ರಸ್ತೆ ಬದಿ ಪಾನಿಪೂರಿ ಮಾಡುತ್ತಿದ್ದ ಹುಡುಗ, ಐಪಿಎಲ್ ಪಾದಾರ್ಪಣೆ ವೇಳೆ ಧೋನಿಗೆ ಕೈ ಮುಗಿದ..!
ದುಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ರಾಜಸ್ಥಾನ ರಾಯಲ್ಸ್ ತಂಡದ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಪಾದಾರ್ಪಣೆ ಮಾಡಿದ್ದಾರೆ. ಯಶಸ್ವಿ ಎನ್ನುವ ಪ್ರತಿಭಾನ್ವಿತ ಆಟಗಾರ ಐಪಿಎಲ್‌ವರೆಗಿನ ಹಾದಿ ಹೂವಿನ ಹಾದಿಯಾಗಿರಲಿಲ್ಲ.
ಒಂದು ಕಾಲದಲ್ಲಿ ತಂದೆಯ ಜತೆ ರಸ್ತೆ ಬದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಯಶಸ್ವಿ ಈಗ ರಾಜಸ್ಥಾನ ರಾಯಲ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್. ತಮ್ಮ ಪಾದಾರ್ಪಣಾ ಪಂದ್ಯದ ವೇಳೆ ಯಶಸ್ವಿ ಜೈಸ್ವಾಲ್ ಅವರ ವಿನಮ್ರ ಕ್ಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶ ಮೂಲದ ಯಶಸ್ವಿ ಜೈಸ್ವಾಲ್ ಅವರ ಕ್ರಿಕೆಟ್ ಜರ್ನಿಯೇ ಒಂದು ಸ್ಪೂರ್ತಿಯ ಕಹಾನಿ.
ಯಶಸ್ವಿ ತಂದೆ ಭೂಪೇಂದ್ರ ಒಂದು ಪಾನಿಪೂರಿ ಅಂಗಡಿ ನಡೆಸುತ್ತಿದ್ದರು. ಇಂದು ಕ್ರಿಕೆಟ್ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಲು ಸಾಕಷ್ಟು ಕಷ್ಟಪಟ್ಟಿದ್ದಾರೆ ಎಂದು ಅವರ ತಂದೆ ಹೇಳಿದ್ದಾರೆ.
ಯುವ ಪ್ರತಿಭಾನ್ವಿಯ ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡದ ಫ್ರಾಂಚೈಸಿ ಆಟಗಾರರ ಹರಾಜಿನಲ್ಲಿ 2.4 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.
18 ವರ್ಷದ ಯುವ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದರು.
ಟಾಸ್ ಮುಕ್ತಾಯದ ಬಳಿಕ ಧೋನಿಯನ್ನು ಹತ್ತಿರದಿಂದ ನೋಡಿದ ಯಶಸ್ವಿ ಜೈಸ್ವಾಲ್ ಲೆಜೆಂಡ್ ಕ್ರಿಕೆಟಿಗನಿಗೆ ಕೈಮುಗಿದು ಗೌರವ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಯಶಸ್ವಿ ದಿಗ್ಗಜ ಕ್ರಿಕೆಟಿಗ ಧೋನಿ ಬಗೆಗಿನ ವಿನಮ್ರ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಚೊಚ್ಚಲ ಪಂದ್ಯದಲ್ಲಿ ಯಶಸ್ವಿ ಕೇವಲ 6 ರನ್ ಬಾರಿಸಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದಾರೆ.
ಈಗಾಗಲೇ ವಿಜಯ್ ಹಜಾರೆ ಹಾಗೂ ರಣಜಿ ಟ್ರೋಫಿಯಲ್ಲಿ ಕ್ರಮವಾಗಿ ದ್ವಿಶತಕ ಹಾಗೂ ತ್ರಿಶತಕ ಸಿಡಿಸಿರುವ ಯಶಸ್ವಿ 13ನೇ ಅವೃತ್ತಿಯ ಐಪಿಎಲ್ ಮುಕ್ತಾಯದ ವೇಳೆಗೆ ಸ್ಟಾರ್ ಆಟಗಾರನಾಗಿ ಬೆಳೆದು ನಿಂತರೂ ಅಚ್ಚರಿ ಪಡಬೇಕಿಲ್ಲ.
ಇದೀಗ ರಾಜಸ್ಥಾನ ರಾಯಲ್ಸ್ ತಂಡವು ಸೆಪ್ಟೆಂಬರ್ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಸೆಪ್ಟೆಂಬರ್ 27ರಂದು ಎರಡನೇ ಪಂದ್ಯವನ್ನಾಡಲಿದೆ.