- Home
- Karnataka Districts
- ಹಸೆಮಣೆ ಏರಲು ಸಜ್ಜಾದ ವಿಶ್ವವಿಖ್ಯಾತ 'ಮಂಕಿಮ್ಯಾನ್' ಜ್ಯೋತಿರಾಜ್: ಸಾಹಸಿಯನ್ನ ವರಿಸೋ ವಧು ಯಾರು ಗೊತ್ತಾ?
ಹಸೆಮಣೆ ಏರಲು ಸಜ್ಜಾದ ವಿಶ್ವವಿಖ್ಯಾತ 'ಮಂಕಿಮ್ಯಾನ್' ಜ್ಯೋತಿರಾಜ್: ಸಾಹಸಿಯನ್ನ ವರಿಸೋ ವಧು ಯಾರು ಗೊತ್ತಾ?
ವಿಶ್ವವಿಖ್ಯಾತ ಸಾಹಸಿ ಜ್ಯೋತಿರಾಜ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಚಳ್ಳಕೆರೆ ತಾಲೂಕಿನ ನಿವೇದಿತಾ ಎಂಬುವವರನ್ನು ಆಗಸ್ಟ್ 22 ಮತ್ತು 23 ರಂದು ಚಿತ್ರದುರ್ಗದಲ್ಲಿ ವಿವಾಹವಾಗಲಿದ್ದಾರೆ. ಜ್ಯೋತಿರಾಜ್ ಅವರ ಸಾಹಸಮಯ ವೃತ್ತಿಯನ್ನು ಮೆಚ್ಚಿ ನಿವೇದಿತಾ ಈ ಮದುವೆಗೆ ಒಪ್ಪಿಕೊಂಡಿದ್ದಾರೆ.

ಚಿತ್ರದುರ್ಗ (ಆ.14): ಬರಿಗೈಯಲ್ಲೇ ಎತ್ತರದ ಕೋಟೆಗಳು, ಕಡಿದಾದ ಬಂಡೆಗಳು ಹಾಗೂ ಜಲಪಾತಗಳನ್ನು ಹತ್ತಿ ಪ್ರಪಂಚದಾದ್ಯಂತ 'ಸ್ಪೈಡರ್ ಮ್ಯಾನ್', 'ಮಂಕಿಮ್ಯಾನ್' ಎಂದೇ ಖ್ಯಾತಿ ಪಡೆದಿರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಶೀಘ್ರದಲ್ಲೇ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಚಿತ್ರದುರ್ಗದ ಈ ಸಾಹಸಿಗನ ಮದುವೆ ದಿನಾಂಕ ಹಾಗೂ ವಧುವಿನ ವಿವರಗಳು ಈಗ ಅಧಿಕೃತವಾಗಿ ಹೊರಬಿದ್ದಿದ್ದು, ಆಗಸ್ಟ್ 22 ಮತ್ತು 23ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಯಾರೀ ವಧು ನಿವೇದಿತಾ?
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ 'ದೊಡ್ಡ ಉಳ್ಳಾರ್ತಿ' ಗ್ರಾಮದ ನಿವಾಸಿಯಾಗಿರುವ ಪದವೀಧರೆ ನಿವೇದಿತಾ ಅವರ ಜೊತೆ ಜ್ಯೋತಿರಾಜ್ ಮದುವೆ ನಿಶ್ಚಯವಾಗಿದೆ. ನಿವೇದಿತಾ ಅವರು ಜ್ಯೋತಿರಾಜ್ ಅವರಿಗಿಂತ 10 ವರ್ಷ ಚಿಕ್ಕವರಾಗಿದ್ದಾರೆ. ಸಾಹಸ ಕ್ರೀಡೆಯನ್ನೇ ವೃತ್ತಿಯಾಗಿಸಿಕೊಂಡು ಜೀವವನ್ನೇ ಪಣಕ್ಕಿಟ್ಟು ಸಾಧನೆ ಮಾಡುತ್ತಿರುವ ಜ್ಯೋತಿರಾಜ್ ಅವರ ವ್ಯಕ್ತಿತ್ವ ಹಾಗೂ ವೃತ್ತಿಯನ್ನು ಮೆಚ್ಚಿ ನಿವೇದಿತಾ ಮದುವೆಗೆ ಸಮ್ಮತಿಸಿದ್ದಾರೆ.
ಚಿತ್ರದುರ್ಗದಲ್ಲೇ ಮದುವೆ!
