ಬೆಳಗಾವಿ ಉದ್ಯಮಿ ಸಂತೋಷ್ ಅವರದ್ದು ಸಾವಲ್ಲ, ಕೊಲೆ ಎಂದ ಮಗಳು: ಕೇಸಿಗೆ ಸಿಕ್ತು ರೋಚಕ ಟ್ವಿಸ್ಟ್
ಬೆಳಗಾವಿಯಲ್ಲಿ ಉದ್ಯಮಿ ಸಂತೋಷ್ ಪದ್ಮಣ್ಣನವರ ಸಾವು ಕೊಲೆಯೆಂದು ಶಂಕಿಸಲಾಗಿದ್ದು, ಅವರ ಪುತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಸಿಸಿಟಿವಿ ದೃಶ್ಯಗಳು ಅಳಿಸಿಹೋಗಿರುವುದು ಅನುಮಾನ ಹೆಚ್ಚಿಸಿದೆ.
ಬೆಳಗಾವಿಯ ಆಂಜನೇಯ ನಗರದಲ್ಲಿರುವ ಸಂತೋಷ ಪದ್ಮನ್ನವರ ನಿವಾಸವಿದೆ. ಅಕ್ಟೋಬರ್ 9 ರಂದು ಉದ್ಯಮಿ ಸಂತೋಷ್ ಪದ್ಮಣ್ಣನವರ ಅವರು ಮನೆಯಲ್ಲಿ ಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲಿಯೇ ಕುಟುಂಬ ಸದಸ್ಯರು, ದುಃಖತಪ್ತ ಉದ್ಯಮಿಗಳು ಹಾಗೂ ಪಟ್ಟಣದ ನಿವಾಸಿಗಳು ಸೇರಿಕೊಂಡು ಬೆಳಗಾವಿ ಸದಾಶಿವ ನಗರದಲ್ಲಿರುವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿ ಬಂದಿದ್ದರು. ಆದರೆ, ಇದೀಗ ಸಂತೋಷ್ ಸಾವಿನ ಬಗ್ಗೆ ಭಾರೀ ಅನುಮಾನಗಳು ಶುರುವಾಗಿವೆ.
ಉದ್ಯಮಿ ಸಂತೋಷ್ ಅವರದ್ದು ಸಹಜ ಸಾವಲ್ಲ, ಅದು ಕೊಲೆ ಆಗಿರಬಹುದು ಎಂದು ಪುತ್ರಿ ಸಂಜನಾ ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲಿಯೇ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಒಮ್ಮೆ ಅಂತ್ಯಕ್ರಿಯೆ ನಡೆಸಿ ಹೂತಿರುವ ಶವ ತೆಗೆಯಲು ಬೇಕಾದ ಎಲ್ಲ ಅನುಮತಿಯನ್ನು ಪಡೆದ ಪೊಲೀಸರು, ಸಂತೋಷ್ ಅವರ ಮೃತದೇಹವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ಅಗತ್ಯವಿದ್ದ ಎಲ್ಲ ಕ್ರಿಯೆಗಳನ್ನು ಮಾಡಿದ್ದಾರೆ.
ಬೆಳಗಾವಿ ಎಸಿ ಶ್ರವಣಕುಮಾರ್ ಸಮ್ಮುಖದಲ್ಲಿ ಪೊಲೀಸರಿಂದ ಶವ ಹೊರ ತೆಗೆಯುವ ಕಾರ್ಯಾಚರಣೆ ಮಾಡಲಾಗಿದ್ದು, ಬಿಮ್ಸ್ ವೈದ್ಯರು, ಎಫ್‌ಎಸ್‌ಎಲ್ ತಜ್ಞರು, ಫಾರೆನ್ಸಿಕ್ ತಜ್ಞರು ಹಾಗೂ ಮಾಳಮಾರುತಿ ಠಾಣೆ ಪೊಲೀಸರು ಸ್ಥಳದಲ್ಲಿದ್ದರು. ಈ ವೇಳೆ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಈ ಕಾರ್ಯಾಚರಣೆ ಸ್ಥಳದಲ್ಲಿ ಬೀಡು ಬಿಟ್ಟಿದ್ದರು.
