IPL 2020: ಚೆನ್ನೈ ಸೂಪರ್ ಕಿಂಗ್ಸ್‌ಗೆ ಮತ್ತೆ ಆಘಾತ..!
ದುಬೈ: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಮೂರು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಮಸ್ಯೆಗಳು ಬಿಟ್ಟೂಬಿಡದಂತೆ ಕಾಡಲಾರಂಭಿಸಿದೆ. ಒಂದು ಕಡೆ ಕೊರೋನಾ ಕಾಟ ಕೊಡುತ್ತಿದ್ದರೆ ಮತ್ತೊಂದೆಡೆ ಹಿರಿಯ ಆಟಗಾರರಿಬ್ಬರು ಟೂರ್ನಿಯಿಂದ ಹಿಂದೆ ಸರಿದಿರುವುದು ಸಿಎಸ್‌ಕೆ ತಂಡದ ತಲೆ ನೋವು ಹೆಚ್ಚಾಗುವಂತೆ ಮಾಡಿದೆ.
ಇದೆಲ್ಲದರ ಮಧ್ಯೆ ದೀಪಕ್ ಚಹರ್ ಕೊರೋನಾದಿಂದ ಗುಣಮುಖವಾಗುವ ಮೂಲಕ ಸಿಎಸ್‌ಕೆ ತಂಡ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದರೆ ಇದೀಗ ಸಿಎಸ್‌ಕೆ ಪಾಳಯದಿಂದ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಬ್ಬರು ಆಟಗಾರರು ಸೇರಿ 13 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು.
ಇದೆಲ್ಲದರ ನಡುವೆ ಕೊರೋನಾದಿಂದ ಚೇತರಿಸಿಕೊಳ್ಳುವಲ್ಲಿ ವೇಗಿ ದೀಪಕ್ ಚಹರ್ ಯಶಸ್ವಿಯಾಗಿದ್ದರು.
ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್ ಋುತುರಾಜ್ ಗಾಯಕ್ವಾಡ್ ಕೊರೋನಾ ಪರೀಕ್ಷೆಯಲ್ಲಿ ಮತ್ತೊಮ್ಮೆ ಪಾಸಿಟಿವ್ ಬಂದಿದೆ.
ಹೀಗಾಗಿ 23 ವರ್ಷದ ಋುತುರಾಜ್ ಗಾಯಕ್ವಾಡ್ ಮತ್ತೆ ಕ್ವಾರಂಟೈನ್ ಮುಂದುವರಿಯಲಿದ್ದಾರೆ.
ಸಿಎಸ್‌ಕೆ ತಂಡದ 13 ಕೊರೋನಾ ಪ್ರಕರಣಗಳಲ್ಲಿ 12 ಮಂದಿ ಗುಣಮುಖರಾಗಿದ್ದಾರೆ.
ಇವರಲ್ಲಿ ವೇಗಿ ದೀಪಕ್ ಚಹರ್‌ಗೆ ಕೆಲ ದಿನಗಳ ಹಿಂದೆ ನಡೆದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದರಿಂದ ಎಲ್ಲಾ ಮುನ್ನೆಚ್ಚರಿಕೆಯ ನಂತರ ತಂಡ ಕೂಡಿಕೊಂಡಿದ್ದು, ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಋುತುರಾಜ್‌ರಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೂ ಅವರನ್ನು ಇನ್ನಷ್ಟು ದಿನಗಳ ಕಾಲ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುವುದು ಎಂದು ತಂಡದ ಮೂಲಗಳು ತಿಳಿಸಿವೆ.
ಸುರೇಶ್ ರೈನಾ ಅನುಪಸ್ಥಿತಿಯಲ್ಲಿ ಯುವ ಪ್ರತಿಭಾನ್ವಿತ ಆಟಗಾರ ಋತುರಾಜ್ ಸಿಎಸ್‌ಕೆ ತಂಡದ ಮೂರನೇ ಕ್ರಮಾಂಕದಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿತ್ತು.
ಇದೀಗ ಋತುರಾಜ್‌ಗೆ ಕೊರೋನಾ ಪಾಸಿಟಿವ್ ಬಂದಿರುವುದರಿಂದ ಅವರು ಕನಿಷ್ಠವೆಂದರೂ ಮೊದಲೆರಡು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.
ಋತುರಾಜ್ ಇನ್ನೂ ಗುಣಮುಖವಾಗದ ಹಿನ್ನೆಲೆಯಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಮುರುಳಿ ವಿಜಯ್‌ಗೆ ಈ ಬಾರಿ ಹೆಚ್ಚು ಅವಕಾಶಗಳು ಸಿಗುವ ಸಾಧ್ಯತೆಯಿದೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು, ಯುಎಇ ಆತಿಥ್ಯ ವಹಿಸಿದೆ.
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.