- Home
- Karnataka Districts
- ಬೆಂಗಳೂರು ಧರ್ಮರಾಯಸ್ವಾಮಿ ದೇಗುಲ ದ್ರೌಪದಿ ದೇವಿಯ 120 ಗ್ರಾಂ ಚಿನ್ನದ ಸರ ಕದ್ದ ಮುಜರಾಯಿ ಅಧಿಕಾರಿ; ಅಧ್ಯಕ್ಷರ ಆರೋಪ
ಬೆಂಗಳೂರು ಧರ್ಮರಾಯಸ್ವಾಮಿ ದೇಗುಲ ದ್ರೌಪದಿ ದೇವಿಯ 120 ಗ್ರಾಂ ಚಿನ್ನದ ಸರ ಕದ್ದ ಮುಜರಾಯಿ ಅಧಿಕಾರಿ; ಅಧ್ಯಕ್ಷರ ಆರೋಪ
ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ವೇಳೆ ಸಿಕ್ಕ 120 ಗ್ರಾಂ ತೂಕದ ಚಿನ್ನದ ಸರವನ್ನು ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಯೇ ಕದ್ದಿದ್ದಾರೆ ಎಂದು ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಸತೀಶ್ ಆರೋಪಿಸಿದ್ದಾರೆ. ಈಗ 63 ಗ್ರಾಂ ತೂಕದ ಚಿನ್ನದ ಸರ ವಾಪಸ್ ತಂದಿದ್ದಾರೆ.

ಧರ್ಮರಾಯಸ್ವಾಮಿ ದ್ರೌಪದಿ ದೇವಿ ನೆಕ್ಲೆಸ್ ಕಳ್ಳತನ
ಬೆಂಗಳೂರು (ಫೆ.03): ಐತಿಹಾಸಿಕ ಬೆಂಗಳೂರು ಕರಗಕ್ಕೆ ಹೆಸರಾಗಿರುವ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಭಾರೀ ಅವ್ಯವಹಾರ ಮತ್ತು ಕಳ್ಳತನ ನಡೆದಿದೆ ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ. ದೇವಸ್ಥಾನದ ಆವರಣದಲ್ಲಿ ಹುಂಡಿ ಎಣಿಕೆ ಮಾಡುವಾಗ ಸಿಕ್ಕಿದ್ದ ದ್ರೌಪದಿ ದೇವಿಯ 120 ಗ್ರಾಂ ತೂಕದ ಚಿನ್ನದ ಸರವನ್ನು ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ (EO) ನಾಗರಾಜ್ ಅವರು ಕದ್ದು ಜೇಬಿಗೆ ಹಾಕಿಕೊಂಡಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಸತೀಶ್ ಗಂಭೀರ ಆರೋಪ ಮಾಡಿದ್ದಾರೆ.
ಹುಂಡಿ ಎಣಿಕೆಯಲ್ಲಿ ಸಿಕ್ಕಿದ್ದ ಚಿನ್ನದ ಸರ
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸತೀಶ್, ಮುಜರಾಯಿ ಇಲಾಖೆಯ ಅಧಿಕಾರಿಗಳ ವಿರುದ್ಧ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿದ್ದಾರೆ. 'ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದಾಗ ದೇವಿಗೆ ಸೇರಿದ 120 ಗ್ರಾಂ ತೂಕದ ಚಿನ್ನದ ಸರ ಪತ್ತೆಯಾಗಿತ್ತು. ನಿಯಮದ ಪ್ರಕಾರ ದೇವಸ್ಥಾನದ ಯಾವುದೇ ಆಸ್ತಿಯು ಸೂಕ್ತ ಪ್ರಕ್ರಿಯೆ ಇಲ್ಲದೆ ದೇವಸ್ಥಾನದ ಆವರಣ ಬಿಟ್ಟು ಹೊರಹೋಗುವಂತಿಲ್ಲ.
