ಈ ಐವರು RCB ತಂಡದಲ್ಲಿದ್ದರು ಎಂದರೆ ನೀವು ನಂಬಲೇಬೇಕು..!
ಪ್ರತಿ ಐಪಿಎಲ್ ಆರಂಭಕ್ಕೂ ಮುನ್ನ ಕಪ್ ಗೆಲ್ಲುವ ನೆಚ್ಚಿನ ತಂಡವೆಂಬ ಹಣೆಪಟ್ಟಿಯೊಂದಿಗೆ ಕಣಕ್ಕಿಳಿಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೊನೆಯಲ್ಲಿ ಬರಿಗೈನಲ್ಲೇ ತನ್ನ ಅಭಿಯಾನ ಮುಗಿಸುತ್ತಿದೆ. ಕಳೆದ 12 ಆವೃತ್ತಿಗಳಿಂದಲೂ RCB ಪಾಲಿಗೆ ಐಪಿಎಲ್ ಕಪ್ ಗಗನಕುಸುಮವಾಗಿಯೇ ಉಳಿದಿದೆ.
RCB ಸ್ಟಾರ್ ಆಟಗಾರರ ದಂಡನ್ನೇ ಹೊಂದಿದ್ದರೂ ಕಪ್ ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ. ಕೆಲ ಆಟಗಾರಿಗೆ ಸೂಕ್ತ ಅವಕಾಶ ನೀಡದೇ ಬೆಂಚ್ ಕಾಯಿಸಿದ್ದಕ್ಕೆ ಬೆಂಗಳೂರು ಫ್ರಾಂಚೈಸಿ ಬೆಲೆತೆತ್ತಿದೆ. ಈ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿ, ಮರೆತುಹೋದ ಟಾಪ್ 5 ಆಟಗಾರರನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.
1. ಸ್ಟೀವ್ ಸ್ಮಿತ್
ಸ್ಟೀವ್ ಸ್ಮಿತ್ 2010ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಆದರೆ ಟೂರ್ನಿಯುದ್ಧಕ್ಕೂ ಅವರು ಬೆಂಚ್ ಕಾಯಿಸಿದ್ದರು. ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿರಲಿಲ್ಲ. ಮರು ವರ್ಷ ಸ್ಮಿತ್ ಅವರನ್ನು ತಂಡದಿಂದ ಕೈಬಿಟ್ಟಿತು. ಬಹುತೇಕ ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿಲ್ಲ ಸ್ಮಿತ್ RCB ತಂಡದಲ್ಲಿದ್ದರು ಎಂದು.
2. ಇಯಾನ್ ಮಾರ್ಗನ್
ಇಯಾನ್ ಮಾರ್ಗನ್ ಇದುವರೆಗೂ ಐಪಿಎಲ್ ಟೂರ್ನಿಯಲ್ಲಿ 6 ಫ್ರಾಂಚೈಸಿಗಳ ಪರ ಆಡಿದ್ದಾರೆ. ಆದರೆ ಯಾವ ತಂಡವೂ ಈ ಎಡಗೈ ಬ್ಯಾಟ್ಸ್‌ಮನ್‌ಗೆ ಹೆಚ್ಚಿನ ಚಾನ್ಸ್ ನೀಡಿಲ್ಲ. 2010ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಿಕೊಂಡಿದ್ದ ಮಾರ್ಗನ್ 6 ಪಂದ್ಯಗಳನ್ನಾಡಿ ಕೇವಲ 35 ರನ್ ಗಳಿಸಿದ್ದರು.
3. ಕರುಣ್ ನಾಯರ್
ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಬರೆದಿರುವ ಕರುಣ್ ನಾಯರ್, 2011 ಹಾಗೂ 2012ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಕರುಣ್‌ಗೆ RCB ಪರ ಆಡಲು ಅವಕಾಶ ಸಿಕ್ಕಿದ್ದು ಕೇವಲ 2 ಪಂದ್ಯಗಳು ಮಾತ್ರ.
4. ಡ್ಯಾರನ್ ಸ್ಯಾಮಿ
ಜ್ಯಾಕ್ ಕಾಲಿಸ್ ಬಳಿಕ RCB ತಂಡಕ್ಕೆ ಇದುವರೆಗೂ ಮತ್ತೊಬ್ಬ ಉತ್ತಮ ಆಲ್ರೌಂಡರ್ ಸಿಕ್ಕೇ ಇಲ್ಲ. 2015ರಲ್ಲಿ RCB ತಂಡ ಸೇರುವುದಕ್ಕೂ ಮುನ್ನ ಸ್ಯಾಮಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು. ಮಾತ್ರವಲ್ಲ ಕೆಲ ಪಂದ್ಯಗಳಲ್ಲಿ ನಾಯಕನಾಗಿ SRH ತಂಡವನ್ನು ಮುನ್ನಡೆಸಿದ್ದರು. ಆದರೆ 2015ರಲ್ಲಿ RCB ಕೇವಲ 2 ಪಂದ್ಯಗಳಲ್ಲಿ ಮಾತ್ರ ಆಡಲು ಅವಕಾಶ ನೀಡಿತು. ಕೇವಲ 2 ಬಾರಿ ವಿಫಲವಾಗಿದ್ದಕ್ಕೆ ತಂಡದಿಂದ ಕೈಬಿಟ್ಟಿತು.
5. ಮಿಸ್ಬಾ ಉಲ್ ಹಕ್
ಪಾಕಿಸ್ತಾನದ ಹಾಲಿ ಕೋಚ್ ಮಿಸ್ಬಾ ಉಲ್ ಹಕ್, ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ RCB ತಂಡವನ್ನು ಪ್ರತಿನಿಧಿಸಿದ್ದರು. RCB ಪರ ಮಧ್ಯಮ ಕ್ರಮಾಂಕದಲ್ಲಿ ಮಿಸ್ಬಾ 7 ಪಂದ್ಯಗಳನ್ನಾಡಿದ್ದರು. ಅದರಲ್ಲೂ ಡೆಲ್ಲಿ ಡೇರ್’ಡೆವಿಲ್ಸ್ ಎದುರು ಕೇವಲ 25 ಎಸೆತಗಳಲ್ಲಿ 47 ರನ್ ಚಚ್ಚಿದ್ದರು.