ರಾಜಸ್ಥಾನಕ್ಕೆ ದಾಖಲೆಯ ಗೆಲುವು ತಂದು ಕೊಟ್ಟ ತೆವಾಟಿಯಾ ಹಳೆಯ ಟ್ವೀಟ್‌ಗಳೀಗ ಸಿಕ್ಕಾಪಟ್ಟೆ ವೈರಲ್..!
ಶಾರ್ಜಾ: ರಾಜಸ್ಥಾನ ರಾಯಲ್ಸ್ ತಂಡದ ಆಲ್ರೌಂಡರ್ ರಾಹುಲ್ ತೆವಾಟಿಯಾ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಕೇವಲ 5 ನಿಮಿಷದ ಅವಧಿಯಲ್ಲಿ ಹೀರೋ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ(ಸೆ.27) ಶಾರ್ಜಾ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರಂಭದಲ್ಲಿ ರನ್‌ಗಳಿಸಲು ಪರದಾಡಿದ್ದ ತೆವಾಟಿಯಾ, ಕೇವಲ ಒಂದೇ ಓವರ್‌ನಲ್ಲಿ ಬರೋಬ್ಬರಿ 5 ಸಿಕ್ಸರ್ ಸಿಡಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿ ಬಿಟ್ಟರು. 31 ಎಸೆತಗಳಲ್ಲಿ 7 ಸಿಕ್ಸರ್ ಸಹಿತ 53 ರನ್ ಬಾರಿಸಿ ರಾಜಸ್ಥಾನ ದಾಖಲೆಯ ಗೆಲುವಿನ ರೂವಾರಿ ಎನಿಸಿದ ತೆವಾಟಿಯಾ ಈ ಹಿಂದೆ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಮಾಡಿದ ಟ್ವೀಟ್‌ಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗಲಾರಂಭಿಸಿವೆ. ಅಷ್ಟಕ್ಕೂ ಆ ಟ್ವೀಟ್‌ನಲ್ಲಿ ಅಂತದ್ದೇನಿದೆ, ನೀವೇ ನೋಡಿ...
ದಾಖಲೆಯ 224ರನ್‌ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ಆಲ್ರೌಂಡರ್ ರಾಹುಲ್ ತೆವಾಟಿಯಾ ಅವರನ್ನು 4ನೇ ಕ್ರಮಾಂಕಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿತ್ತು.
ಆರಂಭದಲ್ಲಿ ರನ್ ಗಳಿಸಲು ತೆವಾಟಿಯಾ ಅಕ್ಷರಶಃ ಪರದಾಡಿದರು. ಮೊದಲ 19 ಎಸೆತಗಳಲ್ಲಿ ತೆವಾಟಿಯಾ ಕೇವಲ 8 ರನ್‌ಗಳನ್ನಷ್ಟೇ ಗಳಿಸಿದ್ದರು.
ತೆವಾಟಿಯಾ ಅವರ ಬ್ಯಾಟಿಂಗ್ ಪ್ರದರ್ಶನಕ್ಕೆ ವೀಕ್ಷಕ ವಿವರಣೆಗಾರರು, ಅಭಿಮಾನಿ, ಟ್ರೋಲ್ ಪೇಜ್‌ಗಳು ಮನಬಂದಂತೆ ಟೀಕಿಸಲಾರಂಭಿಸಿದ್ದವು.
ಆದರೆ ಹರ್ಯಾಣದ ಆಲ್ರೌಂಡರ್ ರಾಹುಲ್ ತೆವಾಟಿಯಾ ಒಂದೇ ಓವರ್‌ನಲ್ಲಿ ಟೀಕಾಕಾರರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾದರು.
18ನೇ ಓವರ್ ಮಾಡಲಿಳಿದ ಶೆಲ್ಡನ್ ಕಾಟ್ರೆಲ್ ಬೌಲಿಂಗ್‌ನಲ್ಲಿ ಬರೋಬ್ಬರಿ 5 ಸಿಕ್ಸರ್ ಚಚ್ಚಿ ಪಂದ್ಯವನ್ನು ಅನಾಯಾಸವಾಗಿ ರಾಜಸ್ಥಾನ ರಾಯಲ್ಸ್ ಪಾಲಾಗುವಂತೆ ಮಾಡಿದರು. ಅಂತಿಮವಾಗಿ ರಾಜಸ್ಥಾನ ರಾಯಲ್ಸ್ ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ರಾಹುಲ್ ತೆವಾಟಿಯಾ ಅವರ ಅಮೋಘ ಬ್ಯಾಟಿಂಗ್ ಬಳಿಕ ಅವರ ಹಳೆಯ ಟ್ವೀಟ್‌ಗಳು ಈಗ ಸಾಕಷ್ಟು ವೈರಲ್ ಆಗಲಾರಂಭಿಸಿವೆ. ಅಂದಹಾಗೆ ತೆವಾಟಿಯಾ ಅಕ್ಟೋಬರ್ 14, 2018ರಿಂದೀಚೆಗೆ ಟ್ವೀಟ್ ಮಾಡಿರಲಿಲ್ಲ.
ಅವರ ಟ್ವಿಟರ್ ಅಕೌಂಟ್‌ನಲ್ಲಿ ಸಾಕಷ್ಟು ಸ್ಪೂರ್ತಿದಾಯಕ ಬರಹಗಳ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಎಂತಹದ್ದೇ ಕ್ಷಣಗಳೇ ಬಂದರೂ ಕೈಚೆಲ್ಲಿ ಕೂರಬಾರದು, ಕೊನೆಯ ಕ್ಷಣದವರೆಗೂ ಹೋರಾಡಬೇಕು ಎನ್ನುವಂತಹ ಕೋಟ್‌ಗಳನ್ನು ಹಂಚಿಕೊಂಡಿದ್ದರು. ಅದರಂತೆಯೇ ಶಾರ್ಜಾ ಮೈದಾನದಲ್ಲಿ ಆಡಿ ತೋರಿಸಿದ್ದಾರೆ.
ಎಂದಿಗೂ ಸೀಮಿತ ಮಿತಿಗಳನ್ನು ಇಟ್ಟುಕೊಳ್ಳಬೇಡಿ, ನಿಮ್ಮ ಕನಸುಗಳನ್ನು ಮೀರಿ ಬೆಳೆಯಿರಿ. ಯಾವುದಕ್ಕೂ ಭಯ ಪಡಬೇಡಿ. ನಗುನಗುತ್ತಾ ಸವಾಲುಗಳನ್ನು ಎದುರಿಸಿ ಎಂದು ತೆವಾಟಿಯಾ ಜುಲೈ 29, 2017ರಲ್ಲಿ ಟ್ವೀಟ್ ಮಾಡಿದ್ದರು.
ನಿಮ್ಮ ಮೇಲೆ ನಿಮಗೆ ನಂಬಿಕೆಯಿಡಿ. ಸತತವಾದ ಶ್ರದ್ಧೆ ಹಾಗೂ ಪರಿಶ್ರಮವಿದ್ದರೆ ನೀವು ಖಂಡಿತ ಜಯಶಾಲಿಯಾಗುತ್ತೀರ ಎಂದು ಜುಲೈ 26, 2017ರಲ್ಲಿ ಬರೆದುಕೊಂಡಿದ್ದರು.
ನಂಬಿಕೆಯಿಡಿ. ಜೀವನದ ಅದ್ಭುತ ಕ್ಷಣಗಳು ಸರಿಯಾದ ಸಮಯ ಬಂದೇ ಬರುತ್ತದೆ. ಆದರೆ ಎಂತಹ ಸಂದರ್ಭದಲ್ಲೂ ನಂಬಿಕೆ ಕಳೆದುಕೊಳ್ಳಬಾರದು ಎಂದು ಜುಲೈ 15, 2017ರಲ್ಲಿ ಟ್ವೀಟ್ ಮಾಡಿದ್ದರು ತೆವಾಟಿಯಾ
ಗುರಿ ಸೆಟ್ ಮಾಡಿಕೊಳ್ಳುವುದು ದೊಡ್ಡ ವಿಚಾರವೇನಲ್ಲ. ಆದರೆ ಆ ಗುರಿಯನ್ನು ನಾವು ಹೇಗೆ ಪ್ರಯತ್ನಿಸುತ್ತೇವೆ ಎನ್ನುವುದು ಮುಖ್ಯ ಎಂದು ಜುಲೈ 14, 2017ರಲ್ಲಿ ಹರ್ಯಾಣ ಆಲ್ರೌಂಡರ್ ಟ್ವೀಟ್ ಮಾಡಿದ್ದರು.
ಯಾವತ್ತೂ ಪ್ರಯತ್ನವನ್ನು ಕೈ ಬಿಡಬೇಡಿ. ಸೋಲೇ ಗೆಲುವಿನ ಮೊದಲ ಸೋಪಾನ ಎನ್ನುವುದನ್ನು ಮರೆಯದಿರಿ ಎಂದು ಜೂನ್ 21, 2017ರಲ್ಲಿ ತೆವಾಟಿಯಾ ಟ್ವೀಟ್ ಮಾಡಿದ್ದರು.