- Home
- Karnataka Districts
- ಮಸೀದಿಯಲ್ಲಿ ಗಣೇಶ ಪ್ರತಿಷ್ಠಾಪನೆ; ಚಾದರ್ ಮೇಲೆ ಕೂರಿಸಿದ ಗಣಪತಿಗೆ ಮುಸ್ಲಿಂ ಯುವಕರಿಂದಲೇ ಪೂಜೆ!
ಮಸೀದಿಯಲ್ಲಿ ಗಣೇಶ ಪ್ರತಿಷ್ಠಾಪನೆ; ಚಾದರ್ ಮೇಲೆ ಕೂರಿಸಿದ ಗಣಪತಿಗೆ ಮುಸ್ಲಿಂ ಯುವಕರಿಂದಲೇ ಪೂಜೆ!
ಗದಗಿನ ಸಂದಿಗವಾಡ ಗ್ರಾಮದ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಂದಾಗಿ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಮುಸ್ಲಿಂ ಯುವಕರೇ ಮಸೀದಿಯೊಳಗೆ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಗ್ರಾಮಸ್ಥರು ಇಡೀ ರಾಜ್ಯಕ್ಕೆ ಧರ್ಮ ಸಾಮರಸ್ಯದ ಮಾದರಿಯಾಗಿದ್ದಾರೆ.

ರಾಜ್ಯದ ಕೆಲವು ಕಡೆಗಳಲ್ಲಿ ಧರ್ಮದ ಹೆಸರಿನಲ್ಲಿ ಅಶಾಂತಿ ಮೂಡಿಸಲು ಯತ್ನಿಸುವವರಿಗೆ ಇಲ್ಲೊಂದು ಕಣ್ಣು ತೆರೆಸುವಂತಹ ಮಾದರಿ ಘಟನೆ ನಡೆಯುತ್ತಿದೆ. ರಾಜ್ಯದ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಸೀದಿಗಳ ಮುಂದೆ ಗಣಪತಿ ಮೆರವಣಿಗೆ ಮಾಡುವುದಕ್ಕೂ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಲಾಗುತ್ತದೆ.
ಆದರೆ, ಇದಕ್ಕೆ ತದ್ವಿರುದ್ಧವಾಗಿ ಉತ್ತರ ಕರ್ನಾಟಕದಲ್ಲಿ ಮಸೀದಿಯ ಒಳಗಡೆಯೇ ಹಿಂದೂಗಳ ಆರಾಧ್ಯ ದೈವ ಗಣೇಶ ಮೂರ್ತಿಯನ್ನು ಕೂರಿಸಿ, ವಿನಾಯಕ ಚತುರ್ಥಿಯನ್ನು ಅತ್ಯಂತ ಸೌಹಾರ್ದತೆಯಿಂದ ಆಚರಿಸಲಾಗಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಈ ಗ್ರಾಮಸ್ಥರು ನಿಜವಾದ 'ಧರ್ಮ ಸಾಮರಸ್ಯ'ದ ಪಾಠ ಕಲಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಭಾವೈಕ್ಯತೆಯ ಅಲೆ:
ಗದಗ ಜಿಲ್ಲೆಯ ರೋಣ ತಾಲೂಕಿನ ಸಂದಿಗವಾಡ ಗ್ರಾಮದ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಂದಾಗಿ ಗಣೇಶೋತ್ಸವ ಆಚರಿಸುತ್ತಿದ್ದಾರೆ. ವಿಶೇಷವೆಂದರೆ, ಕಳೆದ ನಾಲ್ಕು ವರ್ಷಗಳಿಂದ ಈ ಗ್ರಾಮಸ್ಥರು ಮಸೀದಿಯ ಒಳಗಡೆಯೇ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ.
ಮುಸ್ಲಿಂ ಯುವಕರಿಂದಲೇ ಪೂಜೆ, ಪ್ರಾರ್ಥನೆ:
ಈ ಕೋಮು ಸೌಹಾರ್ದತೆಯ ವಿಶೇಷತೆಯೆಂದರೆ, ಮಸೀದಿಯಲ್ಲಿ ಕೂರಿಸಿರುವ ಗಣೇಶ ಮೂರ್ತಿಗೆ ಬೇರೆ ಯಾರೂ ಅಲ್ಲ, ಸ್ವತಃ ಮುಸ್ಲಿಂ ಯುವಕರೇ ನಿಂತು ಪೂಜೆ ಮತ್ತು ಪ್ರಾರ್ಥನೆ ನೆರವೇರಿಸುತ್ತಾರೆ. ಐದು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಮುಸ್ಲಿಂ ಯುವಕರು ದಿನಕ್ಕೆರಡು ಹೊತ್ತು ಗಣಪನಿಗೆ ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಹಿಂದೂ ಯುವಕರು ಹಾಗೂ ಗ್ರಾಮದ ಹಿರಿಯರು ಸಂಪೂರ್ಣ ಸಾಥ್ ನೀಡುತ್ತಿದ್ದಾರೆ.
ಹಿಂದೂ ಮತ್ತು ಮುಸ್ಲಿಂ ಧರ್ಮದ ಹಬ್ಬಗಳನ್ನು ಯಾವುದೇ ಭೇದಭಾವವಿಲ್ಲದೆ, ಪರಸ್ಪರ ಸಹಕಾರದೊಂದಿಗೆ ಇಲ್ಲಿನ ಗ್ರಾಮಸ್ಥರು ಆಚರಿಸಿಕೊಂಡು ಬರುತ್ತಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಧರ್ಮಗಳ ನಡುವೆ ಗೋಡೆಗಳನ್ನು ಕಟ್ಟುತ್ತಿರುವವರಿಗೆ, ಸಂದಿಗವಾಡ ಗ್ರಾಮದ ಈ ಭಾವೈಕ್ಯತೆಯ ನಡೆ ಇಡೀ ರಾಜ್ಯಕ್ಕೇ ಮಾದರಿಯಾಗಿದೆ. 'ಅಭಿವೃದ್ಧಿಯಲ್ಲಿ ನಮ್ಮನ್ನು ಮೂಲೆಗುಂಪು ಮಾಡಿದವರೇ, ನಮ್ಮ ಧರ್ಮ ಸಾಮರಸ್ಯವನ್ನು ನೋಡಿ ಕಲಿಯಿರಿ' ಎಂಬ ಸಂದೇಶವನ್ನು ಈ ಗ್ರಾಮದ ಜನತೆ ಇಡೀ ಸಮಾಜಕ್ಕೆ ಸಾರುತ್ತಿದ್ದಾರೆ.

