- Home
- Karnataka Districts
- Ballari News: ಮಹಿಳೆಗೆ ಅಶ್ಲೀಲ ಮೆಸೇಜ್ ಮಾಡಿ ರೇಣುಕಾಸ್ವಾಮಿಯಂತೆ ಕಾಲುವೆ ಪಕ್ಕದಲ್ಲಿ ಬೀದಿ ಹೆಣವಾದ ಬಸವನಗೌಡ!
Ballari News: ಮಹಿಳೆಗೆ ಅಶ್ಲೀಲ ಮೆಸೇಜ್ ಮಾಡಿ ರೇಣುಕಾಸ್ವಾಮಿಯಂತೆ ಕಾಲುವೆ ಪಕ್ಕದಲ್ಲಿ ಬೀದಿ ಹೆಣವಾದ ಬಸವನಗೌಡ!
ಬಳ್ಳಾರಿಯಲ್ಲಿ ಮಹಿಳೆಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು, ಆ ಮಹಿಳೆ ತನ್ನ ಪತಿ ಮತ್ತು ಸಹೋದರನೊಂದಿಗೆ ಸೇರಿ ಹತ್ಯೆ ಮಾಡಿದ್ದಾಳೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಂತೆಯೇ ಇರುವ ಈ ಘಟನೆಯಲ್ಲಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಡಲಾಗಿದೆ.

ಬಳ್ಳಾರಿ (ಜೂ.14):ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ನಟ ದರ್ಶನ್ ಮತ್ತು ರೇಣುಕಾಸ್ವಾಮಿ ಹತ್ಯೆ ಪ್ರಕರಣ ಮಾಸುವ ಮುನ್ನವೇ, ಬಳ್ಳಾರಿಯಲ್ಲಿ ಅಂತಹದ್ದೇ ಒಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಆಕೆ ತನ್ನ ಪತಿ ಮತ್ತು ಸೋದರನ ಜೊತೆ ಸೇರಿ ಬರ್ಬರವಾಗಿ ಕೊಲೆ ಮಾಡಿ, ಮೃತದೇಹ ಸುಟ್ಟಿರುವ ಘಟನೆ ನಡೆದಿದೆ.
ಘಟನೆಯ ಹಿನ್ನೆಲೆ:
ಖಾಸಗಿ ಲ್ಯಾಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಪಾಟೀಲ್ ಬಸವನಗೌಡ (26) ಎಂಬ ಯುವಕ ಜೂನ್ 7ರಂದು ನಾಪತ್ತೆಯಾಗಿದ್ದನು. ಮರುದಿನ ಬೆಳಿಗ್ಗೆ ಎಲ್‌ಎಲ್‌ಸಿ (LLC) ಕಾಲುವೆಯ ನಿರ್ಜನ ಪ್ರದೇಶದಲ್ಲಿ ಈತನ ಮೃತದೇಹ ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಮೋಕಾ ಠಾಣೆಯ ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಆಘಾತಕಾರಿ ಸತ್ಯಗಳು ಹೊರಬಿದ್ದಿವೆ.
ಅಶ್ಲೀಲ ಸಂದೇಶವೇ ಸಾವಿಗೆ ಮುನ್ನುಡಿ:
ಕೊಲೆಯಾದ ಬಸವನಗೌಡನಿಗೆ ದೂರದ ಸಂಬಂಧದಲ್ಲಿ ಅತ್ತಿಗೆಯಾಗುವ ಶ್ವೇತಾ ಎಂಬಾಕೆಯ ಪರಿಚಯವಿತ್ತು. ಸುಮಾರು ಎರಡು ವರ್ಷಗಳ ಹಿಂದೆ ಮದುವೆಯೊಂದರಲ್ಲಿ ಪರಿಚಯವಾಗಿದ್ದ ಇವರಿಬ್ಬರ ನಡುವೆ ಮಾತುಕತೆ ನಡೆದಿತ್ತು. ಆದರೆ, ಬಸವನಗೌಡ ಇದನ್ನು ತಪ್ಪಾಗಿ ಬಳಸಿಕೊಂಡಿದ್ದನು.
ಕಳೆದ ಒಂದು ವರ್ಷದಿಂದ ಶ್ವೇತಾಗೆ ಅಶ್ಲೀಲ ಫೋಟೋಗಳು ಮತ್ತು ವಿಕೃತ ಸಂದೇಶಗಳನ್ನು ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದನು. ತನ್ನ ಕಾಮದ ತೃಷೆ ತೀರಿಸಿಕೊಳ್ಳಲು ಶ್ವೇತಾಗೆ ನಿರಂತರವಾಗಿ ಪೀಡಿಸುತ್ತಿದ್ದನು ಎಂದು ಹೇಳಲಾಗಿದೆ.
ಹತ್ಯೆಯ ಸ್ಕೆಚ್ ಮತ್ತು ಮೃತದೇಹ ದಹನ:
ಬಸವನಗೌಡನ ಅತಿಯಾದ ಕಿರುಕುಳದಿಂದ ಬೇಸತ್ತ ಶ್ವೇತಾ, ಈ ವಿಷಯವನ್ನು ತನ್ನ ಪತಿ ದೊಡ್ಡಬಸವನಗೌಡ ಹಾಗೂ ಸೋದರ ವಿಜಯ್‌ಗೆ ತಿಳಿಸಿದ್ದಳು. ಇವನ ಕಾಟಕ್ಕೆ ಮುಕ್ತಿ ಹಾಡಲೇಬೇಕು ಎಂದು ನಿರ್ಧರಿಸಿದ ಮೂವರು ಹತ್ಯೆಗೆ ಸಂಚು ರೂಪಿಸಿದ್ದರು. ಜೂನ್ 7ರಂದು ಶ್ವೇತಾ ತಾನೇ ಕರೆ ಮಾಡಿ ಬಸವನಗೌಡನನ್ನು ನಿರ್ಜನ ಪ್ರದೇಶಕ್ಕೆ ಬರುವಂತೆ ಮಾಡಿದ್ದಾಳೆ. ಅಲ್ಲಿ ಬಂದ ಬಸವನಗೌಡನನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ. ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಹತ್ತು ಕಿಲೋಮೀಟರ್ ದೂರದ ಕಾಲುವೆಯ ಪಕ್ಕಕ್ಕೆ ಸಾಗಿಸಿ, ಅಲ್ಲಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು.
ಪೊಲೀಸರ ಬಲೆಗೆ ಬಿದ್ದ ಆರೋಪಿಗಳು:
ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹವನ್ನು ಪತ್ತೆಹಚ್ಚಿದ ಮೋಕಾ ಠಾಣೆ ಪೊಲೀಸರು, ಮೊಬೈಲ್ ಕರೆಗಳ ವಿವರ (CDR) ಆಧಾರದ ಮೇಲೆ ತನಿಖೆ ನಡೆಸಿ ಶ್ವೇತಾ, ಆಕೆಯ ಪತಿ ಮತ್ತು ಸೋದರನನ್ನು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಗೆಳತಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ಕೊಲೆಯಾಗಿರುವ ರೀತಿಯಲ್ಲಿಯೇ, ಇಲ್ಲಿಯೂ ಕೂಡ ಮಹಿಳೆಯ ಕಿರುಕುಳದ ದೂರು ಕೊಲೆಯಲ್ಲಿ ಅಂತ್ಯವಾಗಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ.

