RR ನಗರ ಉಪಚುನಾವಣೆ: 'ಮತ ಚಲಾಯಿಸಲು ಬರೋರಿಗೆ ಕೈಗವಸು’
ಬೆಂಗಳೂರು(ಅ.17): ಕೊರೋನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭೆಗೆ ನಡೆಯುವ ಉಪಚುನಾವಣೆಯಲ್ಲಿ ಮತಚಲಾಯಿಸಲು ಬರುವ ಎಲ್ಲರಿಗೂ ಒಂದೊಂದು ಕೈಗವಸು ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್. ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರೊಂದಿಗೆ ಶುಕ್ರವಾರ ರಾಜರಾಜೇಶ್ವರಿನಗರದ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ಮತ ಎಣಿಕೆ ಕೇಂದ್ರ ಹಾಗೂ ಸ್ಟ್ರಾಂಗ್ ರೂಂಗೆ ಭೇಟಿ ನೀಡಿ ತಪಾಸಣೆ ನಡೆಸಿದರು.
ಮತ ಚಲಾಯಿಸಲು ಪ್ರತಿ ಮತದಾರನಿಗೆ ಒಂದೊಂದು ಕೈಗವಸು ನೀಡಲಾಗುವುದು. ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುವುದು. ಮತದಾರರು ಒಂದು ಕೈಗೆ ಗವಸು ಹಾಕಿಕೊಂಡು ರಿಜಿಸ್ಟರ್‌ನಲ್ಲಿ ಸಹಿ ಹಾಕಬೇಕು ಮತ್ತು ಇವಿಎಂ ಯಂತ್ರದಲ್ಲಿ ಬಟನ್ ಒತ್ತಿ ತಮ್ಮ ಮತ ಚಲಾಯಿಸಬೇಕು. ಮತದಾರರ ಪಟ್ಟಿಯಲ್ಲಿರುವ 4.62 ಲಕ್ಷ ಮತದಾರರು ಬಂದರೂ ಎಲ್ಲರಿಗೂ ಕೈಗವಸು ನೀಡಲು ವ್ಯವಸ್ಥೆ ಮಾಡಲಾಗಿದೆ. ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕಡೆಯ ದಿನವಾಗಿದ್ದು, 22 ಅಭ್ಯರ್ಥಿಗಳು ಒಟ್ಟು 27 ನಾಮಪತ್ರ ಸಲ್ಲಿಸಿದ್ದಾರೆ. ಒಬ್ಬರು ಒಂದಕ್ಕಿಂತ ಹೆಚ್ಚಿನ ನಾಮಪತ್ರ ಸಲ್ಲಿಕೆಗೆ ಅವಕಾಶವಿರುವುದರಿಂದ ಅಭ್ಯರ್ಥಿಗಳ ಸಂಖ್ಯೆಗಿಂತ ನಾಮಪತ್ರಗಳ ಸಂಖ್ಯೆ ಹೆಚ್ಚಿವೆ ಎಂದರು.
ಕೇಂದ್ರ ಚುನಾವಣಾ ಆಯೋಗದಿಂದ ಈಗಾಗಲೇ ವೀಕ್ಷಕರು ಬಂದಿದ್ದಾರೆ. ಶನಿವಾರ (ಅ.17) ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅ.19ರಂದು ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಈಗಾಗಲೇ ಕ್ಷೇತ್ರದ ಮತದಾರರ ಪಟ್ಟಿಪರಿಷ್ಕರಿಸಿದ್ದು, ಮತದಾರರ ಪಟ್ಟಿಗೆ ಹೊಸದಾಗಿ 1,616 ಮತದಾರರು ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಒಟ್ಟು ಮತದಾರರ ಸಂಖ್ಯೆ 4,62,027 ಏರಿಕೆಯಾಗಿದೆ ಎಂದು ಹೇಳಿದರು.
ನ.3ರಂದು ಮತದಾನ ನಡೆಯಲಿದ್ದು, ನ.10ರಂದು ಮತ ಎಣಿಕೆ ನಡೆಯಲಿದೆ. ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಸಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ಷೇತ್ರದಲ್ಲಿ ಒಟ್ಟು 678 ಮತಗಟ್ಟೆಗಳಿದ್ದು, ನಾಲ್ಕು ಮತ ಎಣಿಕೆ ಕೇಂದ್ರ ಮಾಡಲಾಗಿದೆ. ಈ ಹಿಂದೆ ಮತ ಎಣಿಕೆ ಕೊಠಡಿಯಲ್ಲಿ 14 ಟೇಬಲ್‌ಗಳಲ್ಲಿ ಮಾತ್ರ ಎಣಿಕೆ ಮಾಡಲಾಗುತ್ತಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಒಂದು ಕೊಠಡಿಯಲ್ಲಿ ಏಳು ಟೇಬಲ್‌ಗಳಂತೆ ನಾಲ್ಕು ಕೊಠಡಿಗಳಲ್ಲಿ ಒಟ್ಟು 28 ಟೇಬಲ್ ಇರಿಸಿ ಮತ ಎಣಿಕೆ ಮಾಡಲಾಗುತ್ತದೆ. ದೊಡ್ಡ ಸ್ಟ್ರಾಂಗ್ ರೂಂ ವ್ಯವಸ್ಥೆ ಮಾಡಿದ್ದು, 24 ಸುತ್ತಿನ ಮತ ಎಣಿಕೆ ನಡೆಯಲಿದೆ. ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಿ ಮಧ್ಯಾಹ್ನ 12.30ರ ವೇಳೆಗೆ ಎಣಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಈ ವೇಳೆ ಬಿಬಿಎಂಪಿ ವಿಶೇಷ ಆಯುಕ್ತ ಜೆ.ಮಂಜುನಾಥ, ವಲಯ ಜಂಟಿ ಆಯುಕ್ತ ನಾಗರಾಜ್, ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ಮತ ಎಣಿಕೆ ಕೇಂದ್ರ ಹಾಗೂ ಸ್ಟ್ರಾಂಗ್ ರೂಂ ಪರಿಶೀಲನೆ ಮಾಡಿದ್ದು, ಚುನಾವಣೆ ದಿನ ಹಾಗೂ ಮತ ಎಣಿಕೆ ದಿನ ಅಗತ್ಯ ಪೊಲೀಸ್ ಬಂದೋಬಸ್ತ್ ಏರ್ಪಡಿಸಲು ಸಿದ್ಧತೆ ಮಾಡಲಾಗಿದೆ. ಸ್ಟ್ರಾಂಗ್ ರೂಂ ಗೆ ಬಹುಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು. ನಿಷೇಧಾಜ್ಞೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಯಾವುದೇ ಹಂತದಲ್ಲಿ ಸಮಸ್ಯೆಗಳು ಎದುರಾಗದಂತೆ ಉಪಚುನಾವಣೆ ನಡೆಯಲು ಅಗತ್ಯವಿರುವ ಭದ್ರತೆ ಒದಗಿಸಲು ಇಲಾಖೆ ಸಿದ್ಧವಿದೆ ಎಂದರು.