- Home
- Karnataka Districts
- ರಾಜ್ಯದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು; ಎಲ್ಲೆಲ್ಲಿ ಅಬ್ಬರಿಸಲಿದ್ದಾನೆ ಮಳೆರಾಯ? ಇಲ್ಲಿದೆ ಮಾಹಿತಿ
ರಾಜ್ಯದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು; ಎಲ್ಲೆಲ್ಲಿ ಅಬ್ಬರಿಸಲಿದ್ದಾನೆ ಮಳೆರಾಯ? ಇಲ್ಲಿದೆ ಮಾಹಿತಿ
ಕಳೆದ ಕೆಲವು ದಿನಗಳಿಂದ ವಿರಾಮ ತೆಗೆದುಕೊಂಡಿದ್ದ ಮಳೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲೂ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಹವಾಮಾನ ಇಲಾಖೆ ಮಾಹಿತಿ
ಕಳೆದ ನಾಲ್ಕೈದು ದಿನಗಳಿಂದ ಸಣ್ಣದಾದ ಬ್ರೇಕ್ ತೆಗೆದುಕೊಂಡಿದ್ದ ವರುಣದೇವ, ಇಂದಿನಿಂದ ಮತ್ತೆ ಅಬ್ಬರಿಸಲಿದ್ದಾರೆ. ಈ ಸಂಬಂಧ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಭಾನುವಾರ ರಾತ್ರಿಯಿಂದಲೇ ರಾಜಧಾನಿ ಬೆಂಗಳೂರಿನಲ್ಲಿ ಮಿಂಚು ಗಡುಗು ಸಹಿತ ಮಳೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ
ಭಾನುವಾರ ಇಡೀ ದಿನ ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ರಾತ್ರಿ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಮೆಜೆಸ್ಟಿಕ್, ಯಶವಂತಪುರ, ಮಲ್ಲೇಶ್ವರಂ, ಕಾರ್ಪೋರೇಷನ್, ವಿಧಾನಸೌಧ, ಶಾಂತಿನಗರ, ಆರ್‌ಟಿ ನಗರ, ಹೆಬ್ಬಾಳ ಸೇರಿದಂತೆ ಹಲವೆಡೆ ಮಳೆಯಾಗಿದೆ. ಇಂದು ಸಹ ರಾಜಧಾನಿಯಲ್ಲಿ ಮಳೆರಾಯ ತಂಪೆರೆಯಲಿದ್ದಾರೆ.
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ
ಮುಂದಿನ ಮೂರು ದಿನ ಅಂದ್ರೆ ಆಗಸ್ಟ್ 7 ರವರೆಗೆ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಒಟ್ಟಾರೆಯಾಗಿ ಆ. 7ರವರೆಗೆ ರಾಜ್ಯಕ್ಕೆ ಮಳೆ ಅಲರ್ಟ್ ನೀಡಲಾಗಿದೆ. ಮಳೆಯಾಗುತ್ತಿರುವ ಹಿನ್ನೆಲೆ ನದಿಗಳಮಟ್ಟ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಸಾರ್ವಜನಿಕರಿಗೆ ನದಿ ತೀರಗಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ.
ಎಲ್ಲೋ ಅಲರ್ಟ್
ಮಂಗಳವಾರದಿಂದ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಮತ್ತು ಉಳಿದ ಎಲ್ಲ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರು ನಗರ, ಬೆಂಗಳೂರು ದಕ್ಷಿಣ ಜಿಲ್ಲೆಗೂ ಎಲ್ಲೋ ಅಲರ್ಟ್ ನೀಡಲಾಗಿದೆ.
ಭಾರೀ ಮಳೆಯಾಗುವ ಸಾಧ್ಯತೆ
ರಾಜ್ಯದ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಹಾಸನ, ಚಿಕ್ಕಮಗಳೂರು, ಮಂಡ್ಯ, ಶಿವಮೊಗ್ಗ, ವಿಜಯನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಆಗಸ್ಟ್ 5ರಂದು ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಉತ್ತರ ಒಳನಾಡು ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.