ಇಒ ನಾಗರಾಜ್ ಚಿನ್ನದ ಸರ ಕದ್ದೊಯ್ದಿದ್ದಾರೆ
ಆದರೆ, ಇಒ ನಾಗರಾಜ್ ಅವರು ಕಾನೂನು ಉಲ್ಲಂಘಿಸಿ ಆ ಸರವನ್ನು ತಮ್ಮ ಜೇಬಿಗೆ ಹಾಕಿಕೊಂಡು ಹೋಗಿದ್ದಾರೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಾನು ಆರ್‌ಟಿಐ (RTI) ಮೂಲಕ ಮಾಹಿತಿ ಪಡೆದು ವಿಡಿಯೋ ಪರಿಶೀಲಿಸಿದಾಗ ಸತ್ಯ ಬಯಲಾಗಿದೆ. ಸ್ವತಃ ನಾಗರಾಜ್ ಅವರೇ ಈ ತಪ್ಪನ್ನು ಒಪ್ಪಿಕೊಂಡಿದ್ದಾರೆ' ಎಂದು ಸತೀಶ್ ದೂರಿದರು.
ಕಳ್ಳತನ ಮಾಡಿದ್ದು 120 ಗ್ರಾಂ ಸರ, ವಾಪಸ್ ಬಂದಿದ್ದು 60 ಗ್ರಾಂ ಬಂಗಾರ
ಈ ಬಗ್ಗೆ ಪ್ರಶ್ನೆ ಮಾಡಿದ ನಂತರ, ಸಿಸಿಟಿವಿ ವಿಡಿಯೋ ಸಮೇತ ಬಿಗಿ ಮಾಡಿದ ತಕ್ಷಣ ಬಂಗಾರದ ನೆಕ್ಲೆಸ್ ಅನ್ನು ವಾಪಸ್ ತಂದಿಟ್ಟಿದ್ದಾರೆ. ಆದರೆ, ತೆಗೆದುಕೊಂಡು ಹೋಗುವಾಗ 120 ಗ್ರಾಂ ಇದ್ದ ಚಿನ್ನದ ಸರದಲ್ಲಿ ಕೇವಲ 63 ಗ್ರಾಂ ತೂಕದ ಸರವನ್ನು ಮಾತ್ರ ವಾಪಸ್ ತಂದು ಹಾಕಿದ್ದಾರೆ. ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನದ ಸರದಲ್ಲಿ ಇದೀಗ ವಾಪಸ್ 10 ಲಕ್ಷ ರೂ. ಮೌಲ್ಯದ ಚಿನ್ನ ಮಾತ್ರ ವಾಪಸ್ ಬಂದಿದೆ. ಇದನ್ನು ಸೂಕ್ತ ತನಿಖೆ ಮಾಡಿಸಿ ಕ್ರಮ ಕೈಗೊಳ್ಳಬೇಕು ಎಂದು ನಿಕಟಪೂರ್ವ ಅಧ್ಯಕ್ಷ ಸತೀಶ್ ಆಗ್ರಹಿಸಿದ್ದಾರೆ.
ಒಟ್ಟು 6 ಜನರಿಂದ ಕಳ್ಳತನ
ಒಟ್ಟು ಆರು ಮಂದಿ ಅಧಿಕಾರಿಗಳು ಒಂದಾಗಿ ಈ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಸತೀಶ್, ಇಒ ನಾಗರಾಜ್, ತಹಶೀಲ್ದಾರ್ ಅರವಿಂದ್ ಬಾಬು, ಎಡಿಸಿ ಜಗದೀಶ್, ಇಒ ನವೀನ್ ಮತ್ತು ಅಸಿಸ್ಟೆಂಟ್ ಕಮಿಷನರ್ ಪುರುಷೋತ್ತಮ್ ಅವರ ಹೆಸರನ್ನು ಬಹಿರಂಗಪಡಿಸಿದರು.
ಕರಗ ಉತ್ಸವದ ಬಿಲ್ ಕೇಳಿದರೂ ಕಮೀಷನ್ ಕಿರುಕುಳ
ಮುಜರಾಯಿ ಇಲಾಖೆಯಲ್ಲಿ ಅಧಿಕಾರಿಗಳು ಸಂಘಟಿತರಾಗಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಸತೀಶ್ ಕಿಡಿಕಾರಿದರು. 'ಅಧಿಕಾರಿಗಳು 10 ಲಕ್ಷ ರೂಪಾಯಿ ಬಿಲ್ ಮಂಜೂರು ಮಾಡಲು 2 ಲಕ್ಷ ರೂಪಾಯಿ ಕಮಿಷನ್ ಕೇಳುತ್ತಿದ್ದಾರೆ.
