- Home
- Karnataka Districts
- ಹುಬ್ಬಳ್ಳಿ ಮರ್ಯಾದಾ ಹತ್ಯೆ: ಮಾಲೀಕ ಜೈಲಲ್ಲಿ, ಗುಳೆ ಹೋದ ಮನೆಯವರು, ಬಾಗಿಲ ಬಳಿ ಹೆಜ್ಜೆ ಸಪ್ಪಳಕ್ಕೆ ಇಣುಕುವ ದನ-ಕರುಗಳು!
ಹುಬ್ಬಳ್ಳಿ ಮರ್ಯಾದಾ ಹತ್ಯೆ: ಮಾಲೀಕ ಜೈಲಲ್ಲಿ, ಗುಳೆ ಹೋದ ಮನೆಯವರು, ಬಾಗಿಲ ಬಳಿ ಹೆಜ್ಜೆ ಸಪ್ಪಳಕ್ಕೆ ಇಣುಕುವ ದನ-ಕರುಗಳು!
ಹುಬ್ಬಳ್ಳಿಯ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣದ ಬಳಿಕ, ಆರೋಪಿಗಳ ಕುಟುಂಬದ ಗಂಡಸರು ಜೈಲು ಪಾಲಾಗಿದ್ದಾರೆ. ಮನೆಯ ಮಹಿಳೆಯರು ಮತ್ತು ಮಕ್ಕಳು ಊರು ಬಿಟ್ಟಿದ್ದು, ಮನೆಯಲ್ಲಿದ್ದ ಜಾನುವಾರುಗಳು ಅನಾಥವಾಗಿವೆ ಹಾಗೂ ಮಕ್ಕಳ ವಿದ್ಯಾಭ್ಯಾಸವು ಅರ್ಧಕ್ಕೆ ನಿಂತಿದೆ.

ಜಾನುವಾರುಗಳೆಲ್ಲ ಕತ್ತಲ ಕೋಣೆಯಲ್ಲಿ!
ವರದಿ: ಶಿವಾನಂದ ಗೊಂಬಿ
ಹುಬ್ಬಳ್ಳಿ: ಆ ಮನೆಯ ಮಾಲೀಕ ಸೇರಿ ಗಂಡಸರೆಲ್ಲರೂ ಜೈಲಲ್ಲಿ... ಜಾನುವಾರುಗಳೆಲ್ಲ ಕತ್ತಲ ಕೋಣೆಯಲ್ಲಿ..! ಇದು ಅನ್ಯಜಾತಿಯ ಯುವಕನನ್ನು ಮದುವೆಯಾದಳು ಎಂಬ ಕಾರಣ ಗರ್ಭಿಣಿಯೆಂಬುದನ್ನು ಲೆಕ್ಕಿಸದೇ ಸ್ವಂತ ಮಗಳನ್ನು ಕೊಲೆ ಮಾಡಿದ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿನ ಪ್ರಕಾಶಗೌಡ ಪಾಟೀಲ ಮನೆಯ ಪರಿಸ್ಥಿತಿ. ಮರ್ಯಾದೆ ಹತ್ಯೆಯ ಸೈಡ್ ಎಫೆಕ್ಟ್ ಇದು. ಮರ್ಯಾದೆ ಹತ್ಯೆ ಪ್ರಕರಣದಿಂದಾಗಿ ಈ ಮನೆಯ ಮಾಲೀಕ, ಮಾನ್ಯಾಳ ತಂದೆ ಪ್ರಕಾಶಗೌಡ, ಆತನ ತಂದೆ, ಹಿರಿಯ ಸಹೋದರ ಹೀಗೆ ಗಂಡಸರೆಲ್ಲರೂ ಜೈಲು ಪಾಲಾಗಿದ್ದಾರೆ.
