- Home
- Karnataka Districts
- ಶ್ರೀರಂಗಪಟ್ಟಣ ದಸರಾಗೆ ನಟ ರವಿಚಂದ್ರನ್ ಚಾಲನೆ: ಆನೆ ಧನಂಜಯನ ಮೇಲೆ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿ
ಶ್ರೀರಂಗಪಟ್ಟಣ ದಸರಾಗೆ ನಟ ರವಿಚಂದ್ರನ್ ಚಾಲನೆ: ಆನೆ ಧನಂಜಯನ ಮೇಲೆ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿ
ಮಂಡ್ಯದ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ನಟ ವಿ. ರವಿಚಂದ್ರನ್ ಅವರು ಅಧಿಕೃತವಾಗಿ ಚಾಲನೆ ನೀಡಿದರು. ಆನೆ ಧನಂಜಯನ ಮೇಲೆ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಗೆ ಸಚಿವರು ಪುಷ್ಪಾರ್ಚನೆ ಮಾಡಿದರು. ಸಚಿವರಾದ ಚಲುವರಾಯಸ್ವಾಮಿ ಮತ್ತು ನರೇಂದ್ರಸ್ವಾಮಿ ಸಾಥ್ ನೀಡಿದರು.

ಕ್ರೇಜಿಸ್ಟಾರ್ ವಿ. ರವಿಚಂದ್ರನ್
ಮಂಡ್ಯ (ಅ.15): ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ತೊಟ್ಟಿಲಾದ ಪವಿತ್ರ ಶ್ರೀರಂಗಪಟ್ಟಣ ದಸರಾ ಮಹೋತ್ಸವವು ವಿಜೃಂಭಣೆಯಿಂದ ಆರಂಭಗೊಂಡಿದೆ. ಸ್ಯಾಂಡಲ್ವುಡ್ನ ‘ಕ್ರೇಜಿಸ್ಟಾರ್’ ನಟ ವಿ. ರವಿಚಂದ್ರನ್ ಅವರು ಈ ಐತಿಹಾಸಿಕ ದಸರಾಗೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಅದ್ಧೂರಿ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಸಾಥ್ ನೀಡಿದರು.
ಕುಂಭ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ:
ದಸರಾ ಮಹೋತ್ಸವದ ಅಂಗವಾಗಿ ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ಗ್ರಾಮದ ಬಾಬುರಾಯನ ವೃತ್ತದ ಬನ್ನಿಮಂಟಪದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ಮಧ್ಯಾಹ್ನ ಸರಿಯಾಗಿ 3:17ಕ್ಕೆ ಸಚಿವರು ಹಾಗೂ ಗಣ್ಯರು, ಧನಂಜಯ ಆನೆಯ ಮೇಲೆ ವಿರಾಜಮಾನಳಾಗಿದ್ದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಲ್ಕು ದಿನಗಳ ಕಾಲ ನಡೆಯಲಿರುವ ಐತಿಹಾಸಿಕ ಶ್ರೀರಂಗಪಟ್ಟಣ ದಸರಾಗೆ ಚಾಲನೆ ನೀಡಿದರು. ಪೂಜೆಗೂ ಮುನ್ನ ಬನ್ನಿ (ಶಮಿ) ಪೂಜೆ ನೆರವೇರಿಸಿದ ಸಚಿವರು, 'ನಾಡಿನಲ್ಲಿ ಉತ್ತಮ ಮಳೆಯಾಗಲಿ, ಸರ್ವರಿಗೂ ಒಳಿತಾಗಲಿ ಹಾಗೂ ರಾಜ್ಯ ಸುಭಿಕ್ಷವಾಗಿರಲಿ' ಎಂದು ತಾಯಿಯಲ್ಲಿ ಪ್ರಾರ್ಥಿಸಿದರು.
