- Home
- Karnataka Districts
- Chikkamagaluru: ದತ್ತಪೀಠದ ತಪ್ಪಲು ಮಾಣಿಕ್ಯಧಾರಾ ರಸ್ತೆಯಲ್ಲೂ ಅಕ್ರಮ ಗೋರಿ, ಹಸಿರು ಚಾದರ ಪತ್ತೆ! ಹಿಂದೂಗಳ ಆಕ್ರೋಶ
Chikkamagaluru: ದತ್ತಪೀಠದ ತಪ್ಪಲು ಮಾಣಿಕ್ಯಧಾರಾ ರಸ್ತೆಯಲ್ಲೂ ಅಕ್ರಮ ಗೋರಿ, ಹಸಿರು ಚಾದರ ಪತ್ತೆ! ಹಿಂದೂಗಳ ಆಕ್ರೋಶ
ಚಿಕ್ಕಮಗಳೂರಿನಲ್ಲಿ ಮತ್ತೆ ವಿವಾವ ಆರಂಭ. ದತ್ತಪೀಠದಿಂದ ಮಾಣಿಕ್ಯಧಾರಕ್ಕೆ ಹೋಗುವ ದಾರಿಯಲ್ಲಿ ಅಕ್ರಮವಾಗಿ ಗೋರಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತಿದ್ದು, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಗಳು ಆಗ್ರಹಿಸಿವೆ.

ಚಿಕ್ಕಮಗಳೂರು: ಕಾಫಿನಾಡಿನ ಧಾರ್ಮಿಕ ಕ್ಷೇತ್ರ 'ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ' (ದತ್ತಪೀಠ) ಆವರಣದಲ್ಲಿ ಈಗ ಮತ್ತೊಂದು ಹೊಸ ವಿವಾದ ಮುನ್ನೆಲೆಗೆ ಬಂದಿದೆ. ದತ್ತಪೀಠದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಮಾಣಿಕ್ಯಧಾರಕ್ಕೆ ತೆರಳುವ ಮಾರ್ಗ ಮಧ್ಯೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಹಿಂದೂ ಸಂಘಟನೆಗಳು ಗಂಭೀರ ಆರೋಪ ಮಾಡಿವೆ.
ಏನಿದು ಹೊಸ ವಿವಾದ?
ದತ್ತಪೀಠದಿಂದ ಮಾಣಿಕ್ಯಧಾರಕ್ಕೆ ಹೋಗುವ ದಾರಿಯಲ್ಲಿರುವ ಮರಗಳ ಕೆಳಗೆ ಹಸಿರು ಚಾದರಗಳನ್ನು ಹೊದಿಸಿ, ಅಲ್ಲಿ ಹೊಸದಾಗಿ ಗೋರಿಗಳನ್ನು ನಿರ್ಮಾಣ ಮಾಡಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂಬುದು ಬಜರಂಗದಳ ಹಾಗೂ ಇತರ ಹಿಂದೂ ಸಂಘಟನೆಗಳ ವಾದ. ಈ ಮಾರ್ಗ ಮಧ್ಯೆ ಅನಧಿಕೃತವಾಗಿ ಇಸ್ಲಾಂ ಧರ್ಮದ ಕುರುಹುಗಳನ್ನು ಸೃಷ್ಟಿಸಲಾಗುತ್ತಿದೆ ಮತ್ತು ಹೊಸ ಆಚರಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಸಂಘಟನೆಗಳು ದೂರಲಿವೆ.
ಜಿಲ್ಲಾಡಳಿತದ ವಿರುದ್ಧ ಅಸಮಾಧಾನ:
ಈ ಕುರಿತು ಮಾತನಾಡಿರುವ ಬಜರಂಗದಳದ ಮುಖಂಡ ರಘು ಸಕಲೇಶಪುರ, 'ಧಾರ್ಮಿಕ ದತ್ತಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಕಣ್ಣೆದುರೇ ಈ ಅಕ್ರಮಗಳು ನಡೆಯುತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ ದತ್ತಪೀಠದ ವ್ಯಾಪ್ತಿಯಲ್ಲಿ ಯಾವುದೇ ಹೊಸ ಆಚರಣೆಗಳಿಗೆ ಅಥವಾ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶವಿಲ್ಲ. ಆದರೆ, ಕೋರ್ಟ್ ಆದೇಶವನ್ನು ಇಲ್ಲಿ ಗಾಳಿಗೆ ತೂರಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯದ ಆದೇಶ ಪಾಲನೆಗೆ ಆಗ್ರಹ:
ದತ್ತಪೀಠದ ಉಮೇದುವಾರಿಕೆಗಾಗಿ ಈಗಾಗಲೇ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಸುದೀರ್ಘ ಕಾನೂನು ಹೋರಾಟ ನಡೆಯುತ್ತಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ ಮಾಣಿಕ್ಯಧಾರದ ಹಾದಿಯಲ್ಲಿ ಅನಧಿಕೃತ ಗೋರಿಗಳ ನಿರ್ಮಾಣಕ್ಕೆ ಅವಕಾಶ ನೀಡುವುದು ಶಾಂತಿ ಕದಡುವ ಕೆಲಸವಾಗಿದೆ. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ, ಹಸಿರು ಚಾದರ ಹೊದಿಸಿ ಪೂಜೆ ಮಾಡುತ್ತಿರುವುದನ್ನು ತಡೆಗಟ್ಟಬೇಕು ಮತ್ತು ಅಕ್ರಮ ಗೋರಿಗಳನ್ನು ತೆರವುಗೊಳಿಸಬೇಕು ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.
ಒಟ್ಟಾರೆಯಾಗಿ, ದತ್ತಪೀಠದ ವಿವಾದವು ಕೇವಲ ಪೀಠಕ್ಕೆ ಸೀಮಿತವಾಗದೆ ಈಗ ಮಾಣಿಕ್ಯಧಾರದ ಮಾರ್ಗಕ್ಕೂ ಹಬ್ಬುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

