ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರು ರಾಮನಗರ ಮತ್ತು ಬಿಡದಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಸಂಕಲ್ಪ ವ್ಯಕ್ತಪಡಿಸಿದ್ದಾರೆ. ಹೆಜ್ಜಾಲ-ಸತ್ಯಮಂಗಲ ಹೊಸ ರೈಲ್ವೆ ಯೋಜನೆಗೆ ಭೂಮಿ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಅವರು, ಕೇಂದ್ರದ ಬಳಿ ಹಣದ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಮನಗರ (ಡಿ.26): ಬೆಂಗಳೂರಿನ ಮಾದರಿಯಲ್ಲೇ ಈ ಭಾಗದ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಲಾಗಿದೆ. ಸಂಕ್ರಾಂತಿ ಹಬ್ಬದ ನಂತರ 101 ಎಲ್.ಸಿ ಗೇಟ್-ಗಳನ್ನು ಮೇಲ್ದರ್ಜೆಗೆ ಏರಿಸಿ ಅಂಡರ್ ಪಾಸ್ ನಿರ್ಮಾಣ ಮಾಡುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ರೂಪ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಘೋಷಿಸಿದರು.

ಇಂದು ಬಿಡದಿ ಮತ್ತು ರಾಮನಗರ ರೈಲ್ವೆ ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದರು.

ನಮಗೆ ಜಾಗ ಕೊಡ್ರಪ್ಪ, ಪ್ರಾಜೆಕ್ಟ್ ನಾನು ಮಾಡ್ತೀನಿ:

ಹೆಜ್ಜಾಲ-ಸತ್ಯಮಂಗಲ ಹೊಸ ರೈಲ್ವೆ ಯೋಜನೆ (142 ಕಿ.ಮೀ) ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು. 'ನಾನು ಡಿಕೆ ಶಿವಕುಮಾರ್ ಅವರಿಗೆ ಫೈಲ್ ಕೊಡ್ರಪ್ಪ ಎಂದು ಕೇಳಿದೆ, ಆದರೆ ಅವರು ಕೊಡಲಿಲ್ಲ. ಈಗಲೂ ಕೇಳ್ತಿದ್ದೇನೆ, ನಮಗೆ ಭೂಮಿ ಮಾಡಿಕೊಡಿ, ಯೋಜನೆಯನ್ನು ನಾನು ಪೂರ್ಣಗೊಳಿಸುತ್ತೇನೆ. ದಯವಿಟ್ಟು ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡಿ ಜಾಗ ಕೊಡಿಸಿ ಎಂದು ಶಾಸಕ ಬಾಲಕೃಷ್ಣ ಅವರ ಸಮ್ಮುಖದಲ್ಲೇ ಮನವಿ ಮಾಡಿದರು.

ನಮ್ಮತ್ರ ದುಡ್ಡಿಲ್ಲ ಎಂದ ಶಾಸಕ; ಕೌಂಟರ್ ನೀಡಿದ ಸಚಿವ:

ರೈಲ್ವೆ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿದಾಗ, ಕೌಂಟರ್ ನೀಡಿದ ಕೇಂದ್ರ ಸಚಿವ ವಿ ಸೋಮಣ್ಣ. 'ಅದೇ ನಿಮಗೆ ಬಂದಿರೋ ಗ್ರಹಾಚಾರ! ಕೇಂದ್ರ ಸರ್ಕಾರ ಎಂಬುದು ಒಂದು ಸಮುದ್ರ, ಅಲ್ಲಿ ಹಣದ ಕೊರತೆ ಇಲ್ಲ. ಸೋಮಣ್ಣನಂತಹವರು ಸಚಿವರಾಗಿರುವಾಗ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದರು. ಅಲ್ಲದೆ, ರಾಜ್ಯ ಸರ್ಕಾರ ದಿನಬೆಳಗಾದರೆ ಟೀಕೆ ಮಾಡುವುದನ್ನು ಬಿಟ್ಟು ಕೇಂದ್ರದ ನೆರವನ್ನು ಸದುಪಯೋಗಪಡಿಸಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ: ವಿ ಸೋಮಣ್ಣ ಖಂಡನೆ

