ಚಿಕ್ಕಮಗಳೂರು: ದತ್ತಜಯಂತಿ ಶೋಭಾಯಾತ್ರೆ, ವೀರಗಾಸೆ ಕತ್ತಿ ಹಿಡಿದು ಸಿ.ಟಿ.ರವಿ ಭರ್ಜರಿ ಡ್ಯಾನ್ಸ್!
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಡಿ.13): ಕಾಫಿನಾಡಿನ ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಜಯಂತಿ ಸಂಭ್ರಮ ಮನೆ ಮಾಡಿದೆ. ದತ್ತಜಯಂತಿ ಉತ್ಸವದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಇಂದು(ಶುಕ್ರವಾರ) ಮಾಲಾಧಾರಿಗಳು ಭಿಕ್ಷಾಟನೆ ಮೂಲಕ ಪಡಿ ಸಂಗ್ರಹಿಸಿದ್ರು. ಇನ್ನು ಪ್ರತಿ ವರ್ಷದಂತೆ ಶೋಭಯಾತ್ರೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ದತ್ತ ಭಕ್ತರು ಪಾಲ್ಗೊಂಡಿದ್ದರು. ಭಜನೆ, ಕೀರ್ತನೆ, ಡಿಜೆ ಸೌಂಡ್ ಸಿಸ್ಟಮ್ ಶೋಭಾಯಾತ್ರೆಯ ಮೆರಗು ಹೆಚ್ಚಸಿದ್ವು. ದತ್ತ ಪೀಠದ ಮುಕ್ತಿಗಾಗಿ ಹೋರಾಟ ನಿರಂತರವೆಂದು ಭಕ್ತರು ಪುನರುಚ್ಚರಿಸಿದ್ರು.
ಚಿಕ್ಕಮಗಳೂರು ನಗರ ಇಂದು ಅಕ್ಷರಶಃ ಸಂಪೂರ್ಣ ಕೇಸರಿ ಮಯವಾಗಿತ್ತು. ದತ್ತ ಜಯಂತಿಯ ಎರಡನೇ ದಿನವಾದ ಇಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು. ಬಸವನಹಳ್ಳಿಯ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಾತ್ರೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಶೋಭಾಯಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಿತು.
ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಸಾಗಿದ ಶೋಭಾಯಾತ್ರೆ ಆಜಾದ್ ವೃತ್ತದಲ್ಲಿ ಕೊನೆಗೊಳ್ತು. ಶೋಭಾಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ದತ್ತ ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ರು. ಇನ್ನು ಶೋಭಾಯಾತ್ರೆಯಲ್ಲಿ ಯುವಕ, ಯುವತಿಯರು ರಸ್ತೆ ಉದ್ದಕ್ಕೂ ಹಾಡಿಗೆ ತಕ್ಕಂತೆ ದತ್ತಭಕ್ತರು ಹೆಜ್ಜೆ ಹಾಕಿದರು. ನಗರದ ಹನುಮಂತಪ್ಪ ವೃತ್ತದಿಂದ ಎಮ್ ಜಿ ರಸ್ತೆ ಯ ಉದ್ದಕ್ಕೂ ಡಿ.ಜೆ. ಸದ್ದಿಗೆ ಮನಸ್ಸೋ ಇಚ್ಛೆ ಯುವಕ-ಯುವತಿಯರು ಕುಣಿದುಕಪ್ಪಳಿಸಿದರು.
ಶೋಭಾಯಾತ್ರೆಗೆ ಚಾಲನೆಯ ವೇಳೆಯಲ್ಲಿ ಶಾಸಕ ಸಿ.ಟಿ ರವಿ ಹಳ್ಳಿ ವಾದ್ಯಕ್ಕೆ ಭರ್ಜರಿ ಡ್ಯಾನ್ಸ್ ಮಾಡಿದರು. ತದನಂತರ ಬಸವನಹಳ್ಳಿ ರಸ್ತೆಯಲ್ಲಿ ಸಾಗಿದ ಶೋಭಾಯಾತ್ರೆ ಮಧ್ಯೆದಲ್ಲಿ ವೀರಗಾಸೆ ಕತ್ತಿ ಹಿಡಿದು ಭರ್ಜರಿ ಡ್ಯಾನ್ಸ್ ಮಾಡಿದರು. ಅಲ್ಲದೆ ವೀರಗಾಸೆ ಕತ್ತಿಯಲ್ಲಿ ನಿಂಬೆಹಣ್ಣು, ತೆಂಗಿನಕಾಯಿ ಒಡೆದ ಹೆಜ್ಜೆಹಾಕಿದರು. ಅಲ್ಲದೆ ಮಹಿಳೆಯೊಂದಿಗೆ ಹೆಜ್ಜೆ ಹಾಕುತ್ತಿದ್ದ ಸಿ.ಟಿ. ರವಿ ಪತ್ನಿ ಪಲ್ಲವಿ ರವಿ ಕೂಡ ಡ್ಯಾನ್ಸ್ ಮಾಡಿದ್ದು ಎಲ್ಲರ ಗಮನಸೆಳೆಯಿತು.
