- Home
- Karnataka Districts
- ನಮ್ಮೂರಿಗೆ ರಸ್ತೆಯೂ ಬೇಡ, ಅಭಿವೃದ್ಧಿಯೂ ಬೇಡ; ಸರ್ಕಾರದ ಯೋಜನೆಗಳಿಗೆ ಕಾಫಿನಾಡಿನ ಗ್ರಾಮಸ್ಥರಿಂದಲೇ ವಿರೋಧ!
ನಮ್ಮೂರಿಗೆ ರಸ್ತೆಯೂ ಬೇಡ, ಅಭಿವೃದ್ಧಿಯೂ ಬೇಡ; ಸರ್ಕಾರದ ಯೋಜನೆಗಳಿಗೆ ಕಾಫಿನಾಡಿನ ಗ್ರಾಮಸ್ಥರಿಂದಲೇ ವಿರೋಧ!
ಚಿಕ್ಕಮಗಳೂರು ತಾಲೂಕಿನ ದೋಣಗೂಡಿಗೆ ಗ್ರಾಮದಲ್ಲಿ, ಮಂಜೂರಾದ ರಸ್ತೆ ಕಾಮಗಾರಿಗೆ ಗ್ರಾಮದ ಇಬ್ಬರು ವ್ಯಕ್ತಿಗಳು ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಮಳೆಗಾಲದಲ್ಲಿ ವಿದ್ಯಾರ್ಥಿಗಳು ಮತ್ತು ರೈತರು ಸೇರಿದಂತೆ ಗ್ರಾಮಸ್ಥರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆೆ.

ನಮ್ಮೂರಿಗೆ ರಸ್ತೆ ಅಭಿವೃದ್ಧಿ ಬೇಡ
ಚಿಕ್ಕಮಗಳೂರು (ಜೂ.05): ಸಾಮಾನ್ಯವಾಗಿ ಗ್ರಾಮಗಳಿಗೆ ರಸ್ತೆ ಬೇಕು, ಕುಡಿಯುವ ನೀರು ಬೇಕು, ವಿದ್ಯುತ್ ಬೇಕು ಎಂದು ಜನ ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದನ್ನು ನಾವು ನೋಡಿದ್ದೇವೆ. ಆದರೆ, ಚಿಕ್ಕಮಗಳೂರು ಜಿಲ್ಲೆಯ ಗ್ರಾಮವೊಂದರಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. 'ನಮ್ಮೂರಿಗೆ ರಸ್ತೆ ಅಭಿವೃದ್ಧಿ ಬೇಡ' ಎಂದು ಸ್ಥಳೀಯರೇ ಅಡ್ಡಿಪಡಿಸುತ್ತಿರುವ ವಿಚಿತ್ರ ಹಾಗೂ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಏನಿದು ಘಟನೆ?
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ದೋಣಗೂಡಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹತ್ತಾರು ವರ್ಷಗಳಿಂದ ಹದಗೆಟ್ಟಿದ್ದ ರಸ್ತೆಯನ್ನು ಸುಧಾರಿಸಲು ಗ್ರಾಮಸ್ಥರೆಲ್ಲರೂ ಸೇರಿ ಶ್ರಮಿಸಿದ್ದರು. ಅಂತೂ ಇಂತೂ ಸರ್ಕಾರದ ಗಮನ ಸೆಳೆದು ರಸ್ತೆ ಕಾಮಗಾರಿ ಮಂಜೂರಾಗಿತ್ತು. ಇತ್ತೀಚೆಗೆ ಸ್ಥಳೀಯ ಶಾಸಕಿ ನಯನಾ ಮೋಟಮ್ಮ ಅವರು ರಸ್ತೆ ಕಾಮಗಾರಿಗೆ ಚಾಲನೆ ಕೂಡ ನೀಡಿದ್ದರು. ಆದರೆ, ಕಾಮಗಾರಿ ಅರ್ಧಕ್ಕೆ ನಿಲ್ಲುವಂತಾಗಿದೆ. ಇದಕ್ಕೆ ಕಾರಣ ಅದೇ ಗ್ರಾಮದ ಕೆಲವರ ವಿರೋಧ!
