ಮ್ಯಾನ್ ಆಫ್ ದಿ ಮ್ಯಾಚ್ ಅಂಪೈರ್‌ಗೆ ಕೊಡ್ಬೇಕಿತ್ತು ಎಂದ ಸೆಹ್ವಾಗ್..!
ನವದಹಲಿ: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಭಾನುವಾರ(ಸೆ.20) ರಾತ್ರಿ ನಡೆದ ಜಿದ್ದಾಜಿದ್ದಿನ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಆದರೆ ಮೈದಾನದಲ್ಲಿ ಅಂಪೈರ್ ಮಾಡಿದ ಯಡವಟ್ಟಿನಿಂದಾಗಿ ಕೆ.ಎಲ್. ರಾಹುಲ್ ನೇತೃತ್ವದ ಪಂಜಾಬ್ ತಂಡ ಸೋಲಿನ ಕಹಿಯುಣ್ಣಬೇಕಾಯಿತು. ಅಂಪೈರ್ ನಡೆ ಮಾಜಿ ಕ್ರಿಕೆಟಿಗರು ಸೇರಿದಂತೆ ಪಂಜಾಬ್ ಸಹ ಒಡತಿ ಪ್ರೀತಿ ಝಿಂಟಾ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಅಂಪೈರ್‌ನಿಂದಾದ ಪ್ರಮಾದವಾದರೂ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ಕನ್ನಡಿಗ ಮಯಾಂಕ್ ಅಗರ್‌ವಾಲ್ ಏಕಾಂಗಿ ಹೋರಾಟದ ಮೂಲಕ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಗೆಲುವಿನ ಹೊಸ್ತಿಲಿಗೆ ಕೊಂಡ್ಯೊಯ್ದಿದ್ದರು. ಆದರ ಕೊನೆಯ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ್ದರಿಂದ ಪಂದ್ಯ ಟೈ ಆಯಿತು.
ಕೊನೆಯ 3 ಎಸೆತಗಳಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಗೆಲ್ಲಲು ಕೇವಲ ಒಂದು ರನ್‌ಗಳ ಅವಶ್ಯಕತೆಯಿತ್ತು. 89 ರನ್‌ಗಳಿಸಿದ್ದ ಮಯಾಂಕ್ ಅಗರ್‌ವಾಲ್, ಶಿಮ್ರೋನ್ ಹೆಟ್ಮೇಯರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಕೊನೆಯ ಎಸೆತದಲ್ಲಿ ಕ್ರಿಸ್ ಜೋರ್ಡನ್ ಕೂಡಾ ವಿಕೆಟ್ ಒಪ್ಪಿಸಿದ್ದರಿಂದ ಪಂದ್ಯ ಟೈ ಆಯಿತು.
ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕೇವಲ 2 ರನ್‌ಗಳಿಗೆ ತನ್ನ ಹೊರಾಟ ಅಂತ್ಯಗೊಳಿಸಿತು. ಸೂಪರ್ ಓವರ್‌ನ ಸುಲಭ ಗುರಿಯನ್ನು ಡೆಲ್ಲಿ ಅನಾಯಾಸವಾಗಿ ತಲುಪಿತು.
ಆದರೆ ಐಸಿಸಿ ಎಲೈಟ್ ಅಂಪೈರ್, ಭಾರತೀಯ ಮೂಲದ ನಿತಿನ್ ಮೆನನ್ 19ನೇ ಓವರ್‌ನಲ್ಲಿ ಮಾಡಿದ ಒಂದು ಯಡವಟ್ಟು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕ್ರಿಸ್ ಜೋರ್ಡನ್ ನಾನ್ ಸ್ಟ್ರೈಕ್ ತುದಿ ಮುಟ್ಟಿ ರನ್ ಓಡಿದ್ದರೂ, ಅಂಪೈರ್ ಒಂದು ರನ್ ಶಾರ್ಟ್ ಎನ್ನುವ ಸೂಚನೆ ನೀಡಿದ್ದರು. ಆದರೆ ರಿಪ್ಲೇಯಲ್ಲಿ ರನ್ ಕಂಪ್ಲೀಟ್ ಆಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿದ್ದರ ಬಗ್ಗೆ ನನ್ನ ಸಹಮತವಿಲ್ಲ. ಇದನ್ನು ಶಾರ್ಟ್ ಎಂದು ತೀರ್ಪಿತ್ತ ಅಂಪೈರ್‌ಗೆ ಮ್ಯಾನ್ ಆಪ್ ದಿ ಮ್ಯಾಚ್ ಕೊಡಬೇಕು. ಅದು ಶಾರ್ಟ್ ರನ್ ಆಗಿರಲಿಲ್ಲ. ಅದೇ ಫಲಿತಾಂಶವನ್ನು ಬದಲಾಯಿಸಿಬಿಟ್ಟಿತು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ವ್ಯಂಗ್ಯವಾಡಿದ್ದಾರೆ.
ಇನ್ನು ಟೀಂ ಇಂಡಿಯಾದ ಮತ್ತೋರ್ವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಶಾರ್ಟ್ ರನ್ ತೀರ್ಮಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಇನ್ನು ಕಿಂಗ್ಸ್ ಇಲೆವನ್ ಪಂಜಾಬ್‌ನ ಸಹ ಒಡತಿ ಪ್ರೀತಿ ಝಿಂಟಾ ಕೂಡಾ ಅಂಪೈರ್ ಈ ನಿರ್ಧಾರವನ್ನು ಕಠುವಾದ ಶಬ್ದಗಳಿಂದ ಖಂಡಿಸಿದ್ದಾರೆ.
ನಾನು ಕೊರೋನಾದ ನಡುವೆಯೇ ಟ್ರಾವೆಲ್ ಮಾಡಿದೆ, ಆರು ದಿನಗಳ ಕಾಲ ಕ್ವಾರಂಟೈನ್ ಮುಗಿಸಿದೆ. ಹಾಗೂ ನಗುನಗುತ್ತಲೇ 5 ಕೋವಿಡ್ ಟೆಸ್ಟ್‌ಗಳಿಗೂ ನಗುನಗುತ್ತಲೇ ಒಳಗಾದೆ. ಆದರೆ ಈ ಶಾರ್ಟ್ ರನ್ ತೀರ್ಮಾನವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಂತ್ರಜ್ಞಾನಗಳಿದ್ದರೂ ಅದನ್ನು ಬಳಸದಿದ್ದರೆ ಏನು ಪ್ರಯೋಜನ. ಈ ಬಗ್ಗೆ ಬಿಸಿಸಿಐ ಇನ್ನಾದರೂ ಈ ಬಗ್ಗೆ ಹೊಸ ನಿಯಮ ಜಾರಿಗೆ ತರಬೇಕು. ಯಾವತ್ತು ಹೀಗೆ ಆಗಬಾರದು ಎಂದು ಟ್ವೀಟ್ ಮೂಲಕ ಪ್ರೀತಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಂಪೈರ್ ಒಂದು ರನ್ ಶಾರ್ಟ್ ನೀಡದಿದ್ದರೆ, ಮಯಾಂಕ್ ಅಗರ್‌ವಾಲ್ ಬಾರಿಸಿದ ಬೌಂಡರಿ ನೆರವಿನಿಂದ ಪಂಜಾಬ್ ತಂಡ ಸುಲಭವಾಗಿ ಗೆಲುವು ದಾಖಲಿಸುತ್ತಿತ್ತು.