ಕತ್ತಲ ಕೋಣೆಯಿಂದಲೇ ಇಣುಕುತ್ತಿರುವ ಕರು
ಇನ್ನು ಮಾನ್ಯಾಳ ತಾಯಿ, ಇಬ್ಬರು ತಮ್ಮಂದಿರು, ದೊಡ್ಡಮ್ಮ ಹಾಗೂ ಅವರ ನಾಲ್ಕು ಮಕ್ಕಳು. ಹೀಗೆ ಎಲ್ಲರೂ ಊರು ಬಿಟ್ಟು ನೆಂಟರಿಷ್ಟರ ಮನೆ ಸೇರಿದ್ದಾರೆ. ಹೀಗಾಗಿ ಮನೆಯಲ್ಲಿ ಯಾರೊಬ್ಬರು ಇಲ್ಲ. ಹಾಗಂತ ಮನೆಗೆ ಬೀಗ ಜಡಿದಿಲ್ಲ. ಬರೀ ಹೊರಗಿನಿಂದ ಚಿಲಕ ಹಾಕಿ ಬಿಡಲಾಗಿದೆ. ಆದರೆ, ಘಟನೆ ನಡೆದಾಗಿನಿಂದ ಯಾರೊಬ್ಬರು ಮನೆಯ ಚಿಲಕ ತೆಗೆಯುವ ಗೋಜಿಗೆ ಹೋಗಿಲ್ಲ. ಮನೆ ಕಟ್ಟೆ ಮೇಲೆ ಪೊಲೀಸರಿಬ್ಬರು ಕಾವಲು ಕಾಯುತ್ತಿದ್ದಾರಷ್ಟೆ.
ಅನಾಥವಾದ ಜಾನುವಾರುಗಳು:
ಇನ್ನು ಮನೆಯ ಹಿಂಬದಿಯಲ್ಲಿ ದನದ ಕೊಟ್ಟಿಗೆ ಇದೆ. ಅದಕ್ಕೆ ಬೀಗ ಜಡಿಯಾಗಿದೆ. 3 ಹಸು, 2 ಎತ್ತು, 2 ಕರುಗಳೆಲ್ಲ ಬೀಗ ಜಡಿದ ಕತ್ತಲ ಕೋಣೆಯಲ್ಲಿವೆ. ಯಾರಾದರೂ ಆ ಕೊಟ್ಟಿಗೆ ಪಕ್ಕದಲ್ಲಿ ನಡೆದು ಹೋದರೆ ಸಾಕು ಮನೆ ಮಾಲೀಕರೇ ಬಂದರೇನೋ ಎಂಬಂತೆ ಕಿಟಕಿಯಿಂದ ಇಣುಕಿ ಹಾಕಿ "ಅಂಬಾ" ಎಂದು ತಮ್ಮತ್ತ ಕರೆಯುತ್ತವೆ.
ಪ್ರಕಾಶಗೌಡ ಪಾಟೀಲ ಅವರ ಮನೆಯ ಹಿಂಬದಿಯಲ್ಲಿನ ದನದ ಕೊಟ್ಟಿಗೆ. ಹೊರಗೆ ಎತ್ತು ನಿಂತಿರುವುದು
ಕತ್ತಲ ಕೋಣೆಯಲ್ಲಿವೆ ಎಂದರೆ ಅವುಗಳಿಗೆ ಮೇವು ಹಾಕುವವರಿಲ್ಲ ಅಂತೇನೂ ಇಲ್ಲ. ಮೂಕ ಪ್ರಾಣಿಗಳಿಗೆ ಪ್ರತಿದಿನ ಓಣಿಯವರೇ ಒಬ್ಬರು ಬಂದು ಕೊಟ್ಟಿಗೆಯ ಬಾಗಿಲು ತೆರೆದು ಮೇವು ಹಾಕಿ, ನೀರಿನ ತೊಟ್ಟಿಯಲ್ಲಿ ನೀರು ತುಂಬಿಸಿ ಮತ್ತೆ ಕೊಟ್ಟಿಗೆಗೆ ಬೀಗ ಜಡಿದು ಬರುತ್ತಾರೆ. ಮನೆ ಮಾಲೀಕನೇ ಇಲ್ಲದ ಕಾರಣ ಅವುಗಳನ್ನು ಹೊಲಕ್ಕೊ, ಮೈ ತೊಳೆದುಕೊಂಡು ಬರಲೋ ಕರೆದುಕೊಂಡು ಹೋಗುವವರೇ ಇಲ್ಲ. ಯಾವಾಗ ಪ್ರಕರಣ ನಡೆಯಿತೋ ಆಗಿನಿಂದಲೇ ಜಾನುವಾರುಗಳಿಗೂ ಕತ್ತಲ ಕೋಣೆಯೇ ದಿಕ್ಕು ಎಂಬಂತಾಗಿದೆ.