ಅಭಿವೃದ್ಧಿಗೆ ಕುತ್ತಾದ ಇಬ್ಬರು ವ್ಯಕ್ತಿಗಳು:
ಗ್ರಾಮದ ರಸ್ತೆ ಅಭಿವೃದ್ಧಿಗೆ ಅದೇ ಗ್ರಾಮದ ನಿವಾಸಿ ರಮೇಶ್ ಗೌಡ ಎಂಬಾತ ನಿರಂತರವಾಗಿ ಅಡ್ಡಿಪಡಿಸುತ್ತಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈತನಿಗೆ ಪ್ರತೀಕ್ ಎಂಬ ಮತ್ತೊಬ್ಬ ವ್ಯಕ್ತಿ ಸಾಥ್ ನೀಡುತ್ತಿದ್ದಾನೆ. ಈ ಇಬ್ಬರ ವರ್ತನೆಯಿಂದಾಗಿ ಇಡೀ ಗ್ರಾಮದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಕಾಮಗಾರಿ ಮಂಜೂರಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗ್ರಾಮದ ನಿವಾಸಿ ರಾಜೇಶ್ ಎಂಬುವವರ ಮೇಲೆ ರಮೇಶ್ ಗೌಡ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎನ್ನಲಾಗಿದೆ. ರಸ್ತೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ರಮೇಶ್, ರಾಜೇಶ್ ಅವರ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಗ್ರಾಮದ ಹಿರಿಯರಾದ ರುದ್ರೇಗೌಡ ಅಸಮಾಧಾನ ಹೊರಹಾಕಿದ್ದಾರೆ.
ಸಂಕಷ್ಟದಲ್ಲಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು:
ರಸ್ತೆ ಕಾಮಗಾರಿ ಆರಂಭದಲ್ಲಿ ಅತಿ ವೇಗವಾಗಿ ನಡೆದಿತ್ತು. ಆದರೆ ಈ ಕಿರಿಕ್‌ನಿಂದಾಗಿ ಕಾಮಗಾರಿ ಅರ್ಧಕ್ಕೇ ನಿಂತಿದೆ. ಮಳೆಗಾಲ ಆರಂಭವಾಗಿರುವುದರಿಂದ ರಸ್ತೆ ಕೆಸರುಮಯವಾಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವ ರೈತರು ಹಾಗೂ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಬೇಕಾದ ಹಿರಿಯ ನಾಗರಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಅಧಿಕಾರಿಗಳ ಗಮನಕ್ಕೆ ಮನವಿ:
ಒಂದೆಡೆ ಸರ್ಕಾರ ರಸ್ತೆ ನೀಡಲು ಮುಂದಾಗಿದ್ದರೂ, ವೈಯಕ್ತಿಕ ದ್ವೇಷ ಅಥವಾ ಇನ್ನಾವುದೋ ಕಾರಣಕ್ಕಾಗಿ ಸಾರ್ವಜನಿಕ ಕೆಲಸಕ್ಕೆ ಅಡ್ಡಿಪಡಿಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೂಡಲೇ ಸಂಬಂಧಪಟ್ಟ ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ಮಧ್ಯಪ್ರವೇಶಿಸಿ, ಅಡ್ಡಿಪಡಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸ್ಥಗಿತಗೊಂಡಿರುವ ರಸ್ತೆ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ದೋಣಗೂಡಿಗೆ ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.
ಕಾಫಿನಾಡಿನ ಈ 'ವಿಚಿತ್ರ' ವಿರೋಧ ಈಗ ಜಿಲ್ಲಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಶಾಸಕಿ ನಯನಾ ಮೋಟಮ್ಮ ಅವರು ಈ ವಿಚಾರದಲ್ಲಿ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

