ಬೆಳಗಾವಿಯ ಯುವಕನೊಬ್ಬ ಯುವತಿಯ ಕಾಟಕ್ಕೆ ಬೇಸತ್ತು ದೇವರ ಮೊರೆ ಹೋಗಿರುವ ವಿಚಿತ್ರ ಘಟನೆ ನಡೆದಿದೆ. ರಾಮದುರ್ಗದ ರಾಘವೇಂದ್ರ ಸ್ವಾಮಿ ಮಠದ ಹುಂಡಿಯಲ್ಲಿ 'ರಾಯರೇ, ಆ ಹುಡುಗಿಯಿಂದ ನನ್ನನ್ನು ಕಾಪಾಡು' ಎಂದು ಬರೆದಿದ್ದ ಅನಾಮಧೇಯ ಪತ್ರವೊಂದು ಪತ್ತೆಯಾಗಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿ (ಆ.5): ಹುಡುಗನ ಕಾಟಕ್ಕೆ ಬೇಸತ್ತು ಯುವತಿ ಸಾವು, ಪತಿ ಕಿರುಕುಳಕ್ಕೆ ನೊಂದ ಪತ್ನಿ ಸಾವು, ಕಾಲೇಜು ಯುವತಿಗೆ ಪಾಗಲ್ ಪ್ರೇಮಿ ಕಾಟ.. ಸಾಮಾನ್ಯವಾಗಿ ಇಂಥ ಸುದ್ದಿಗಳನ್ನ ದಿನನಿತ್ಯ ಪತ್ರಿಕೆ, ಮಾಧ್ಯಮಗಳಲ್ಲಿ ಕೇಳುತ್ತಿರುತ್ತೇವೆ. ಆದರೆ ಇದಕ್ಕೆ ತದ್ವಿರುದ್ಧವಾದ, ವಿಚಿತ್ರ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಯುವತಿ ಅಲ್ಲ, ಯುವಕನೇ ಹುಡುಗಿಯ ಕಾಟಕ್ಕೆ ಬೇಸತ್ತು ದೇವರ ಮೊರೆ ಹೋಗಿದ್ದಾನೆ!
ಹುಡುಗಿಯ ಕಾಟಕ್ಕೆ ಬೇಸತ್ತು ರಾಯರ ಮೊರೆ ಹೋದ ಯುವಕ!
ಹೌದು. ಹುಡುಗಿಯ ಕಾಟಕ್ಕೆ ಬೇಸತ್ತು ಬೆಳಗಾವಿ ಯುವಕ ರಾಯರ ಮೊರೆ ಹೋಗಿದ್ದಾನೆ. 'ರಾಯರೇ, ನಿಮ್ಮ ದಮ್ಮಯ್ಯ ಹುಡುಗಿಯಿಂದ ನನ್ನ ಕಾಪಾಡು' ಎಂದು ದೇವರಿಗೆ ಮನವಿ ಪತ್ರ ಬರೆದಿರುವುದು ಈಗ ಸೋಷಿಯಲ್ ಮೀಡಿಯಾದ್ಲಲಿ ಚರ್ಚೆಗೆ ಗ್ರಾಸವಾಗಿದೆ.
ಹುಂಡಿಯಲ್ಲಿ ವಿಚಿತ್ರ ಹರಕೆ ಪತ್ರ!
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಾಲ ಕಾಲಕ್ಕೆ ಹುಂಡಿ ಎಣಿಕೆ ಕಾರ್ಯ ನಡೆಯುತ್ತೆ. ಇತ್ತೀಚೆಗೆ ಮಠದ ಸಿಬ್ಬಂದಿ ಹುಂಡಿ ಎಣಿಕೆ ಮಾಡಿದ್ದರು. ಈ ವೇಳೆ ಹುಂಡಿಯಲ್ಲಿ ಹಣದೊಂದಿಗೆ ಒಂದು ವಿಚಿತ್ರ ಪತ್ರ ಪತ್ತೆಯಾಗಿದೆ. ಭಕ್ತರು ಬರೆದ ಸಾಮಾನ್ಯ ಹರಕೆ ಪತ್ರ ಇರಬಹುದೆಂದು ಭಾವಿಸಿದ್ದ ಸಿಬ್ಬಂದಿ ಕುತೂಹಲದಿಂದ ತೆರೆದು ಓದಿದ ಮೇಲೆ ಶಾಕ್ ಆಗಿದ್ದಾರೆ.