ಗಜಗಾಂಭೀರ್ಯ ಹೆಜ್ಜೆ ಹಾಕಿದ ಧನಂಜಯ ಆನೆ:
ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಹೊತ್ತು ಧನಂಜಯ ಆನೆಯು ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿತು. ಇದಕ್ಕೆ ಸಾಥ್ ನೀಡಿದ ಕುಮ್ಕಿ ಆನೆಗಳಾದ ರೂಪ ಮತ್ತು ಲಕ್ಷ್ಮಿಯ ನಡಿಗೆ ನೆರೆದಿದ್ದ ಅಸಂಖ್ಯಾತ ಜನರನ್ನು ಮಂತ್ರಮುಗ್ಧಗೊಳಿಸಿತು. ಇದೇ ವೇಳೆ 62 ಕಲಾ ತಂಡಗಳು ಹಾಗೂ 10 ಆಕರ್ಷಕ ಸ್ತಬ್ಧಚಿತ್ರಗಳ ಮೆರವಣಿಗೆಗೆ ಸಚಿವರು ಹಸಿರು ನಿಶಾನೆ ತೋರಿದರು. ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಕಲಾತಂಡಗಳ ಪ್ರದರ್ಶನ ದಸರೆಯ ಮೆರುಗನ್ನು ಇಮ್ಮಡಿಸಿತು.
ಧನಂಜಯ ಆನೆ ತಾಯಿಯನ್ನು ಹೊರುವುದು ನಮ್ಮ ಪುಣ್ಯ - ಸಚಿವ ಚಲುವರಾಯಸ್ವಾಮಿ:
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎನ್. ಚಲುವರಾಯಸ್ವಾಮಿ, 'ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಯ ಅಂಬಾರಿಯನ್ನು ಹೊರುತ್ತಿದ್ದ ಧನಂಜಯ ಆನೆ, ಈಗ ಶ್ರೀರಂಗಪಟ್ಟಣದ ದಸರಾದಲ್ಲೂ ತಾಯಿಯನ್ನು ಹೊರುತ್ತಿರುವುದು ನಮ್ಮೆಲ್ಲರ ಪುಣ್ಯ. ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಶ್ರಮದಿಂದ ದಸರಾ ಯಶಸ್ವಿಯಾಗಿ ಆಯೋಜನೆಯಾಗಿದೆ' ಎಂದರು.
ಪಾರಂಪರಿಕ ದಸರಾಗೆ ರಾಜ್ಯ ಸರ್ಕಾರ ನಿರೀಕ್ಷಿತ ಅನುದಾನ ನೀಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, 'ಅನುದಾನ ಎಷ್ಟು ಕೊಟ್ಟರೂ ಸಾಲದು. ಪ್ರತಿ ವರ್ಷ ಅನುದಾನದ ಮೊತ್ತ ಹೆಚ್ಚಾಗುತ್ತಲೇ ಇದೆ. ಆದರೆ ಆಚರಣೆಗೆ ಯಾವುದೇ ಕೊರತೆಯಾಗದಂತೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ' ಎಂದು ಸ್ಪಷ್ಟಪಡಿಸಿದರು.
ಕಾವೇರಿ ತಾಯಿಗೆ ಭಕ್ತಿಯಿಂದ ಪೂಜೆ
ಇದೇ ವೇಳೆ ಕಾವೇರಿ ಆರತಿ ಕುರಿತಾದ ಟೀಕೆಗಳಿಗೆ ತಿರುಗೇಟು ನೀಡಿ, 'ನಾವು ಕಾವೇರಿ ತಾಯಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದೇವೆ. ಕಾವೇರಿಯನ್ನೇ ನಂಬಿ ಬದುಕು ನಡೆಸುತ್ತಿದ್ದೇವೆ. ನಾಡಿನ ಜನರಿಗೆ ಶಾಂತಿ-ನೆಮ್ಮದಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಇದನ್ನೆಲ್ಲ ಆಡಂಬರ ಎನ್ನುವವರಿಗೆ ನಾವೇನು ಮಾಡಲು ಸಾಧ್ಯ?' ಎಂದು ಪ್ರಶ್ನಿಸಿದರು.
ಗಣ್ಯರ ಉಪಸ್ಥಿತಿ:
ಈ ಅದ್ಧೂರಿ ಕಾರ್ಯಕ್ರಮದಲ್ಲಿ ಸಚಿವರ ಪತ್ನಿ ಧನಲಕ್ಷ್ಮಿ ಚಲುವರಾಯಸ್ವಾಮಿ, ಸಚಿವರಾದ ಎಚ್.ಸಿ. ಬಾಲಕೃಷ್ಣ, ಪಿ.ಎಂ. ನರೇಂದ್ರಸ್ವಾಮಿ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಕದಲೂರು ಉದಯ್, ರವಿಕುಮಾರ್ ಗಣಿಗ, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

