ಕೊಡಗಿನಲ್ಲಿ ಶಿಕ್ಷಕಿ ಅನುಮಾನಾಸ್ಪದ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ!
ನಾಪೋಕ್ಲುನಲ್ಲಿ ಶಿಕ್ಷಕಿ ಸಫ್ರಿನ್ ಅನುಮಾನಾಸ್ಪದ ಸಾವು. ಪತಿಯ ವಿರುದ್ಧ ಕುಟುಂಬಸ್ಥರಿಂದ ಕೊಲೆ ಆರೋಪ. ಪೊಲೀಸರಿಂದ ತನಿಖೆ ಮುಂದುವರಿಕೆ.

ಕೊಡಗು (ಜು.24): ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಗ್ರಾಮದಲ್ಲಿ ಶಿಕ್ಷಕಿಯೊಬ್ಬರ ಅನುಮಾನಾಸ್ಪದ ಸಾವು ಸ್ಥಳೀಯರಿಗೆ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಸಫ್ರಿನ್ (31) ಎಂಬ ಶಾಲಾ ಶಿಕ್ಷಕಿ ತನ್ನ ನಿವಾಸದಲ್ಲೇ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವವಾಗಿ ಕಂಡುಬಂದಿದ್ದಾರೆ. ಈ ಘಟನೆ ಇದೀಗ ಕೊಲೆ ಶಂಕೆಗೆ ಕಾರಣವಾಗಿದೆ.
ಮೃತ ಶಿಕ್ಷಕಿಯ ಪತಿ ನಝೀರ್, 'ಸಫ್ರಿನ್ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ' ಎಂಬ ಹೇಳಿಕೆ ನೀಡಿದ್ದಾರೆ. ಆದರೆ, ಸಫ್ರಿನ್‌ರ ಪೋಷಕರು ಮತ್ತು ಕುಟುಂಬದವರು ಈ ಆಘಾತಕಾರಿ ಸಾವಿಗೆ ಪತಿಯೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅವರು ಸಫ್ರಿನ್ ಕೊಲೆಗೀಡಾಗಿದ್ದಾರೆ ಎಂದು ಆರೋಪಿಸುತ್ತಿದ್ದು, ಮೃತ ಮಹಿಳೆಯ ಪತಿ ನಝೀರ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿ, ತನಿಖೆ ನಡೆಸಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ.
ಇನ್ನು ಪೊಲೀಸ್ ಮೂಲಗಳ ಪ್ರಕಾರ, ಸಫ್ರಿನ್ ಮತ್ತು ನಝೀರ್ ನಡುವೆ ನಿನ್ನೆ (ಜು.23) ತೀವ್ರ ಜಗಳ ನಡೆದಿತ್ತು. ಅದಾದ ಬಳಿಕ ತಡರಾತ್ರಿ ಮನೆಗೆ ಬಂದ ನಝೀರ್, ಸಫ್ರಿನ್ ನೇಣುಬಿಗಿದ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಈ ವರದಿ ಬಗ್ಗೆ ಸಫ್ರಿನ್ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ವರದಿ ಬಂದ ಬಳಿಕ ತನಿಖೆ ಇನ್ನಷ್ಟು ಗಂಭೀರ ರೀತಿಯಲ್ಲಿ ಮುಂದುವರೆಯಲಿದೆ.
ಮಂಜಿನ ನಗರಿ ಕೊಡಗಿನಲ್ಲಿ ಶಿಕ್ಷಕಿಯ ಸಾವು ಸ್ಥಳೀಯರಿಗೆ ಆತಂಕ ತಂದಿದೆ. ಜೊತೆಗೆ, ಶಿಕ್ಷಕಿ ಸಾವಿಗೆ ನಿಖರ ಕಾರಣವೇನು ಎಂಬುದು ಪೋಸ್ಟ್‌ಮಾರ್ಟಮ್ ವರದಿ ಮತ್ತು ಪೋಲೀಸರ ತನಿಖೆಯ ನಂತರವೇ ಗೊತ್ತಾಗಲಿದೆ. ಈ ಮಧ್ಯೆ, ಮೃತ ಮಹಿಳೆಯ ಕುಟುಂಬಸ್ಥರ ಕಣ್ಣೀರಿಗೆ ನ್ಯಾಯ ಸಿಗಲಿ ಎಂಬ ಆಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.