- Home
- Karnataka Districts
- Ramanagara: 16 ತಿಂಗಳ ಪುಟ್ಟ ಪೋರನಿಗೆ ದಾಖಲೆ ಗರಿ, ಮಗುವಿನ ಅಸಾಧಾರಣ ಶಕ್ತಿ ನೋಡಿದರೆ ದಂಗಾಗುತ್ತೀರಾ!
Ramanagara: 16 ತಿಂಗಳ ಪುಟ್ಟ ಪೋರನಿಗೆ ದಾಖಲೆ ಗರಿ, ಮಗುವಿನ ಅಸಾಧಾರಣ ಶಕ್ತಿ ನೋಡಿದರೆ ದಂಗಾಗುತ್ತೀರಾ!
ಕರ್ನಾಟಕಕ್ಕೆ ಹಿರಿಮೆ ತಂದ 8 ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರುಗಳನ್ನು ಈ ಪುಟ್ಟ ಮಗು ಸಲೀಸಾಗಿ ನೆನಪಿಟ್ಟುಕೊಂಡು ಗುರುತಿಸುತ್ತದೆ. ಈ ಅಸಾಧಾರಣ ಜ್ಞಾಪಕ ಶಕ್ತಿ ಮತ್ತು ಗ್ರಹಿಕೆಗೆ ಈಗ ಕಲಾಮ್ಸ್ ಬುಕ್ ಆಫ್ ರೆಕಾರ್ಡ್ಸ್ ವಿಶ್ವದಾಖಲೆಯ ಗೌರವ ಲಭಿಸಿದೆ.

ಜೀನಿಯಸ್ ಕಿಡ್‌ನ ವಿಶೇಷ ವರದಿ
ರಾಮನಗರ: ಸಾಮಾನ್ಯವಾಗಿ ಒಂದು ಒಂದೂವರೆ ವರ್ಷದ ಮಕ್ಕಳು ಇನ್ನು ಸರಿಯಾಗಿ ಹೆಜ್ಜೆ ಇಡಲು, ತೊದಲ ನುಡಿಗಳನ್ನಾಡಲು ಕಲಿಯುತ್ತಿರುತ್ತಾರೆ. ಆದರೆ ಚನ್ನಪಟ್ಟಣದ ಈ 16 ತಿಂಗಳ ಪುಟ್ಟ ಪೋರ ಮಾತ್ರ ಅಸಾಧಾರಣ ಗ್ರಹಿಕೆಯಿಂದ ವಿಶ್ವಗರಿ ಮುಡಿಗೇರಿಸಿಕೊಂಡಿದ್ದಾನೆ. ನೂರಕ್ಕೂ ಹೆಚ್ಚು ವಸ್ತುಗಳನ್ನು ಸಲೀಸಾಗಿ ಗುರುತಿಸಿ ಕಲಾಮ್ಸ್ ಬುಕ್ ಆಫ್ ರೆಕಾರ್ಡ್ಸ್ ವಿಶ್ವದಾಖಲೆ ಬರೆದ ಈ ಜೀನಿಯಸ್ ಕಿಡ್‌ನ ವಿಶೇಷ ವರದಿ ಇಲ್ಲಿದೆ.
ಅಸಾಧಾರಣ ಜ್ಞಾಪಕ ಶಕ್ತಿ ಮತ್ತು ಗ್ರಹಿಕೆ
ಹೌದು, ಬರಿ 16 ತಿಂಗಳ ವಯಸ್ಸಿನ ಈ ಕಂದಂಗೆ 15 ಹಣ್ಣುಗಳು, 30 ಪ್ರಾಣಿಗಳು, 14 ವಾಹನಗಳು, 10 ಪಕ್ಷಿಗಳು, 11 ತರಕಾರಿಗಳು, 10 ಬಣ್ಣಗಳು ಹಾಗೂ ದೇಹದ 7 ಭಾಗಗಳು ಬೆರಳ ತುದಿಯಲ್ಲೇ ಇವೆ! ಅಷ್ಟೇ ಅಲ್ಲ, ಕರ್ನಾಟಕಕ್ಕೆ ಹಿರಿಮೆ ತಂದ 8 ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರುಗಳನ್ನು ಈ ಪುಟ್ಟ ಮಗು ಸಲೀಸಾಗಿ ನೆನಪಿಟ್ಟುಕೊಂಡು ಗುರುತಿಸುತ್ತದೆ. ಈ ಅಸಾಧಾರಣ ಜ್ಞಾಪಕ ಶಕ್ತಿ ಮತ್ತು ಗ್ರಹಿಕೆಗೆ ಈಗ ಕಲಾಮ್ಸ್ ಬುಕ್ ಆಫ್ ರೆಕಾರ್ಡ್ಸ್ ವಿಶ್ವದಾಖಲೆಯ ಗೌರವ ಲಭಿಸಿದೆ.
