- Home
- Karnataka Districts
- ಮನೆಗೆ ಗಂಡ ತಡವಾಗಿ ಬರ್ತಿದ್ದಕ್ಕೆ ನೇಣು ಬಿಗಿದುಕೊಂಡ 22 ವರ್ಷದ ಗೃಹಿಣಿ; ತಬ್ಬಲಿಯಾದ 10 ತಿಂಗಳ ಕಂದಮ್ಮ
ಮನೆಗೆ ಗಂಡ ತಡವಾಗಿ ಬರ್ತಿದ್ದಕ್ಕೆ ನೇಣು ಬಿಗಿದುಕೊಂಡ 22 ವರ್ಷದ ಗೃಹಿಣಿ; ತಬ್ಬಲಿಯಾದ 10 ತಿಂಗಳ ಕಂದಮ್ಮ
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಗಂಡ ತಡವಾಗಿ ಮನೆಗೆ ಬರುತ್ತಿದ್ದ ಕಾರಣಕ್ಕೆ ನೊಂದ 22 ವರ್ಷದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮೃತರ ಪೋಷಕರು, ಪತಿ ಹಾಗೂ ಅತ್ತೆ-ಮಾವನ ವಿರುದ್ಧ ಮಾನಸಿಕ ಕಿರುಕುಳದ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

22 ವರ್ಷದ ಗೃಹಿಣಿ
ಕೆಲಸ ಮುಗಿಸಿಕೊಂಡು ಗಂಡ ಮನೆಗೆ ತಡವಾಗಿ ಬರುತ್ತಿದ್ದಕ್ಕೆ ನೊಂದ 22 ವರ್ಷದ ಗೃಹಿಣಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣದ ಓಂ ನಗರದಲ್ಲಿ ಈ ಘಟನೆ ನಡೆದಿದೆ.
ತಡವಾಗಿ ಬರ್ತಿದ್ದ ಗಂಡ
ಅಂಜನಾಬಾಯಿ ಪಾಟೀಲ್ (22) ಪ್ರಾಣ ಕಳೆದುಕೊಂಡ ಗೃಹಿಣಿ. 10 ತಿಂಗಳ ಮಗುವನ್ನು ಬಿಟ್ಟು ಮಹಿಳೆ ಪ್ರಾಣ ಕಳೆದುಕೊಂಡಿದ್ದಾಳೆ. ಮೃತ ಅಂಜನಾಬಾಯಿ ಗಂಡ ಶೇಖರ್, ನಗರದಲ್ಲಿ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದರು. ಹೀಗಾಗಿ ಮನೆಗೆ ರಾತ್ರಿ ತಡವಾಗಿ ಬರುತ್ತಿದ್ದರು. 3 ವರ್ಷದ ಹಿಂದೆ ಶೇಖರ್ ಎಂಬವರ ಜೊತೆ ಅಂಜನಾಬಾಯಿ ಮದುವೆಯಾಗಿತ್ತು.
ಮಾನಸಿಕ ಕಿರುಕುಳದ ಆರೋಪ
ಮನೆಗೆ ಬೇಗ ಬರುವಂತೆ ಗಂಡನಿಗೆ ಅಂಜನಾಬಾಯಿ ಪದೇ ಪದೇ ಒತ್ತಾಯಿಸುತ್ತಿದ್ದಳು. ಪಾನಿಪುರಿ ವ್ಯಾಪಾರ ರಾತ್ರಿಯವರೆಗೂ ನಡೆಯುತ್ತದೆ. ಹಾಗಾಗಿ ಮನೆಗೆ ಬೇಗ ಬರಲು ಆಗಲ್ಲ. ಇದೇ ಸಮಯಕ್ಕೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕೆಂದು ಶೇಖರ್ ಹೇಳಿದ್ದರು. ಇದೇ ವಿಷಯವಾಗಿ ಅಂಜನಾಬಾಯಿಗೆ ಗಂಡನ ಜೊತೆ ಅತ್ತೆ-ಮಾವ ಮಾನಸಿಕ ಕಿರುಕುಳ ನೀಡಿದ್ರು ಎಂಬ ಆರೋಪ ಸಹ ಕೇಳಿ ಬಂದಿದೆ.
ಮೂವರ ವಿರುದ್ಧ ಎಫ್‌ಐಆರ್
ಗಂಡ, ಅತ್ತೆ ಮತ್ತು ಮಾವ ನೀಡುತ್ತಿರುವ ಕಿರುಕುಳದ ಬಗ್ಗೆ ಅಂಜನಾಬಾಯಿ ತನ್ನ ಪೋಷಕರೊಂದಿಗೆ ಹಂಚಿಕೊಂಡಿದ್ದಳಂತೆ. ಇದೀಗ ಅಂಜನಾಬಾಯಿ ಪೋಷಕರು ಗಂಡ ಶೇಖರ್, ಅತ್ತೆ ಅರುಣಾಬಾಯಿ, ಮಾವ ಚಂದ್ರಕಾಂತ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ಮೂವರ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿದೆ.
ಇದನ್ನೂ ಓದಿ: ಕೋರಿಯನ್ ಪ್ರೇಮಿ ಮಕ್ಕಳ ಅಪ್ಪಗೆ 3 ಪತ್ನಿ, ಒಬ್ಬಳು ಲಿವ್-ಇನ್ ಗೆಳತಿ ! ಆಕೆ ನಿಗೂಢ ಸಾವು
ಪೊಲೀಸರಿಂದ ಪರಿಶೀಲನೆ
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಸ್ಥಳದ ಪರಿಶೀಲನೆ ನಡೆಸಿ, ಸ್ಥಳೀಯರು ಮತ್ತು ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನೆ ಸಂಬಂಧ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಹಿಳೆ ರೀಲ್ಸ್‌ಗಾಗಿ ಹಾಕಿದ ನೇಣು ನಿಜವಾಗಿಯೂ ಕತ್ತು ಬಿಗಿಯಿತು: ತಬ್ಬಲಿಯಾಯ್ತು 4 ವರ್ಷದ ಮಗು

