ನಂಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್: ವೇದಿಕೆಯಲ್ಲಿ ಭಾವುಕರಾದ ಮಾಜಿ ಪ್ರಧಾನಿ ದೇವೇಗೌಡ
ಎಚ್.ಡಿ.ದೇವೇಗೌಡರು, ತಮ್ಮ ತೀವ್ರ ಅನಾರೋಗ್ಯ ಮತ್ತು ಡಯಾಲಿಸಿಸ್ ಚಿಕಿತ್ಸೆಯ ನಡುವೆಯೂ ರಾಜ್ಯದ ಜನರಿಗಾಗಿ ಹೋರಾಡುವುದಾಗಿ ಗುಡುಗಿದ್ದಾರೆ. ಪುತ್ರ ರೇವಣ್ಣ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ನಮಗೂ ಕಾಲ ಬರುತ್ತದೆ ಎಂದು ಎಚ್ಚರಿಸಿದರು.

ದೇವೇಗೌಡರ ಗುಡುಗು
ಹಾಸನ: ‘ನಾನೀಗ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕು. ಆದರೂ, ರಾಜ್ಯದ ಜನರಿಗೆ ಅನ್ಯಾಯವಾದರೆ ಸುಮ್ಮನಿರಲ್ಲ, ಹೋರಾಡುತ್ತೇನೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ.
ಭಾವುಕರಾದ ದೇವೇಗೌಡರು
ಸಮಾವೇಶದಲ್ಲಿ ಮಾತನಾಡಿದ ದೇವೇಗೌಡ, ಕೆಲ ಕ್ಷಣ ಭಾವುಕರಾದರು. ‘ನನಗೆ 5 ತಿಂಗಳ ಹಿಂದೆ ಎರಡೂ ಕಿಡ್ನಿಗಳು ವಿಫಲವಾದವು. ಹಾಗಾಗಿ, ಈಗ ನಾನು ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕು. ನಿನ್ನೆಯಷ್ಟೇ ಡಯಾಲಿಸಿಸ್ ಮಾಡಿಸಿಕೊಂಡು ಇಲ್ಲಿಗೆ ಬಂದಿದ್ದೇನೆ ಎಂದರು.
ಹೊಸ ಚೈತನ್ಯ ನೀಡುವಂತೆ ಮನವಿ
ಆದರೂ, ರಾಜ್ಯದ ಜನರಿಗೆ ಅನ್ಯಾಯವಾದರೆ ಸುಮ್ಮನಿರಲ್ಲ, ಹೋರಾಡುತ್ತೇನೆ’ ಎನ್ನುತ್ತಾ ಮತ್ತೆ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡವರಂತೆ ಏರುಧ್ವನಿಯಲ್ಲಿ ಮಾತನಾಡಿದರು. ಇಳಿವಯಸ್ಸಿನ ಅವರ ಈ ಉತ್ಸಾಹ ವೇದಿಕೆಯಲ್ಲಿದ್ದ ಇತರ ಮುಖಂಡರಿಗೆ ಹೊಸ ಚೈತನ್ಯ ನೀಡಿದರೆ, ವೇದಿಕೆ ಮುಂದಿದ್ದ ಕಾರ್ಯಕರ್ತರು ಶಿಳ್ಳೆ ಹೊಡೆಯುವಂತೆ ಮಾಡಿತು.
ಕಾಂಗ್ರೆಸ್ ವಿರುದ್ಧ ಕಿಡಿ
‘ಸ್ವಲ್ಪ ಕಾಯಿರಿ, ನಮಗೂ ಕಾಲ ಬರುತ್ತೆ. ನಾವು ಯಾರೆಂದು ಈ ಸರ್ಕಾರಕ್ಕೆ ಮತ್ತೆ ತೋರಿಸುತ್ತೇವೆ. ಆ ನಂಬಿಕೆ ನನಗಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ವಿರುದ್ಧ ಆರೋಪ
ನನ್ನ ಮನೆಯಲ್ಲಿ ನನ್ನ ಪುತ್ರ ಎಚ್.ಡಿ.ರೇವಣ್ಣ ಇದ್ದಾಗ ಎಸ್‌ಐಟಿ ಅಧಿಕಾರಿಗಳು ಬಂದು ಯಾವುದೋ ಕೇಸಿನ ಸಂಬಂಧ ರೇವಣ್ಣ ಅವರನ್ನು ಅರೆಸ್ಟ್ ಮಾಡುತ್ತಿದ್ದೇವೆ ಎಂದು ಹೇಳಿ ಅವರನ್ನು ಕರೆದೊಯ್ದರು. ಆಗ ನಾನೂ ಕೂಡ ಅಲ್ಲಿಯೇ ಇದ್ದೆ. ಈಗ ಅದೇ ಸರ್ಕಾರ ರೇವಣ್ಣ ಅವರನ್ನು ಬಂಧಿಸಿದ ಎಸ್‌ಐಟಿ ಅಧಿಕಾರಿಗಳಿಗೆ ಉಡುಗೊರೆ ರೂಪದಲ್ಲಿ ಲಕ್ಷಾಂತರ ರುಪಾಯಿಗಳನ್ನು ನೀಡಿದೆ’ ಎಂದು ಆರೋಪಿಸುತ್ತಾ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯೊಂದನ್ನು ಜನರ ಮುಂದಿಟ್ಟರು.