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಯುವಕನ ಹತ್ಯೆಯನ್ನು ಸೋಮಣ್ಣ ತೀವ್ರವಾಗಿ ಖಂಡಿಸಿದರು. 'ಈ ವಿಚಾರವನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸಭೆ ನಡೆಸಿದ್ದು, ಬಾಂಗ್ಲಾದೇಶಕ್ಕೆ ನೀಡಬೇಕಾದ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಹಿಂದೂಗಳ ರಕ್ಷಣೆಗೆ ಕೇಂದ್ರ ಬದ್ಧವಾಗಿದೆ ಎಂದು ಬಿಡದಿಯಲ್ಲಿ ಹೇಳಿದರು.

ಸೋಮಣ್ಣ ಆ್ಯಕ್ಟೀವ್, ಕುಮಾರಸ್ವಾಮಿ-ಜೋಶಿ ಎಲ್ಲಿ?; ಬಾಲಕೃಷ್ಣ ವ್ಯಂಗ್ಯ

ಸೋಮಣ್ಣ ಅವರ ಕಾರ್ಯವೈಖರಿಯನ್ನು ಹೊಗಳುತ್ತಲೇ ಇತರ ಬಿಜೆಪಿ ಸಚಿವರ ವಿರುದ್ಧ ಟಾಂಗ್ ನೀಡಿದ ಶಾಸಕ ಬಾಲಕೃಷ್ಣ, ಸೋಮಣ್ಣ ಅವರು ಒಬ್ಬರೇ ಫೀಲ್ಡ್‌ಗಿಳಿದು ಕೆಲಸ ಮಾಡುತ್ತಾರೆ, ಆದರೆ ಕುಮಾರಸ್ವಾಮಿ ಕೇವಲ ಮಂಡ್ಯಕ್ಕೆ ಸೀಮಿತವಾಗಿದ್ದಾರೆ. ಪ್ರಹ್ಲಾದ್ ಜೋಶಿ ಹುಬ್ಬಳ್ಳಿ-ಧಾರವಾಡ ಬಿಟ್ಟು ಹೊರಬರಲ್ಲ, ಶೋಭಾ ಕರಂದ್ಲಾಜೆ ಮಂತ್ರಿಯಾಗಿದ್ದಾರೋ ಇಲ್ವೋ ಗೊತ್ತಿಲ್ಲ' ಎಂದು ಲೇವಡಿ ಮಾಡಿದರು. ಸೋಮಣ್ಣ ಮೂಲತಃ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬಂದವರಾದ್ದರಿಂದ ಇಷ್ಟು ಆ್ಯಕ್ಟೀವ್ ಆಗಿದ್ದಾರೆ, ಅಪ್ಪಟ ಬಿಜೆಪಿಯವರಾಗಿದ್ದರೆ ಮನೆಯಲ್ಲೇ ಕೂರುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಸಿಎಂ ಬದಲಾವಣೆ ಚರ್ಚೆ: 'ನಾನು ಹೈಕಮಾಂಡ್ ಅಲ್ಲ' ಎಂದ ಶಾಸಕ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಬಾಲಕೃಷ್ಣ, 'ನಾನು ಡಿಕೆಶಿ ಆಪ್ತನೇ ಹೊರತು ಹೈಕಮಾಂಡ್ ಆಪ್ತನಲ್ಲ. ಖರ್ಗೆ ಅವರ ಸೂಚನೆಯಂತೆ ರಾಜ್ಯ ನಾಯಕರು ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಎಂದರು. ಇನ್ನು ಡಿಕೆ ಶಿವಕುಮಾರ್ ಅವರ 'ವೈರಾಗ್ಯದ' ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, 'ಅದು ವೈರಾಗ್ಯವಲ್ಲ, ಪಕ್ಷ ಕಟ್ಟುವ ಕಷ್ಟ ಗೊತ್ತಿಲ್ಲದ ಹೊಸಬರಿಗೆ ಅವರು ವಾಸ್ತವ ತಿಳಿಸಿದ್ದಾರೆ ಅಷ್ಟೇ' ಎಂದು ಸ್ಪಷ್ಟನೆ ನೀಡಿದರು.