'ರಾಯರೇ ಹುಡುಗಿಯಿಂದ ನನ್ನನ್ನು ಕಾಪಾಡು..'
ಪತ್ರದಲ್ಲಿ 'ಶ್ರೀ ಗಣಪತಿಯೇ ನಮಃ ಅಂತಾ ಯುವಕ ಮೊದಲಿಗೆ ವಿಘ್ನನಿವಾರಕನ ಸ್ಮರಣೆ ಮಾಡಿದ್ದಾನೆ. ನಂತರ ಸಾಲಿನಲ್ಲಿ ಓಂ ಶ್ರೀ ರಾಘವೇಂದ್ರಾಯ ನಮಃ ಎಂದು ಬರೆದಿರುವ ಯುವಕ ಮುಂದಿನ ಸಾಲುಗಳಲ್ಲಿ 'ರಾಯರೇ, ನಮ್ಮನ್ನ ಆ ವಿಷದಿಂದ ಕಾಪಾಡು. ಆ ಹುಡುಗಿಯಿಂದ ನನ್ನ ಕಾಪಾಡು. ಈ ಕಷ್ಟದಿಂದ ಹೇಗಾದರೂ ನಮ್ಮನ್ನು ಪಾರು ಮಾಡು ಎಂದು ಯುವಕ ಬೇಡಿಕೊಂಡಿದ್ದಾನೆ.
ನಮ್ಮನೊಂದಿಗೆ ರಾಯರು ಇದ್ದಾರೆ ಎಂದು ನಂಬಿದ್ದೇನೆ. ಹೀಗಾಗಿ ರಾಯರಲ್ಲಿ ನನ್ನ ಕಷ್ಟ ಹೇಳಿಕೊಂಡು ಈ ಪತ್ರ ಬರೆದಿದ್ದೇನೆ. ನನ್ನ ಕಷ್ಟ ರಾಯರು ಕೇಳಿಸಿಕೊಳ್ಳುತ್ತಿದ್ದಾರೆಂದು ನನ್ನ ನಂಬಿಕೆ. ಗುರುಗಳೇ ಆದಿಶಕ್ತಿ ದೇವಿ, ತಂದೆ ತಾಯಿ ಕಾಪಾಡು ಎಂದು ಯುವಕ ಬೇಡಿಕೊಂಡಿದ್ದಾನೆ.
ಆದರೆ ಇಷ್ಟೆಲ್ಲ ಬರೆದಿರುವ ಯುವಕ, ಇಡೀ ಪತ್ರದಲ್ಲಿ ಎಲ್ಲಿಯೂ ತನ್ನ ಹೆಸರು, ಗುರುತು ಪತ್ರದಲ್ಲಿ ಉಲ್ಲೇಖಿಸಿಲ್ಲ. ಹೀಗಾಗಿ ಈ ಪತ್ರ ಯಾರು ಬರೆದರು. ಆ ಹುಡುಗನಿಗೆ ಕಾಟ ಕೊಡ್ತಿರೊ ಆ ಖತರ್ನಾಕ್ ಹುಡುಗಿ ಯಾರು ಅನ್ನೋದು ಆ ಹುಡುಗನಿಗೂ ರಾಯರಿಗೂ ಇಬ್ಬರಿಗೆ ಹೊರತುಪಡಿಸಿ ಬೇರೆ ಯಾರಿಗೂ ಗೊತ್ತಿಲ್ಲ!