ಅಂದರೆ ನೇರವಾಗಿ 20% ಕಮಿಷನ್‌ಗೆ ಬೇಡಿಕೆ ಇಡುತ್ತಿದ್ದಾರೆ. ಹೂವಿನ ಅಲಂಕಾರ, ಲೈಟಿಂಗ್ಸ್ ಮತ್ತು ಇತರ ವ್ಯವಸ್ಥೆಗಳ ಗುತ್ತಿಗೆ ಪಡೆದವರಿಂದ ಲಂಚಕ್ಕಾಗಿ ಪೀಡಿಸುತ್ತಿದ್ದಾರೆ. ಬೆಂಗಳೂರು ಕರಗೋತ್ಸವದ ಬಿಲ್ ಪಾವತಿಯಲ್ಲಿ ಅಧಿಕಾರಿಗಳು ಭಾರೀ ಗೋಲ್ಮಾಲ್ ನಡೆಸಿದ್ದಾರೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸಿಲ್ಲ
ಕರಗ ಉತ್ಸವಕ್ಕೆ ಸುಮಾರು ಒಂದೂವರೆ ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದರೂ, ಕೇವಲ 40 ಲಕ್ಷ ರೂಪಾಯಿಗಳನ್ನು ಮಾತ್ರ ಒಂದು ತಿಂಗಳ ಬಳಿಕ ಬಿಡುಗಡೆ ಮಾಡಲಾಗಿದೆ. ಈ ಹಣ ಇಒ ನವೀನ್ ಅವರ ಖಾತೆಗೆ ಬಂದಿದ್ದರೂ, ಅವರು ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸಿಲ್ಲ. ಕೇವಲ ಮಲ್ಲಿಗೆ ಹೂವಿನ ಹಾರ ನೀಡಿದ ವ್ಯಾಪಾರಿಗೆ 8 ಲಕ್ಷ ರೂಪಾಯಿ ನಗದು ನೀಡಿರುವುದನ್ನು ಬಿಟ್ಟರೆ, ಉಳಿದ 32 ಲಕ್ಷ ರೂಪಾಯಿ ಹಣ ಏನಾಯಿತು ಎಂಬುದು ಯಾರಿಗೂ ತಿಳಿದಿಲ್ಲ ಎಂದು ಸತೀಶ್ ಪ್ರಶ್ನಿಸಿದರು.
ಹಿಂದೂ ದೇವಾಲಯಗಳೇ ಟಾರ್ಗೆಟ್
'ಸಮಯಕ್ಕೆ ಸರಿಯಾಗಿ ಬಂದು ಹುಂಡಿ ಹಣ ತೆಗೆದುಕೊಂಡು ಹೋಗುವ ಅಧಿಕಾರಿಗಳು, ದೇವಸ್ಥಾನದ ಅಭಿವೃದ್ಧಿಗೆ ಮತ್ತು ವೀರಕುಮಾರರಿಗೆ ನಯಾಪೈಸೆ ಕೊಡುವುದಿಲ್ಲ. ಹಿಂದೂ ದೇವಾಲಯಗಳನ್ನೇ ಯಾಕೆ ಟಾರ್ಗೆಟ್ ಮಾಡುತ್ತೀರಿ? ತಾಕತ್ತಿದ್ದರೆ ಮಸೀದಿ ಮತ್ತು ಚರ್ಚ್‌ಗಳ ಹುಂಡಿ ಹಣವನ್ನು ಮುಜರಾಯಿ ಇಲಾಖೆಗೆ ತೆಗೆದುಕೊಳ್ಳಿ' ಎಂದು ಸತೀಶ್ ಸವಾಲು ಹಾಕಿದರು.
ಕೂಡಲೇ ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು ಹಿಂದೂ ದೇವಾಲಯಗಳನ್ನು ಮುಜರಾಯಿ ಇಲಾಖೆಯ ಹಿಡಿತದಿಂದ ಮುಕ್ತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
