ಮುನಿಸಿನ ವದಂತಿಗಳ ನಡುವೆಯೇ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ದಿಢೀರ್ ಭೇಟಿಯಾಗಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರವಾಗಿ ಇಬ್ಬರ ನಡುವೆ ಬಿರುಕು ಮೂಡಿತ್ತು ಎನ್ನಲಾಗಿತ್ತು. ಇದೀಗ ನಗುನಗುತ್ತಲೇ ಇಬ್ಬರೂ ಚರ್ಚೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.

ಬೆಂಗಳೂರು:  ಸಿದ್ದರಾಮಯ್ಯ ಅವರ ಪರಮಾಪ್ತ ಎಂದೇ ಗುರುತಿಸಿಕೊಂಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಇತ್ತೀಚೆಗೆ ಅಂತರ ಕಾಯ್ದುಕೊಂಡಿದ್ದರು. ಗುರು-ಶಿಷ್ಯನ ಮಧ್ಯೆ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೇ ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಸಿದ್ದರಾಮಯ್ಯರ ದಿಢೀರ್ ಭೇಟಿ

ಇವತ್ತು ನಡೆದ ದಿಢೀರ್ ಬೆಳವಣಿಗೆಯಲ್ಲಿ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಜಮೀರ್ ಅಹ್ಮದ್ ಖಾನ್ ಭೇಟಿಯಾದರು. ಭೇಟಿ ಸಂದರ್ಭದಲ್ಲಿನ ಫೋಟೋಗಳು ಮಾಧ್ಯಮಗಳಿಗೆ ಲಭ್ಯವಾಗಿದೆ. ಈ ವೇಳೆ ಜಮೀರ ಅಹ್ಮದ್ ಖಾನ್ ನಗುನಗುತ್ತ ಸಿದ್ದರಾಮಯ್ಯ ಬಳಿ ಕುಳಿತು ಮಾತನ್ನಾಡುತ್ತಿದ್ದಾರೆ. ಇನ್ನು ಇವರಿಬ್ಬರ ಭೇಟಿ ಹಿಂದಿನ ಕಾರಣ ತಿಳಿದುಬಂದಿಲ್ಲ.

Scroll to load tweet…

ಇನ್ನು ಅವರಿಬ್ಬರ ಮಧ್ಯೆ ಏನಾಗಿತ್ತು ಎಂದು ನೋಡೋದಾದರೆ.. ಸಿದ್ದರಾಮಯ್ಯ ಆಡಿರುವ ಒಂದು ಮಾತು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಬೆನ್ನಲ್ಲೇ ಸಿದ್ದು ಮತ್ತು ಜಮೀರ್ ನಡುವೆ ಮುನಿಸು ಎಂಬ ವಿಚಾರ ಜಗಜ್ಜಾಹೀರು ಆಗತ್ತು. ಜಮೀರ್ ಅಹ್ಮದ್ ಪರವಾಗಿ ಬೆಂಬಲಿಗರೊಬ್ಬರು ಡಿಕೆ ಸಂಪುಟದಲ್ಲಿ ಸ್ಥಾನ/ಜವಾಬ್ದಾರಿ ನೀಡುವಂತೆ ಮನವಿ ಮಾಡಿದಾಗ ಸಿದ್ದರಾಮಯ್ಯ ಸಿಟ್ಟಿಗೆದ್ದಿದ್ದರು.

ಅವನು ನನ್ನ ಹತ್ತಿರ ಇದ್ದಾನೆ ಅನ್ನೋ ಕಾರಣಕ್ಕೆ ನನ್ನ ವಿರುದ್ಧವೇ ಕೆಲಸ ಮಾಡಬಹುದಾ? ಎಂದು ನೇರವಾಗಿ ಕೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿತ್ತು. ಈ ಅಸಮಾಧಾನಕ್ಕೆ ಮೂಲ ಕಾರಣ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ. ದಾವಣಗೆರೆ ದಕ್ಷಿಣದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡಬೇಕೆಂದು ಜಮೀರ್ ಅಹ್ಮದ್ ಪಟ್ಟುಹಿಡಿದಿದ್ದರು. ಆದರೆ, ಹೈಕಮಾಂಡ್ ಮತ್ತು ಸಿದ್ದರಾಮಯ್ಯ ಅವರು ಶಾಮನೂರು ಕುಟುಂಬದ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಿದ್ದರು.

ಇದರಿಂದ ಅಸಮಾಧಾನಗೊಂಡ ಜಮೀರ್ ಬೆಂಬಲಿಗರು ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ವರದಿಗಳು ಬಂದಿದ್ದವು. ಎಐಸಿಸಿ (AICC) ವೀಕ್ಷಕರ ವರದಿಯ ಆಧಾರದ ಮೇಲೆ ಸಿದ್ದರಾಮಯ್ಯ ತಮ್ಮ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದರು ಮತ್ತು ಜಮೀರ್ ಅಹ್ಮದ್ ಖಾನ್ ಅವರನ್ನು ಕರೆದು ತೀವ್ರ ತರಾಟೆಗೆ ತೆಗೆದುಕೊಂಡರು. ಬೆನ್ನಲ್ಲೇ, ಜಮೀರ್ ಅಹ್ಮದ್ ಅವರದ್ದೆನ್ನಲಾದ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿತ್ತು. ಅದರಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಮತ್ತು ಆಂತರಿಕ ರಾಜಕೀಯದ ಕುರಿತು ಆಡಿದ ಮಾತುಗಳು ಹೈಕಮಾಂಡ್‌ ಮಟ್ಟದಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದ್ದವು. ಇದಕ್ಕೂ ಮುನ್ನವೂ ಜಮೀರ್ ಅವರ ಕೆಲ ಹೇಳಿಕೆಗಳು ಹಾಗೂ ಕ್ರಮಗಳು ಸಿದ್ದರಾಮಯ್ಯ ಸರ್ಕಾರಕ್ಕೆ ಪದೇ ಪದೇ ಮುಜುಗರ ಉಂಟುಮಾಡಿದ್ದವು ಎನ್ನಲಾಗಿದೆ.