- Home
- Karnataka Districts
- ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ 7 ಹೆಡೆಯ ಘಟಸರ್ಪ ಶಿಲೆ ಪತ್ತೆ; ಹಾವಿನ ತಲೆ ಮೇಲಿದೆ ವಿಶೇಷ ನಾಗಮಣಿ!
ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ 7 ಹೆಡೆಯ ಘಟಸರ್ಪ ಶಿಲೆ ಪತ್ತೆ; ಹಾವಿನ ತಲೆ ಮೇಲಿದೆ ವಿಶೇಷ ನಾಗಮಣಿ!
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 7 ಹೆಡೆ ಹಾಗೂ ಹಣೆಯ ಮೇಲೆ ನಾಗಮಣಿಯಂತಹ ಕೆತ್ತನೆಯಿರುವ ನೂರಾರು ವರ್ಷಗಳಷ್ಟು ಹಳೆಯದಾದ ನಾಗಶಿಲೆ ಪತ್ತೆಯಾಗಿದೆ. ತಲೆಮಾರುಗಳಿಂದ ಪೂಜಿಸಲ್ಪಡುತ್ತಿರುವ ಈ ಶಿಲೆಯ ಐತಿಹಾಸಿಕ ರಹಸ್ಯವನ್ನು ತಿಳಿಯಲು ಪುರಾತತ್ವ ಇಲಾಖೆಯ ಸಂಶೋಧನೆಗಾಗಿ ಕಾಯಲಾಗುತ್ತಿದೆ.

ಲಕ್ಕುಂಡಿಯಲ್ಲಿ ನಿಧಿ ಕಾಯುವ ಘಟ ಸರ್ಪ
ಗದಗ (ಜ.24): ಐತಿಹಾಸಿಕ ದೇವಾಲಯಗಳ ತವರೂರು, ಶಿಲ್ಪಕಲೆಯ ಕಾಶಿ ಎಂದೇ ಪ್ರಖ್ಯಾತವಾಗಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮತ್ತೊಂದು ಅಪರೂಪದ ಇತಿಹಾಸದ ಕುರುಹು ಪತ್ತೆಯಾಗಿದೆ. ಇಲ್ಲಿನ ರವದಿ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಸುಮಾರು ನೂರಾರು ವರ್ಷಗಳಷ್ಟು ಹಳೆಯದಾದ, ಏಳು ಹೆಡೆಗಳನ್ನು ಹೊಂದಿರುವ ಹಾಗೂ ಹಣೆಯ ಮೇಲೆ ನಾಗಮಣಿಯಂತಹ ಅಮೂಲ್ಯ ಕೆತ್ತನೆಯಿರುವ ನಾಗಶಿಲೆ ಪತ್ತೆಯಾಗಿರುವುದು ಈಗ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.
ಏನಿದು ಅಪರೂಪದ ನಾಗಶಿಲೆ?
ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿರುವ ರವದಿ ಕುಟುಂಬದ ಜಮೀನಿನ ಬಾವಿಯ ಪಕ್ಕದಲ್ಲಿ ಈ ಅಪರೂಪದ ಶಿಲೆ ಕಾಲಕಾಲದಿಂದಲೂ ಇದೆ. ಈ ಶಿಲೆಯಲ್ಲಿ ಹಾವಿನ ಏಳು ಹೆಡೆಗಳನ್ನು ಅತ್ಯಂತ ನೈಪುಣ್ಯತೆಯಿಂದ ಕೆತ್ತಲಾಗಿದ್ದು, ಉಬ್ಬು ಚಿತ್ರದ ಮಾದರಿಯಲ್ಲಿದೆ. ವಿಶೇಷವೆಂದರೆ, ಹಾವಿನ ಹಣೆಯ ಭಾಗದಲ್ಲಿ ವಜ್ರ ಅಥವಾ ನಾಗಮಣಿಯ ಆಕಾರದ ಕೆತ್ತನೆಯಿದೆ. ಇದನ್ನು ನೋಡಲು ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಹಿರಿಯರ ಕಾಲದ ಐತಿಹ್ಯ
ಈ ಜಮೀನಿನ ಮಾಲೀಕರಾದ ಗಿರಿಜವ್ವ ರವದಿ ಅವರು 'ಏಷ್ಯಾನೆಟ್ ಸುವರ್ಣ ನ್ಯೂಸ್' ಜೊತೆಗೆ ಮಾತನಾಡುತ್ತಾ ತಮ್ಮ ಹಿರಿಯರು ಹೇಳುತ್ತಿದ್ದ ಕಥೆಗಳನ್ನು ಹಂಚಿಕೊಂಡಿದ್ದಾರೆ. 'ನಮ್ಮ ಜಮೀನಿನಲ್ಲಿ ಹಿಂದಿನ ಕಾಲದಲ್ಲಿ ದಿವ್ಯ ಸರ್ಪಗಳು ಓಡಾಡುತ್ತಿದ್ದವು ಎಂದು ಹಿರಿಯರು ಹೇಳುತ್ತಿದ್ದರು. ಹಣೆಯ ಮೇಲೆ ಹೊಳೆಯುವ ವಜ್ರದಂತಹ ಮಣಿಯನ್ನು ಇಟ್ಟುಕೊಂಡು ಹಾವುಗಳು ಇಲ್ಲಿ ಸಂಚರಿಸುತ್ತಿದ್ದವಂತೆ. ಈ ಶಿಲೆಯನ್ನು ನಮ್ಮ ಕುಟುಂಬ ತಲೆತಲಾಂತರದಿಂದ ಪೂಜಿಸಿಕೊಂಡು ಬರುತ್ತಿದೆ' ಎಂದು ಅವರು ತಿಳಿಸಿದ್ದಾರೆ.
