ಮುಂಬೈ ವಿರುದ್ಧದ ಶತಕವನ್ನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತಂದೆಗೆ ಅರ್ಪಿಸಿದ ಬೆನ್ ಸ್ಟೋಕ್ಸ್
ಅಬುಧಾಬಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅಜೇಯ ಶತಕ ಸಿಡಿಸುವ ಮೂಲಕ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದಾರೆ.
ಹೌದು, ಪ್ಲೇ ಆಫ್ ರೇಸಿನಲ್ಲಿ ಉಳಿಯಬೇಕಿದ್ದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ರಾಜಸ್ಥಾನ ರಾಯಲ್ಸ್ ತಂಡ ಸಿಲುಕಿತ್ತು. ಇಂತಹ ಸಂದರ್ಭದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿ ಗಮನ ಸೆಳೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಹೆಡಿಂಗ್ಲಿ ಮೈದಾನದಲ್ಲಿ ಆಡಿದ ಬ್ಯಾಟಿಂಗ್ ನೆನಪಿಸುವಂತಿತ್ತು, ಅಬುಧಾಬಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಬೆನ್ ಸ್ಟೋಕ್ಸ್ ಬಾರಿಸಿದ ಶತಕ
ಮುಂಬೈ ಇಂಡಿಯನ್ಸ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಣಕ್ಕಿಳಿದಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸ್ಟೋಕ್ಸ್ ಆಪತ್ಭಾಂದವನಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ 196 ರನ್‌ಗಳ ಸವಾಲಿನ ಗುರಿ ಸ್ಟೋಕ್ಸ್ ಹಾಗೂ ಸಂಜು ಸ್ಯಾಮ್ಸನ್ ಜತೆಯಾಟದ ಮುಂದೆ ದೊಡ್ಡ ಮೊತ್ತ ಎನಿಸಲೇ ಇಲ್ಲ.
ಕೇವಲ 60 ಎಸೆತಗಳಲ್ಲಿ ಬೆನ್ ಸ್ಟೋಕ್ಸ್ 14 ಬೌಂಡರಿ ಹಾಗೂ 3 ಮನಮೋಹಕ ಸಿಕ್ಸರ್‌ಗಳ ನೆರವಿನಿಂದ ಬೆನ್ ಸ್ಟೋಕ್ಸ್ ಅಜೇಯ 107 ರನ್ ಚಚ್ಚಿ ತಂಡಕ್ಕೆ ಸ್ಮರಣೀಯ ಗೆಲುವು ತಂದಿತ್ತರು.
ಸ್ಟೋಕ್ಸ್ ತಂದೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿರುವುದು ತಿಳಿಯುತ್ತಿದ್ದಂತೆ ಇಂಗ್ಲೆಂಡ್ ಆಲ್ರೌಂಡರ್, ಪಾಕಿಸ್ತಾನ ವಿರುದ್ಧದ ಸರಣಿಯನ್ನು ಅರ್ಧಕ್ಕೆ ಬಿಟ್ಟು ನ್ಯೂಜಿಲೆಂಡ್ ತೆರಳಿದ್ದರು.
ಪಾಕಿಸ್ತಾನ ವಿರುದ್ಧದ ಸರಣಿ ವೇಳೆ ಸ್ಟೋಕ್ಸ್ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಸ್ಟೋಕ್ಸ್ ಟೂರ್ನಿಯನ್ನು ಅರ್ಧದಲ್ಲೇ ತೊರೆದು ನ್ಯೂಜಿಲೆಂಡ್‌ನಲ್ಲಿ ನೆಲೆಸಿರುವ ಪೋಷಕರನ್ನು ಭೇಟಿಯಾಗಲು ತೆರಳಿದ್ದರು.
ಕೆಲವು ವಾರಗಳ ಕಾಲ ಕ್ರೈಸ್ಟ್‌ಚರ್ಚ್‌ನಲ್ಲಿ ತಂದೆ-ತಾಯಿಯೊಟ್ಟಿಗೆ ಕಾಲಕಳೆದ ಬೆನ್ ಸ್ಟೋಕ್ಸ್, 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮಧ್ಯಕ್ಕೆ ರಾಜಸ್ಥಾನ ರಾಯಲ್ಸ್ ತಂಡವನ್ನು ಕೂಡಿಕೊಂಡಿದ್ದರು.
ಮೊದಲ ಮೂರ್ನಾಲ್ಕು ಪಂದ್ಯಗಳಲ್ಲಿ ಸ್ಟೋಕ್ಸ್ ಬ್ಯಾಟಿಂದ ನಿರೀಕ್ಷಿತ ರನ್ ಬಂದಿರಲಿಲ್ಲ, ಆದರೆ ತಂಡಕ್ಕೆ ಅಗತ್ಯವಾಗಿ ಬೇಕಿದ್ದ ಸಂದರ್ಭದಲ್ಲಿ ಸ್ಟೋಕ್ಸ್ ಕೆಚ್ಚೆದೆಯ ಆಟವಾಡುವ ಮೂಲಕ ಕ್ರಿಕೆಟ್ ಅಭಿಮಾನಿಗಳು ಎಂದೆಂದೂ ನೆನಪಿನಲ್ಲಿಟ್ಟುಕೊಳ್ಳುವಂತಹ ಆಟವಾಡಿದ್ದಾರೆ.