ಸೂಪರ್ ಓವರ್‌ನಲ್ಲಿ ಇಶನ್ ಕಿಶನ್ ಯಾಕೆ ಬ್ಯಾಟಿಂಗ್ ಮಾಡಲಿಲ್ಲ; ಸೀಕ್ರೇಟ್ ಬಿಚ್ಚಿಟ್ಟ ರೋಹಿತ್ ಶರ್ಮಾ..!
ದುಬೈ: ಬಹುಶಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯ ಮುಕ್ತಾಯದ ಬಳಿಕ ಕ್ರಿಕೆಟ್ ಅಭಿಮಾನಿಗಳು ಅಬ್ಬಾ ಎಂತಾ ಮ್ಯಾಚ್ ಗುರು ಎಂದು ಉದ್ಘರಿಸದೇ ಇರುವವರೇ ಇಲ್ಲವೇನೋ. ಆ ಮಟ್ಟಿಗೆ ಅಭಿಮಾನಿಗಳನ್ನು ನಿಲ್ಲಿಸಿತ್ತು ಹೈವೋಲ್ಟೇಜ್ ಪಂದ್ಯ.
ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸುವ ಮೂಲಕ ಹಾಲಿ ಚಾಂಪಿಯನ್ ಮೇಲೆ ಪ್ರಾಬಲ್ಯ ಮೆರೆಯಿತು. ಆದರೆ ಇದಕ್ಕೂ ಮುನ್ನ ಸ್ಫೋಟಕ 99 ರನ್ ಸಿಡಿಸಿದ ಇಶನ್ ಕಿಶನ್ ಯಾಕೆ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಬರಲಿಲ್ಲ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಇದಕ್ಕೆ ನಾಯಕ ರೋಹಿತ್ ಉತ್ತರ ನೀಡಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮುಂಬೈ ಇಂಡಿಯನ್ಸ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ 10ನೇ ಪಂದ್ಯ ಮತ್ತೊಂದು ರೋಚಕ ಕಾದಾಟಕ್ಕೆ ಸಾಕ್ಷಿಯಾಗಿತ್ತು.
ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿ, ಹೃದಯಬಡಿತ ಹೆಚ್ಚಾಗುವಂತೆ ಮಾಡಿದ್ದ ಪಂದ್ಯ ಕೊನೆಗೂ ಸೂಪರ್ ಓವರ್‌ನಲ್ಲಿ ಆರ್‌ಸಿಬಿ ಪಾಲಾಯಿತು.
ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿ ಫಿಂಚ್, ಪಡಿಕ್ಕಲ್ ಹಾಗೂ ಎಬಿಡಿ ಅರ್ಧಶತಕದ ನೆರವಿನಿಂದ 201 ರನ್‌ಗಳ ಸವಾಲಿನ ಮೊತ್ತ ಕಲೆ ಹಾಕಿತು.
ಇದಕ್ಕುತ್ತರವಾಗಿ ಹಾಲಿ ಚಾಂಪಿಯನ್ ಆರಂಭಿಕ ಆಘಾತವನ್ನು ಅನುಭವಿಸಿತಾದರೂ ಕೊನೆಯಲ್ಲಿ ಇಶನ್ ಕಿಶನ್ 58 ಎಸೆತಗಳಲ್ಲಿ 99 ರನ್ ಬಾರಿಸಿದರೆ ಕಿರಾನ್ ಪೊಲ್ಲಾರ್ಡ್(60) ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಪಂದ್ಯ ಟೈ ಆಗುವಂತೆ ಮಾಡಿದರು.
ಒಂದು ಹಂತದಲ್ಲಿ 78 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ 5ನೇ ವಿಕೆಟ್‌ಗೆ ಇಶನ್ ಕಿಶನ್ ಹಾಗೂ ಕಿರಾನ್ ಪೊಲ್ಲಾರ್ಡ್ ಜೋಡಿ 119 ರನ್‌ಗಳ ಸ್ಪೋಟಕ ಬ್ಯಾಟಿಂಗ್ ಕೊನೆಯ ಎಸೆತದಲ್ಲಿ ಪಂದ್ಯ ಟೈ ಆಗುವಂತೆ ಮಾಡಿತು.
ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಾಲಾಯಿತು. ಮುಂಬೈ ಪರ ಹಾರ್ದಿಕ್ ಪಾಂಡ್ಯ-ಕಿರಾನ್ ಪೊಲ್ಲಾರ್ಡ್ ಬ್ಯಾಟಿಂಗ್ ಮಾಡಲಿಳಿದರು. ಈ ಜೋಡಿ ನವದೀಪ್ ಸೈನಿ ಬೌಲಿಂಗ್‌ನಲ್ಲಿ ಕೇವಲ 7 ರನ್ ಗಳಿಸಲಷ್ಟೇ ಶಕ್ತವಾಯಿತು
ಆದರೆ ಸ್ಫೋಟಕ ಇನಿಂಗ್ಸ್ ಕಟ್ಟಿದ ಇಶನ್ ಕಿಶನ್ ಯಾಕೆ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಬರಲಿಲ್ಲ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಲಾರಂಭಿಸಿದೆ.
ಈ ಎಲ್ಲಾ ಪ್ರಶ್ನೆ ಹಾಗೂ ಗೊಂದಲಗಳಿಗೆ ಪಂದ್ಯ ಮುಕ್ತಾಯದ ಬಳಿಕ ನಾಯಕ ರೋಹಿತ್ ಶರ್ಮಾ ತೆರೆ ಎಳೆದಿದ್ದಾರೆ.
ಇಶನ್ ಕಿಶನ್ ದೀರ್ಘ ಇನಿಂಗ್ಸ್ ಆಡಿದ್ದರಿಂದ ಸಾಕಷ್ಟು ಬಳಲಿದಂತೆ ಕಂಡುಬಂದರು. ನಾವು ಅವರನ್ನೇ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಕಳಿಸಬೇಕು ಎಂದಿದ್ದೆವು. ಆದರೆ ಅವರು ಅಷ್ಟು ಫ್ರೆಶ್ ಆಗಿರಲಿಲ್ಲ. ಹೀಗಾಗಿ ಪಾಂಡ್ಯ ಹಾಗೂ ಪೊಲ್ಲಾರ್ಡ್ ಅವರನ್ನು ಕಳಿಸಿದೆವು ಎಂದು ರೋಹಿತ್ ಹೇಳಿದ್ದಾರೆ.
7 ರನ್ ಗಳಿಸಿ ಪಂದ್ಯವನ್ನು ಗೆಲ್ಲಬೇಕಾದರೆ ಸಾಮರ್ಥ್ಯದ ಜತೆಗೆ ಅದೃಷ್ಟವೂ ಬೇಕಾಗುತ್ತದೆ. ಆದರೆ ಎಬಿಡಿ ಅನಿರೀಕ್ಷಿತ ಬೌಂಡರಿ ನಮ್ಮ ಗೆಲುವಿನ ಆಸೆಗೆ ತಣ್ಣೀರೆರಚಿತು ಎಂದು ಹಿಟ್ ಮ್ಯಾನ್ ಅಭಿಪ್ರಾಯಪಟ್ಟಿದ್ದಾರೆ
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ನಮಗೆ ಸಾಕಷ್ಟು ಸಕಾರಾತ್ಮಕ ಅಂಶಗಳು ಸಿಕ್ಕಿವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.