ನಾವು ಎಷ್ಟೇ ಮೇವು, ನೀರು ಹಾಕುತ್ತೇವೆಂದ್ರೂ ಮನೆಯವರು ಬೆನ್ನು ಸವರಿ, ಮುದ್ದು ಮಾಡಿ ಕೊಟ್ಟಂತಾಗುತ್ತದೆಯೇ? ಹೀಗಾಗಿ ಬಾಗಿಲ ಬಳಿ ಹೆಜ್ಜೆ ಸಪ್ಪಳ ಕೇಳಿದರೆ ಸಾಕು ಮಾಲೀಕರೇ ಬಂದರೇನೋ ಎಂಬಂತೆ ಕೂಗುತ್ತವೆ ಎಂದು ಓಣಿಯ ರೈತರೊಬ್ಬರು ಹೇಳುತ್ತಾರೆ.
ಮಕ್ಕಳ ವಿದ್ಯಾಭ್ಯಾಸ
ನಾವು ಎಷ್ಟೇ ಮೇವು, ನೀರು ಹಾಕುತ್ತೇವೆಂದ್ರೂ ಮನೆಯವರು ಬೆನ್ನು ಸವರಿ, ಮುದ್ದು ಮಾಡಿ ಕೊಟ್ಟಂತಾಗುತ್ತದೆಯೇ? ಹೀಗಾಗಿ ಬಾಗಿಲ ಬಳಿ ಹೆಜ್ಜೆ ಸಪ್ಪಳ ಕೇಳಿದರೆ ಸಾಕು ಮಾಲೀಕರೇ ಬಂದರೇನೋ ಎಂಬಂತೆ ಕೂಗುತ್ತವೆ ಎಂದು ಓಣಿಯ ರೈತರೊಬ್ಬರು ಹೇಳುತ್ತಾರೆ.
ಈ ನಡುವೆ ಹತ್ಯೆಗೀಡಾದ ಮಾನ್ಯಾಳಿಗೆ ಇಬ್ಬರು ತಮ್ಮಂದಿರು, ದೊಡ್ಡಪ್ಪನ ನಾಲ್ಕು ಜನ ಮಕ್ಕಳು. ಈ 6 ಜನರಲ್ಲಿ ಇಬ್ಬರು ಕಾಲೇಜಿಗೆ ಹೋಗುತ್ತಿದ್ದರೆ, ನಾಲ್ವರು ಶಾಲೆಗೆ ಹೋಗುವ ಸಣ್ಣ ಮಕ್ಕಳಂತೆ. ಊರು ಬಿಟ್ಟಿದ್ದರಿಂದ ಶಾಲಾ-ಕಾಲೇಜಿಗೆ ಹೋಗಿಯೇ ಇಲ್ಲ. ಹೀಗಾಗಿ ಈ ಮಕ್ಕಳ ವಿದ್ಯಾಭ್ಯಾಸವೂ ಅರ್ಧಕ್ಕೆ ಮೊಟಕಾಗಿದೆ. ಮನೆಯಲ್ಲಿನ ಹೆಣ್ಮಕ್ಕಳಾದರೂ ಮತ್ತೆ ಊರಿಗೆ ಬಂದು ಜಾನುವಾರು, ಹೊಲ ಮನೆ ನೋಡಿಕೊಳ್ಳುವಂತೆ ಆಗಬೇಕ್ರಿ ಎಂಬುದು ಊರಿನಲ್ಲಿನ ಜನರ ಅಂಬೋಣ.