ಮಗನ ಸಾಮರ್ಥ್ಯ ಗುರುತಿಸಿದ ಪೋಷಕರು
ಚನ್ನಪಟ್ಟಣ ತಾಲೂಕಿನ ಮಳೂರುಪಟ್ಟಣ ಗ್ರಾಮದ ಕಾರ್ತಿಕ್ ಹಾಗೂ ಮೇಘನಾ ದಂಪತಿಯ ಪುತ್ರನೇ ಈ ಭವನ್ ಕಾರ್ತಿಕ್. ಮೇಘನಾಗೆ ಅವಳಿ ಮಕ್ಕಳು ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇದೆ. ಎಂ.ಬಿ.ಎ ಪದವೀಧರೆಯಾಗಿರುವ ತಾಯಿ ಮೇಘನಾ, ಮಗ ಭವನ್ ಒಂದು ವರ್ಷದವನಿದ್ದಾಗಲೇ ಅವನಲ್ಲಿದ್ದ ಚುರುಕುತನವನ್ನು ಗುರುತಿಸಿದ್ದರು.
ಪುಟ್ಟ ಜೀನಿಯಸ್‌ನ ಸಾಮರ್ಥ್ಯಕ್ಕೆ ಅಪಾರ ಮೆಚ್ಚುಗೆ
ಪ್ರತಿದಿನ ಮಗನಿಗೆ ಹೊಸ ವಿಷಯಗಳನ್ನು ಅಭ್ಯಾಸ ಮಾಡಿಸುತ್ತಾ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಈ ವೀಡಿಯೋಗಳನ್ನು ನೋಡಿ ಸಾವಿರಾರು ಜನರು ಈ ಪುಟ್ಟ ಜೀನಿಯಸ್‌ನ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮಗುವಿನ ಅಸಾಧಾರಣ ಗ್ರಹಣ ಶಕ್ತಿಯನ್ನು ಗಮನಿಸಿದ ಚೆನ್ನೈನ ಕಲಾಮ್ಸ್ ಸಂಸ್ಥೆಯು, ಭವನ್ ಕಾರ್ತಿಕ್‌ನನ್ನು ಜೀನಿಯಸ್ ಕಿಡ್' ಎಂದು ಗುರುತಿಸಿ ವಿಶ್ವದಾಖಲೆ ಪುರಸ್ಕಾರ ನೀಡಿದೆ.
ಪೋಷಕರ ಸಂತಸ
ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಗುವಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ. ಈ ಪುಟ್ಟ ಪೋರನ ಸಾಧನೆಗೆ ಮಳೂರುಪಟ್ಟಣ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಮಗುವಿನ ಈ ಜ್ಞಾನಕ್ಕೆ ಆತನ ತಾಯಿ ಶ್ರಮ ಇದೆ. ಕಲಾಮ್ಸ್ ಸಂಸ್ಥೆ ಇದನ್ನ ಗುರುತಿಸಿ ಪ್ರಶಸ್ತಿ ನೀಡಿರೋದು ಖುಷಿ ತಂದಿದೆ ಎಂದು ತಂದೆ ಕಾರ್ತಿಕ್ ಖುಷಿ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಎತ್ತರಕ್ಕೆ ಬೆಳೆಯಲಿ
ಒಟ್ಟಾರೆ ಒಂದು ವರ್ಷ 4 ತಿಂಗಳಲ್ಲೇ ನೂರಕ್ಕೂ ಹೆಚ್ಚು ವಿಷಯಗಳನ್ನು ನೆನಪಿಟ್ಟುಕೊಂಡು ಜಗತ್ತನ್ನೇ ವಿಸ್ಮಯಗೊಳಿಸಿರುವ ಭವನ್ ಕಾರ್ತಿಕ್, ಮುಂಬರುವ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದೇ ಎಲ್ಲರ ಹಾರೈಕೆ. (ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ)