ವಿಜಯನಗರ ಕಾಲದ ಕಲೆ
ಇತಿಹಾಸ ತಜ್ಞರ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಶಿಲೆಯು ವಿಜಯನಗರ ಸಾಮ್ರಾಜ್ಯದ ಕಾಲದ ಕೆತ್ತನೆಯ ಶೈಲಿಯನ್ನು ಹೋಲುತ್ತದೆ. 12ನೇ ಶತಮಾನದ ಶಾಸನಗಳು ಮತ್ತು ಶಿಲ್ಪಕಲೆಗಳಿಗೆ ಲಕ್ಕುಂಡಿ ಪ್ರಸಿದ್ಧವಾಗಿದ್ದು, ಇಲ್ಲಿನ ಬಾವಿಗಳು ಮತ್ತು ದೇವಾಲಯಗಳ ಆವರಣದಲ್ಲಿ ಇಂತಹ ಅನೇಕ ರಹಸ್ಯಗಳು ಅಡಗಿವೆ. ಈ ನಾಗಶಿಲೆಯು ಕೇವಲ ಧಾರ್ಮಿಕ ನಂಬಿಕೆಯಷ್ಟೇ ಅಲ್ಲದೆ, ಅಂದಿನ ಕಾಲದ ಶಿಲ್ಪಿಗಳ ಅದ್ಭುತ ಕಲಾಕೌಶಲಕ್ಕೆ ಸಾಕ್ಷಿಯಾಗಿದೆ.
ಪುರಾತತ್ವ ಇಲಾಖೆಯ ಗಮನಕ್ಕೆ
ಲಕ್ಕುಂಡಿಯ ಬಾವಿಗಳ ಇತಿಹಾಸವನ್ನು ಕೆದಕಿದಾಗ, ಹನ್ನೆರಡನೇ ಶತಮಾನದ ಅನೇಕ ಕಲ್ಲುಗಳು ಮತ್ತು ವಿಗ್ರಹಗಳು ಭೂಮಿಯ ಅಡಿಯಲ್ಲಿ ಪತ್ತೆಯಾದ ಉದಾಹರಣೆಗಳಿವೆ.
ಏಳು ಹೆಡೆಯ ನಾಗಶಿಲೆಯು
ಸದ್ಯ ಈ ಏಳು ಹೆಡೆಯ ನಾಗಶಿಲೆಯು ಇತಿಹಾಸ ಪ್ರೇಮಿಗಳ ಗಮನ ಸೆಳೆದಿದ್ದು, ಪುರಾತತ್ವ ಇಲಾಖೆಯು ಈ ಬಗ್ಗೆ ಸಂಶೋಧನೆ ನಡೆಸಬೇಕಿದೆ. ಈ ಶಿಲೆಯು ಇತಿಹಾಸದ ಯಾವ ಘಟ್ಟಕ್ಕೆ ಸೇರಿದ್ದು ಮತ್ತು ನಾಗಮಣಿಯ ಕೆತ್ತನೆಯ ಹಿಂದಿನ ರಹಸ್ಯವೇನು ಎಂಬುದು ಅಧಿಕೃತ ತಪಾಸಣೆಯ ನಂತರ ತಿಳಿಯಬೇಕಿದೆ.