ಜ್ಯೋತಿರಾಜ್ ಅವರ ಕುಟುಂಬಸ್ಥರು ತಮಿಳುನಾಡಿನಲ್ಲಿ ಮದುವೆ ಮಾಡುವಂತೆ ಸಲಹೆ ನೀಡಿದ್ದರು. ಆದರೆ 'ನಾನು ಕರ್ನಾಟಕದಲ್ಲಿ ಬೆಳೆದ ಕನ್ನಡಿಗ, ನನ್ನ ಸಾಧನೆಗೆ ಹೆಗಲು ನೀಡಿದ ಕೋಟೆಗಳ ನಗರಿ ಚಿತ್ರದುರ್ಗದಲ್ಲೇ ಮದುವೆಯಾಗುತ್ತೇನೆ' ಎಂದು ಜ್ಯೋತಿರಾಜ್ ಪಟ್ಟು ಹಿಡಿದು ಒಪ್ಪಿಸಿದ್ದಾರೆ. ಅದರಂತೆ ಆಗಸ್ಟ್ 22 ಮತ್ತು 23 ರಂದು ಚಿತ್ರದುರ್ಗ ನಗರದ 'ವೈಭವ ಗಾರ್ಡನ್' ನಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮ ನೆರವೇರಲಿದೆ.
ಸಾಹಸ ವೃತ್ತಿಯ ಸವಾಲು ಹಾಗೂ ಮುರಿದುಬಿದ್ದಿದ್ದ ಮದುವೆ
ಕೆಲವು ವರ್ಷಗಳ ಹಿಂದೆ ಜ್ಯೋತಿರಾಜ್ ಅವರ ಮದುವೆ ನಿಶ್ಚಯವಾಗಿ, ನಂತರ ಮುರಿದುಬಿದ್ದಿತ್ತು. ಅವರು ಮಾಡುತ್ತಿದ್ದ ಅಪಾಯಕಾರಿ ರಾಕ್ ಕ್ಲೈಂಬಿಂಗ್ ಸಾಹಸ ವೃತ್ತಿಯ ಹಿನ್ನೆಲೆಯಲ್ಲಿ ಹಿಂದಿನ ಮದುವೆ ಸಂಬಂಧ ಕೈತಪ್ಪಿತ್ತು. ಆದರೆ ಈಗ ನಿವೇದಿತಾ ಅವರು ಈ ಸಾಹಸ ವೃತ್ತಿಯನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. "ಮದುವೆಯ ನಂತರ ಹೆಂಡತಿ-ಕುಟುಂಬದ ಜವಾಬ್ದಾರಿ ಇರುವುದರಿಂದ ಸಾಹಸ ಪ್ರದರ್ಶನಗಳ ವೇಳೆ ಇನ್ನಷ್ಟು ಎಚ್ಚರಿಕೆ ವಹಿಸುತ್ತೇನೆ" ಎಂದು ಜ್ಯೋತಿರಾಜ್ ತಿಳಿಸಿದ್ದಾರೆ.
ಬೌಂಡರಿ ದಾಟಿದ ಸಾಧಕ
ಜ್ಯೋತಿರಾಜ್ ಕೇವಲ ಕೋಟೆ ಹತ್ತುವ ಸಾಹಸಿಗ ಮಾತ್ರವಲ್ಲ. ಒಡಿಶಾ ರಾಜ್ಯದ 'ಸಾಹಸ ಕ್ರೀಡೆಗಳ ರಾಯಭಾರಿ'ಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಾರ್ವಜನಿಕ ಚುನಾವಣೆಗಳ ಸಂದರ್ಭದಲ್ಲಿ ಜಾಗೃತಿ ಮೂಡಿಸಲು ಮತದಾನದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಜೀವನಾಧಾರಿತ ಕಥೆಯನ್ನು ಆಧರಿಸಿ ಕನ್ನಡದಲ್ಲಿ 'ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್' ಎಂಬ ಚಲನಚಿತ್ರವೂ ನಿರ್ಮಾಣವಾಗಿ ತೆರೆಕಂಡಿತ್ತು.
ಚಿತ್ರದುರ್ಗದ ಕಲ್ಲಿನ ಕೋಟೆಗೆ ವಿಶ್ವಮಟ್ಟದಲ್ಲಿ ಹೆಸರು ತಂದುಕೊಟ್ಟ ಈ ಅಪ್ರತಿಮ ಸಾಹಸಿಯ ಮದುವೆಗೆ ಹಲವು ರಾಜಕೀಯ ಧುರೀಣರು, ಸಾಮಾಜಿಕ ಮುಖಂಡರು ಹಾಗೂ ಗಣ್ಯರು ನೆರವಿನ ಹಸ್ತ ಚಾಚಿದ್ದು, ಶುಭ ಹಾರೈಸಿದ್ದಾರೆ.