ಭಜನೆ, ಹಳ್ಳಿ ವಾದ್ಯ ಶೋಭಾಯಾತ್ರೆಗೆ ಮತ್ತಷ್ಟು ಮೆರಗು ತಂದ್ವು. ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ನ ಸಾವಿರಾರು ಕಾರ್ಯಕರ್ತರು ಬ್ಯಾಂಡ್ ವಾದನಕ್ಕೆ ಹೆಜ್ಜೆ ಹಾಕಿದ್ರು. ಶೋಭಾಯಾತ್ರೆಯ ಉದ್ದಗಲಕ್ಕೂ ಕೆಸರಿಯ ಬಾಹುಟಗಳು ರಾರಾಜಿಸಿದ್ವು. ಇನ್ನು ಸಂಘ ಪರಿವಾರದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ರು.
ಶೋಭಾಯಾತ್ರೆ ಸಾಗಿಹೋಗುವ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇನ್ನು ಶೋಭಾಯಾತ್ರೆಯ ದೃಶ್ಯಾವಳಿಗಳನ್ನ ಪೊಲೀಸ್ ಇಲಾಖೆ ಡ್ರೋಣ್ ಕ್ಯಾಮೆರಾ ಸೆರೆಹಿಡಿದ್ರು. ಇನ್ನು ಬಿಲ್ಡಿಂಗ್ ಗಳ ಮೇಲೆ ಸಾವಿರಾರು ಮಹಿಳೆಯರು ನಿಂತು ಶೋಭಯಾತ್ರೆಯನ್ನ ಕಣ್ತುಂಬಿಕೊಂಡ್ರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಸೇರಿದಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದರು.
ದತ್ತಪೀಠ ಪವಿತ್ರವಾದ ಹಿಂದೂ ಪೀಠ ಎನ್ನುವುದು ನಿಶ್ಚಿತವಾಗಿ ಆಗುತ್ತದೆ. ಇದೇ ಸಂದೇಶವನ್ನು ವಿಶ್ವ ಹಿಂದೂ ಪರಿಷತ್-ಬಜರಂಗದಳ ಹಾಗೂ ಶ್ರೀರಾಮ ಸೇನೆ ಮೂರೂ ಸಂಘಟನೆಗಳು ನಿರ್ಧಾರ ಮಾಡಿವೆ ಎಂದು ಶ್ರೀರಾಮ ಸೇನೆ ರಾಷ್ಟಿಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಶೋಭಾಯಾತ್ರೆಯಲ್ಲಿ ಪಾಲ್ಗೊಂಡುನಂತರ ಮಾತಾಡಿದ ಪ್ರಮೋದ್ ಮುತಾಲಿಕ್ ಅವರು , ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಶ್ರೀರಾಮ ಸೇನೆ ವತಿಯಿಂದ ಕಳೆದ 25 ವರ್ಷಗಳಿಂದ ದತ್ತಪೀಠ ಹಿಂದುಗಳ ಪೀಠ ಆಗಬೇಕೆಂದು ಹೋರಾಟ ಮಾಡುತ್ತಾ ಬಂದಿದ್ದು, ಈಗ ಶುಕ್ರವಾರ ಮತ್ತು ವರ್ಷಕ್ಕೊಮ್ಮೆ ಉರೂಸ್ ಆಗುವುದಕ್ಕಷ್ಟೇ ಸೀಮಿತಗೊಳಿಸಿದ್ದೇವೆ. ಅವರೆಡನ್ನೂ ಮುಂದಿನ ವರ್ಷ ನಾಗೇನಹಳ್ಳಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಹೇಳಿದರು. ಇನ್ನು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಒಟ್ಟಾರೆ ಶೋಭಯಾತ್ರೆಯ ಮೆರವಣಿಗೆ ಸುತ್ತಾಮುತ್ತಾ ಮುಂಜಾಗ್ರತಾ ಕ್ರಮವಾಗಿ 5000 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಚಿಕ್ಕಮಗಳೂರು ಮಾತ್ರವಲ್ಲದೇ ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ದತ್ತ ಭಕ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ನಾಳೆ ಮುಂಜಾನೆ ದತ್ತ ಭಕ್ತರು ಹೊನ್ನಮ್ಮನಹಳ್ಳದಲ್ಲಿ ಮಿಂದು ನಂತರ ದತ್ತಪೀಠಕ್ಕೆ ತೆರಳಿ ಹೋಮ ಹವನ ನಡೆಸುವ ಮೂಲಕ ದತ್ತ ಜಯಂತಿಗೆ ತೆರೆ ಬೀಳಲಿದೆ.