- Home
- Karnataka Districts
- ರೈಲ್ವೆ ಮೇಲ್ಸೇತುವೆ ಶಂಕುಸ್ಥಾಪನೆ ವೇಳೆ ಸಚಿವ ಸೋಮಣ್ಣಗೆ ಮುಖಭಂಗ, ಹೊಡೆದಾಡಿಕೊಂಡ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು!
ರೈಲ್ವೆ ಮೇಲ್ಸೇತುವೆ ಶಂಕುಸ್ಥಾಪನೆ ವೇಳೆ ಸಚಿವ ಸೋಮಣ್ಣಗೆ ಮುಖಭಂಗ, ಹೊಡೆದಾಡಿಕೊಂಡ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು!
ಕೊಪ್ಪಳದ ಹಿಟ್ನಾಳ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ಶಂಕುಸ್ಥಾಪನೆ ವೇಳೆ ಪ್ರೋಟೋಕಾಲ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಗಲಾಟೆ ನಡೆಯಿತು. ಈ ಗದ್ದಲದಿಂದಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಕಾರ್ಯಕ್ರಮವನ್ನು ಮೊಟಕುಗೊಳಿಸಿ ನಿರ್ಗಮಿಸಿದರು.

ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ
ಕೊಪ್ಪಳ: ರೈಲ್ವೆ ಮೇಲ್ಸೇತುವೆ ಶಂಕುಸ್ಥಾಪನೆ ವೇಳೆ ಭಾರೀ ಹೈಡ್ರಾಮಾ. ಪ್ರೋಟೋಕಾಲ್ ವಿಚಾರಕ್ಕೆ ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ, ಕೇಂದ್ರ ಸಚಿವ ಸೋಮಣ್ಣ ಕಾರ್ಯಕ್ರಮ ಮೊಟಕುಗೊಳಿಸಿ ನಿರ್ಗಮನ. ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ನಡೆದ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಭಾರೀ ಹೈಡ್ರಾಮಾ ನಡೆದಿದೆ. ಕೇಂದ್ರ ಸರ್ಕಾರದ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರ ಎದುರೇ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಯಕ್ರಮ ಗದ್ದಲ, ವಾಗ್ವಾದ ಹಾಗೂ ಗಲಾಟೆಗೆ ಸಾಕ್ಷಿಯಾಯಿತು.
ತಂಗಡಗಿ , ಹಿಟ್ನಾಳ್ ಇಬ್ಬರ ಹೆಸರು ಇಲ್ಲದ್ದಕ್ಕೆ ಕಿಡಿ
ಕಾರ್ಯಕ್ರಮದ ಆಹ್ವಾನ ಪತ್ರಿಕೆ ಹಾಗೂ ಪ್ರೋಟೋಕಾಲ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗೂ ಸಂಸದ ರಾಜಶೇಖರ ಹಿಟ್ನಾಳ್ ಅವರ ಹೆಸರುಗಳು ಇಲ್ಲದಿರುವುದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಇದನ್ನು ಪ್ರೋಟೋಕಾಲ್ ಉಲ್ಲಂಘನೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು, ಸಚಿವ ಸೋಮಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲ ಕಾರ್ಯಕರ್ತರು ಖುರ್ಚಿ ಎಸೆಯಲು ಯತ್ನಿಸಿದ್ದು, ಸಚಿವ ಸೋಮಣ್ಣ ಅವರ ಕಾರಿನ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ವೇದಿಕೆ ಬಳಿ ಸಚಿವರ ನಡುವೆಯೇ ವಾಗ್ವಾದ
ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವ ಸೋಮಣ್ಣ ಪೂಜೆ ನೆರವೇರಿಸಿ ಶಂಕುಸ್ಥಾಪನೆ ಮಾಡಲು ಮುಂದಾದಾಗ, ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಕೂಡ ಪ್ರೋಟೋಕಾಲ್ ವಿಚಾರವನ್ನು ಎತ್ತಿ ಹಿಡಿದು ಆಕ್ಷೇಪ ವ್ಯಕ್ತಪಡಿಸಿದರು. ವೇದಿಕೆ ಬಳಿ ಸಚಿವ ಸೋಮಣ್ಣ, “ಇಂತಹ ಕಾರ್ಯಕ್ರಮಗಳಲ್ಲಿ ಪಟಾಲಂ ತೆಗೆದುಕೊಂಡು ಗಲಾಟೆ ಮಾಡಬೇಡಿ” ಎಂದು ಹೇಳಿದ್ದು, ಇದರಿಂದ ಶಿವರಾಜ್ ತಂಗಡಗಿ ಮತ್ತಷ್ಟು ಕೆರಳಿದರು. ಪರಿಣಾಮ ವೇದಿಕೆಯ ಬಳಿಯೇ ಇಬ್ಬರ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ನಡೆಯಿತು. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಜೋರಾಯಿತು.
ಕೇವಲ ಐದು ನಿಮಿಷದಲ್ಲೇ ಕಾರ್ಯಕ್ರಮ ಮುಕ್ತಾಯ
ಗಲಾಟೆ ತೀವ್ರಗೊಳ್ಳುತ್ತಿದ್ದಂತೆ, ಕೇಂದ್ರ ಸಚಿವ ವಿ. ಸೋಮಣ್ಣ ಅವರು ಕಾರ್ಯಕ್ರಮವನ್ನು ಮೊಟಕುಗೊಳಿಸಿ, ಕೇವಲ ಐದು ನಿಮಿಷಗಳಲ್ಲೇ ಸ್ಥಳದಿಂದ ನಿರ್ಗಮಿಸಿದರು. ಶಂಕುಸ್ಥಾಪನೆ ಕಾರ್ಯಕ್ರಮ ಪೂರ್ಣ ಪ್ರಮಾಣದಲ್ಲಿ ನಡೆಯದೆ ಅರ್ಧದಲ್ಲೇ ಮುಕ್ತಾಯವಾಯಿತು. ಕಾರ್ಯಕ್ರಮ ಮುಗಿಸಿ ಹೊರಟಾಗಲೂ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಸೋಮಣ್ಣ ಮೇಲೆ ಖುರ್ಚಿ ತೂರಲು ಯತ್ನಿಸಿದ್ದು, ಈ ವೇಳೆ ಅವರ ಅಂಗರಕ್ಷಕರು ತಕ್ಷಣ ಹಸ್ತಕ್ಷೇಪ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
‘ಪ್ರೋಟೋಕಾಲ್ ಮಿಸ್ ಆಗಿಲ್ಲ’ – ಸೋಮಣ್ಣ ಸ್ಪಷ್ಟನೆ
ಘಟನೆ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ವಿ. ಸೋಮಣ್ಣ, “ಪ್ರೋಟೋಕಾಲ್ ಉಲ್ಲಂಘನೆಯಾಗಿಲ್ಲ. ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹಣದಿಂದ ನಡೆಯುತ್ತಿರುವ ಯೋಜನೆ. ಉದ್ದೇಶಪೂರ್ವಕವಾಗಿ ಕಾರ್ಯಕರ್ತರ ನಡುವೆ ಗಲಾಟೆ ಮಾಡಿಸಲಾಗಿದೆ” ಎಂದು ಆರೋಪಿಸಿದರು.
26.97 ಕೋಟಿ ವೆಚ್ಚದ ಮೇಲ್ಸೇತುವೆ ಯೋಜನೆ
ಹಿಟ್ನಾಳ–ಗಿಣಗೇರಾ–ಮುನಿರಾಬಾದ್ ಮಾರ್ಗದಲ್ಲಿ, ಎಲ್‌ಸಿ ಸಂಖ್ಯೆ 77ರ ಬದಲಿಗೆ ರಸ್ತೆ ಮೇಲ್ಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಈ ಮೇಲ್ಸೇತುವೆ ಕಾಮಗಾರಿ ಸುಮಾರು ₹26.97 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ರಾಷ್ಟ್ರೀಯ ಹೆದ್ದಾರಿ 67ರ ಗಿಣಗೇರಾ–ಮುನಿರಾಬಾದ್ ರಸ್ತೆಯಲ್ಲಿ ಈ ಸೇತುವೆ ನಿರ್ಮಾಣವಾದರೆ, ಹುಲಿಗೆಮ್ಮ ದೇವಸ್ಥಾನ, ಅಂಜನಾದ್ರಿ ಯಾತ್ರಾರ್ಥಿಗಳು, ದಿನನಿತ್ಯ ಪ್ರಯಾಣಿಸುವ ಸಾರ್ವಜನಿಕರಿಗೆ ತಡೆರಹಿತ ಸಂಚಾರಕ್ಕೆ ಅನುಕೂಲವಾಗಲಿದೆ. ಈ ಮಾರ್ಗದಲ್ಲಿ ದಿನವೊಂದಕ್ಕೆ ಸರಾಸರಿ 2,25,800 ವಾಹನಗಳ ಸಂಚಾರ ಇರುವುದರಿಂದ, ಮೇಲ್ಸೇತುವೆ ನಿರ್ಮಾಣ ಅತ್ಯಂತ ಮಹತ್ವದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಕೀಯ ಕ್ರೆಡಿಟ್ ವಾರ್‌ಗೆ ಸಾಕ್ಷಿಯಾದ ಕಾರ್ಯಕ್ರಮ
ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ರಾಜಕೀಯ ಕ್ರೆಡಿಟ್ ವಾರ್‌ಗೆ ಸಾಕ್ಷಿಯಾದುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕೊಪ್ಪಳದಲ್ಲಿ ನಡೆದ ಈ ಘಟನೆ ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರತಿಧ್ವನಿ ಹೆಚ್ಚಾಗುವ ಸಾಧ್ಯತೆ ಇದೆ.

