ಗೆಲುವಿನ ಬೆನ್ನಲ್ಲೇ ಡೆಲ್ಲಿಗೆ ಶಾಕ್: ಅಶ್ವಿನ್ ಮುಂದಿನ ಪಂದ್ಯ ಆಡ್ತಾರಾ..?
ದುಬೈ: ಅನುಭವಿ ಮತ್ತು ಡೆಲ್ಲಿ ತಂಡದ ಪ್ರಮುಖ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಭಾನುವಾರ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ನೀಡಿದ ಕ್ಯಾಚ್‌ಗೆ ಡೈವ್ ಮಾಡಿ ಎಡಗೈಗೆ ಗಾಯ ಮಾಡಿಕೊಂಡಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗೆ ಕರೆದೊಯ್ಯಲಾಗಿದ್ದು, ಭುಜಕ್ಕೆ ಗಾಯವಾಗಿದೆ ಎಂದು ಹೇಳಲಾಗಿದೆ. ಅಶ್ವಿನ್ ಮುಂದಿನ ಕೆಲ ಪಂದ್ಯಗಳಿಗೆ ಲಭ್ಯರಾಗುವುದರ ಬಗ್ಗೆ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ತುಟಿಬಿಚ್ಚಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯ ಸಾಕಷ್ಟು ಜಿದ್ದಾಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಯಿತು.
ಐಪಿಎಲ್ ಕ್ರಿಕೆಟ್ ಅಭಿಮಾನಿಗಳನ್ನು ಕೊನೆಯ ಕ್ಷಣದವರೆಗೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಗೂ ಡೆಲ್ಲಿ ಗೆಲುವಿನ ನಗೆ ಬೀರಿದೆ.
ಪಂದ್ಯ ರೋಚಕವಾಗಿ ಟೈನಲ್ಲಿ ಅಂತ್ಯವಾಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್‌ನಲ್ಲಿ ರಬಾಡ ಮಾರಕ ದಾಳಿಯ ನೆರವಿನಿಂದ ಡೆಲ್ಲಿ ಸುಲಭ ಜಯ ದಾಖಲಿಸಿತು.
ಡೆಲ್ಲಿ ನೀಡಿದ್ದ 158 ರನ್‌ಗಳ ಗುರಿ ಬೆನ್ನತ್ತಿದ್ದ ಕಿಂಗ್ಸ್ ಇಲೆವನ್ ಪಂಜಾಬ್‌ಗೆ ಅಶ್ವಿನ್ ಕಂಟಕವಾಗಿ ಪರಿಣಮಿಸಿದರು.
ಅಶ್ವಿನ್ ತಾವೆಸೆದ ಮೊದಲ ಓವರ್‌ನಲ್ಲೇ ಡೆಲ್ಲಿ ಪರ 2 ವಿಕೆಟ್ ಕಬಳಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿಬಿಟ್ಟರು.
ಆದರೆ ಮ್ಯಾಕ್ಸ್‌ವೆಲ್ ಬಾರಿಸಿದ ಚೆಂಡನ್ನು ಹಿಡಿಯಲು ಹೋಗಿ ಅಶ್ವಿನ್ ಎಡಗೈ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದಾರೆ. ತಕ್ಷಣವೇ ಫಿಸಿಯೋನೊಂದಿಗೆ ಅಶ್ವಿನ್ ಪೆವಿಲಿಯನ್ನಿಗೆ ತೆರಳಿದರು.
ಕೆಲಕಾಲ ವಿಶ್ರಾಂತಿ ಪಡೆದು ಅಶ್ವಿನ್ ಮೈದಾನಕ್ಕೆ ಇಳಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆ ನಿರೀಕ್ಷೆ ಹುಸಿಯಾಯಿತು.
ಇದೀಗ ಅಶ್ವಿನ್ ಮುಂದಿನ ಪಂದ್ಯಕ್ಕೆ ಲಭ್ಯವಾಗುವುದರ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ತುಟಿ ಬಿಚ್ಚಿದ್ದಾರೆ.
ಅಶ್ವಿನ್ ನಮ್ಮ ತಂಡದ ಕೀ ಬೌಲರ್ ಆಗಿದ್ದು, ತಾವೆಸೆದ ಮೊದಲ ಓವರ್‌ನಲ್ಲೇ ಎರಡು ವಿಕೆಟ್ ಕಬಳಿಸಿದ್ದು ಪಂದ್ಯದ ದಿಕ್ಕನ್ನೇ ಬದಲಿಸಿ ಬಿಟ್ಟಿತು ಎಂದಿದ್ದಾರೆ.
ಅಶ್ವಿನ್ ತಾವು ಮುಂದಿನ ಪಂದ್ಯಕ್ಕೆ ಲಭ್ಯವಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಬಗ್ಗೆ ತಂಡದ ಫಿಸಿಯೋ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೆಪ್ಟೆಂಬರ್ 25ರಂದು ದುಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.