ಪ್ರವಾಸಿಗರ ಪೈಕಿ ಹಲವರು ಎಲ್ಲೆಂದರಲ್ಲಿ ಮದ್ಯ ಸೇವಿಸಿ, ಬಾಟಲಿಗಳು, ಆಹಾರದ ಪೊಟ್ಟಣಗಳನ್ನು ಬೇಕಾಬಿಟ್ಟಿ ಬಿಸಾಡಿ ಪರಿಸರಕ್ಕೆ ಹಾನಿ ಉಂಟು ಮಾಡಿದ್ದಲ್ಲದೆ, ಅಪಾಯಕಾರಿ ಸ್ಥಳದಲ್ಲಿ ಕುಣಿದು ಕುಪ್ಪಳಿಸಿ ಉಳಿದ ಪ್ರವಾಸಿಗರಿಗೆ ಕಿರಿ ಕಿರಿ ಉಂಟು ಮಾಡಿದ್ದರು. ಈ ಬಗ್ಗೆ ಸ್ಥಳೀಯ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.ಇಂತಹ ಪುಂಡರ ವಿರುದ್ಧ ಕಾನೂನು ಕ್ರಮ ಕೈಗೊಂಡು ಮತ್ತೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಗಿತ್ತು.
ಇದರಿಂದ ಎಚ್ಚೆತ್ತುಕೊಂಡ ಬಣಕಲ್ ಠಾಣಾಧಿಕಾರಿ ಡಿ.ವಿ.ರೇಣುಕಾ ಅವರು ಸಿಬ್ಬಂದಿಗಳೊಂದಿಗೆ ದೇವರ ಮನೆಗೆ ಭೇಟಿ ನೀಡಿ ಮದ್ಯಪಾನ ಹಾಗೂ ದೂಮಪಾನ ಮಾಡುತ್ತಿದ್ದವರ ವಿರುದ್ಧ ಕಲಂ 92 (ಪಿ) ಕರ್ನಾಟಕ ಅಡಿಯಲ್ಲಿ 20 ಪ್ರಕರಣಗಳನ್ನು ಹಾಗೂ ಕಲಂ: 4/6 ದೂಮಪಾನ ನಿಷೇಧ ಕಾಯ್ದೆ ಅಡಿಯಲ್ಲಿ ಸುಮಾರು 9 ಪ್ರಕರಣಗಳನ್ನು ದಾಖಲಿಸಿ ಸೂಕ್ತ ಎಚ್ಚರಿಕೆಯನ್ನು ನೀಡಿದ್ದಾರೆ.
ಇದೇ ವೇಳೆ ಲಿಂಗದಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯ ಸೇವಿಸಿ ಅತಿ ವೇಗವಾಗಿ ವಾಹನ ಚಾಲನೆ ಮಾಡುವುದಲ್ಲದೆ, ಅರಚಾಡುತ್ತಾ, ಸಾರ್ವಜನಿಕರಿಗೆ ಭಯ ಉಂಟು ಮಾಡುವ ರೀತಿ ವರ್ತಿಸುತ್ತಿದ್ದವರ ವಿರುದ್ಧ ಪೊಲೀಸರು ಸಂಖ್ಯೆ: 47/24 ಮತ್ತು 281 ಬಿಎನ್ಎಸ್ ಮತ್ತು 185 ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಕಾರನ್ನೂ ವಶಕ್ಕೆ ಪಡೆದು ಕಾನೂನು ರೀತಿ ಕ್ರಮ ಕೈಗೊಂಡಿದ್ದಾರೆ.
ಪ್ರವಾಸಿ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ, ಕಿರಿಕಿರಿ ಉಂಟುಮಾಡಬಾರದು, ಉಪದ್ರವದಲ್ಲಿ ತೊಡಗಬಾರದು ಎಂದು ಪ್ರವಾಸಿಗರಿಗೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ವಿಕ್ರಮ ಅಮಟೆ ಎಚ್ಚರಿಸಿದ್ದಾರೆ.ಪ್ರವಾಸಿ ಸ್ಥಳಗಳಲ್ಲಿ ಮದ್ಯಪಾನ ಮಾಡಬಾರದು, ಇತರರಿಗೆ ಅನಾನುಕೂಲತೆಯನ್ನುಂಟು ಮಾಡುವ ರೀತಿಯಲ್ಲಿ ವಾಹನಗಳನ್ನು ನಿಲ್ಲಿಸಬಾರದು, ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಸೂಚನೆ ನೀಡಿದ್ದಾರೆ.ಪ್ರವಾಸಿ ತಾಣಗಳಲ್ಲಿ ಮಹಿಳೆಯರು ಅಥವಾ ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಮಾಡಬಾರದು, ಈವ್ ಟೀಸಿಂಗ್ ನಲ್ಲಿ ತೊಡಗಬಾರದು, ಪ್ಲಾಸ್ಟಿಕ್ ಬಾಟಲ್ ಅಥವಾ ಇತರೆ ಅನುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು, ಪ್ರಕೃತಿ ಮತ್ತು ಅದರ ಉತ್ತಮ ನಿರ್ವಹಣೆ ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ ಎಂದು ಎಚ್ಚರಿಸಿದ್ದಾರೆ.ಶಿಸ್ತು, ಕಾನೂನು ಹಾಗೂ ನೀತಿ ನಿಯಮಗಳನ್ನು ಸದಾ ಅನುಸರಿಸಿ ಹಾಗೂ ಗೌರವಿಸಬೇಕು. ಅರಣ್ಯ ಇಲಾಖೆ, ಜಿಲ್ಲಾಡಳಿತದ ಸೂಚನೆಗಳನ್ನು ತಪ್ಪದೆ ಪಾಲಿಸುವಂತೆ ಸೂಚಿಸಿದ್ದಾರೆ.
ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಬಾರದು, ಪ್ರವಾಸಿ ಸ್ಥಳಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು, ಎಸೆಯಬಾರದು. ತಮ್ಮ ಸುರಕ್ಷತೆ ಮತ್ತು ನಿಮ್ಮ ಪ್ರೀತಿಪಾತ್ರರ ಸುರಕ್ಷತೆಯ ಬಗ್ಗೆ ಸದಾ ಜಾಗರೂಕರಾಗಿರಬೇಕು ಎಂದು ತಿಳಿಸಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು