ನಾನು ಬಲಿಷ್ಠರಾಗಿಯೇ ಕಮ್‌ಬ್ಯಾಕ್ ಮಾಡ್ತೇವೆ, ಆದ್ರೆ ರೈನಾರನ್ನು ವಾಪಾಸ್ ಕರೆಸಿಕೊಳ್ಳಲ್ಲ: ಸಿಎಸ್‌ಕೆ
ದುಬೈ: 3 ಬಾರಿಯ ಐಪಿಎಲ್ ಚಾಂಪಿಯನ್ ಸೂಪರ್ ಕಿಂಗ್ಸ್ ತಂಡ 13ನೇ ಆವೃತ್ತಿಯಲ್ಲಿ ಕೊಂಚ ದುರ್ಬಲವಾಗಿ ಕಾಣಿಸಲಾರಂಭಿಸಿದೆ. ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಸ್ಥಿರ ಪ್ರದರ್ಶನ ತೋರುವ ಮೂಲಕ ಆಡಿದ ಎಲ್ಲಾ ಆವೃತ್ತಿಗಳಲ್ಲೂ ಪ್ಲೇ ಆಫ್ ಹಂತ ಪ್ರವೇಶಿಸಿದ ಏಕೈಕ ತಂಡ ಎನ್ನುವ ಹೆಗ್ಗಳಿಕೆ ಧೋನಿ ತಂಡಕ್ಕಿದೆ.
ಆದರೆ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಣಿಸಿ ಶುಭಾರಂಭ ಮಾಡಿದ್ದ ಧೋನಿ ಪಡೆ ಆ ಬಳಿಕ ಎರಡು ಪಂದ್ಯಗಳನ್ನು ಸೋತು ಆತಂಕಕ್ಕೊಳಗಾಗಿದೆ. ಇಂತಹ ಸಂದರ್ಭದಲ್ಲಿ ಸುರೇಶ್ ರೈನಾ ಅವರಿಗೆ ಸಿಎಸ್‌ಕೆ ಮತ್ತೆ ಬುಲಾವ್ ನೀಡುತ್ತಾ ಎನ್ನುವ ಪ್ರಶ್ನೆ ಜೋರಾಗಿ ಕೇಳಿ ಬರುತ್ತಿದೆ.
ಹಾಲಿ ಚಾಂಪಿಯನ್ಸ್ ಎದುರು ಗೆದ್ದು ಬೀಗಿದ್ದ ಧೋನಿ ಪಡೆ ಇದೀಗ ಸತತ ಎರಡು ಪಂದ್ಯಗಳಲ್ಲಿ ಮುಗ್ಗರಿಸಿ ಆತಂಕಕ್ಕೆ ಒಳಗಾಗಿದೆ.
ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸವಾಲಿನ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಲು ಸಿಎಸ್‌ಕೆ ಪಡೆ ವಿಫಲವಾಗಿತ್ತು.
ಅಂಬಟಿ ರಾಯುಡು ಅನುಪಸ್ಥಿತಿಯಲ್ಲಿ ಸಿಎಸ್‌ಕೆ ಪಾಲಿಗೆ ಸವಾಲಿನ ಮೊತ್ತ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದಂತೆ ಕಾಣಲಾರಂಭಿಸಿದೆ.
ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಸುರೇಶ್ ರೈನಾ ವೈಯುಕ್ತಿಕ ಕಾರಣದಿಂದಾಗಿ ಮಿಲಿಯನ್ ಡಾಲರ್ ಟೂರ್ನಿಯಿಂದ ಹಿಂದೆ ಸರಿದಿದ್ದರು.
ಸತತ ಎರಡು ಪಂದ್ಯ ಸೋಲಿನ ಬೆನ್ನಲ್ಲೇ ಸಿಎಸ್‌ಕೆ ಅಭಿಮಾನಿಗಳು ಉಪನಾಯಕ ಸುರೇಶ್ ರೈನಾ ತಂಡ ಕೂಡಿಕೊಳ್ಳಲಿ ಎಂದು ಆಗ್ರಹಿಸುತ್ತಿದ್ದಾರೆ.
ರೈನಾ ಅವರನ್ನು ಸಿಎಸ್‌ಕೆ ತಂಡಕ್ಕೆ ಸೇರಿಸಿಕೊಳ್ಳುವುದು ಫ್ರಾಂಚೈಸಿಯಿಂದ ಸಾಧ್ಯವಾಗದ ಮಾತು ಎಂದು ಸಿಇಒ ಕಾಶಿ ವಿಶ್ವನಾಥನ್ ಸ್ಪಷ್ಟಪಡಿಸಿದ್ದಾರೆ.
ಟೂರ್ನಿಯಿಂದ ಹೊರಗುಳಿಯುವುದು ಸುರೇಶ್ ರೈನಾ ಅವರ ವೈಯುಕ್ತಿಕ ನಿರ್ಧಾರವಾಗಿದ್ದು, ಅವರ ಖಾಸಗಿತನ ಹಾಗೂ ಈ ನಿರ್ಧಾರವನ್ನು ಫ್ರಾಂಚೈಸಿ ಗೌರವಿಸುತ್ತದೆ ಎಂದು ವಿಶ್ವನಾಥನ್ ಹೇಳಿದ್ದಾರೆ.
ಸದ್ಯಕ್ಕೆ ಸುರೇಶ್ ರೈನಾ ಅವರನ್ನು ವಾಪಾಸ್ ಕರೆಸಿಕೊಳ್ಳುವ ಆಲೋಚನೆ ಸಿಎಸ್‌ಕೆ ಫ್ರಾಂಚೈಸಿ ಮನಸ್ಸಿನಲ್ಲಿಲ್ಲ ಎಂದಿದ್ದಾರೆಂದು ಬ್ಯುಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ.
ಸಿಎಸ್‌ಕೆ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಅಕ್ಟೋಬರ್ 02ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.