ಉದ್ಯಮಿ ಸಂತೋಷ್ ಅವರ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ಪುನಃ ಅವರ ಶವವನ್ನು ಮಣ್ಣಲ್ಲಿ ಹೂಳಲಾಗಿದೆ. ಆದರೆ, ಈ ವೇಳೆ ಮರಣೋತ್ತರ ಪರೀಕ್ಷೆ ಮಾಡುವ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಮತ್ತು ಎಫ್‌ಎಸ್‌ಎಲ್ ತಜ್ಞರ ಮಾಹಿತಿಯಂತೆ ಇದು ಸಹಜ ಸಾವು ಅಲ್ಲ, ಕೊಲೆ ಮಾಡಲಾಗಿದೆ ಎಂಬ ಅನುಮಾನಗಳು ದಟ್ಟವಾಗಿ ಕಂಡುಬಂದಿವೆ. ಈ ಬಗ್ಗೆ ಪೊಲೀಸರು ಕೊಲೆ ಆಗಿರಬಹುದು ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ಯಾರು ಮಾಡಿದ್ದಾರೆ ಎಂಬ ಅನುಮಾನ ದಟ್ಟವಾದ ಬೆನ್ನಲ್ಲಿಯೇ ಅನೈತಿಕ ಸಂಬಂಧ ಅಥವಾ ಆಸ್ತಿ ಹೊಡೆಯುವ ಹುನ್ನಾರದ ವಾಸನೆ ಪೊಲೀಸರಿಗೆ ಬಂದಿದೆ.
ಸಂತೋಷ್ ಅವರ ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ದೃಢವಾಗಲಿದೆ ಕೊಲೆ ರಹಸ್ಯ ಬಯಲಿಗೆ ಬರಲಿದೆ. ಈವರೆಗೆ ತನ್ನ ತಂದೆಯನ್ನು ಬೇರೆ ಹೊರಗಿನವರು ಯಾರೋ ಕೊಲೆ ಮಾಡಿಲ್ಲ, ತನ್ನ ಅಮ್ಮನ ಮೇಲೆಯೇ ಅನುಮಾನ ಇದೆ ಎಂಬ ಸುಳಿವನ್ನೂ ನೀಡಿದ್ದಾರೆ. ಆದ್ದರಿಂದ ಉದ್ಯಮಿ ಸಂತೋಷ್ ಮರಣೋತ್ತರ ಪರೀಕ್ಷಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಸಿಸಿಟಿವಿ ಫೂಟೇಜ್ ಡಿಲೀಟ್:
ಮನೆಯಲ್ಲಿ ಉದ್ಯಮಿ ಸಂತೋಷ್ ಸಾವಿನ ಸಂದರ್ಭದಲ್ಲಿನ ಸುಮಾರು 1 ಗಂಟೆಗಳ ಅವಧಿಯ ಸಿಸಿಟಿವಿ ಫೂಟೇಜ್ ಡಿಲೀಟ್ ಆಗಿದೆ ಎಂದು ಹೇಳಲಾಗುತ್ತಿದೆ. ಅಂದರೆ, ಈ ಬಗ್ಗೆ ಅಪ್ಪನನ್ನು ಬಿಟ್ಟರೆ, ಅಮ್ಮನೇ ಇದನ್ನು ನೋಡಿಕೊಳ್ಳುತ್ತಿದ್ದರು ಎಂದು ಮಗಳು ಮಾಹಿತಿ ನೀಡಿದ್ದಾಳೆ. ಇನ್ನು ಎದುರು ಮನೆಯ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ಮಾಡಿದಾಗ ಈ ಸಂದರ್ಭದಲ್ಲಿ ಇಬ್ಬರು ಗಂಡಸರು ಮನೆಯ ಗೇಟಿನೊಳಗೆ ಹೋಗಿ ಹೊರಗೆ ಬಂದಿರುವ ವಿಡಿಯೋ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷಾ ವರದಿ ಹಾಗೂ ಪೊಲೀಸರ ತನಿಖೆಯಿಂದ ಎಲ್ಲ ಸತ್ಯವೂ ಹೊರಗೆ ಬರಬೇಕಕಿದೆ.