- Home
- News
- India News
- ತೀವ್ರಗೊಳ್ಳುತ್ತಿದೆ ವ್ಯಾಟ್ಸಾಪ್ ಡಿಪಿ ಸ್ಕ್ಯಾಮ್, 7.8 ಕೋಟಿ ರೂ ಕಳೆದುಕೊಂಡ ಭಾರತದ ಮಾಜಿ ಪ್ರಧಾನಿ ಪುತ್ರ
ತೀವ್ರಗೊಳ್ಳುತ್ತಿದೆ ವ್ಯಾಟ್ಸಾಪ್ ಡಿಪಿ ಸ್ಕ್ಯಾಮ್, 7.8 ಕೋಟಿ ರೂ ಕಳೆದುಕೊಂಡ ಭಾರತದ ಮಾಜಿ ಪ್ರಧಾನಿ ಪುತ್ರ
ಸೈಬರ್ ವಂಚನೆ ಹೊಸ ಹೊಸ ರೂಪದಲ್ಲಿ ನಡೆಯುತ್ತಿದೆ. ಇದೀಗ ಹಲವೆಡೆ ವ್ಯಾಟ್ಸಾಪ್ ಡಿಪಿ ಹಗರಣ ನಡೆಯುತ್ತಿದೆ. ಪರಿಣಾಮ ಭಾರತದ ಮಾಜಿ ಪ್ರಧಾನಿ ಪುತ್ರನ ಖಾತೆಗೆ ಕನ್ನ ಹಾಕಿ 7.8 ಕೋಟಿ ರೂ ಎಗರಿಸಲಾಗಿದೆ.

ಮಾಜಿ ಪ್ರಧಾನಿ ಪುತ್ರನ ಖಾತನೆಗೆ ಕನ್ನ
ಸೈಬರ್ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಲವು ರೂಪದಲ್ಲಿ, ಹೊಸ ವಿಧಾನದ ಮೂಲಕ ವಂಚಕರು ಹಣ ಎಗರಿಸುತ್ತಿದ್ದಾರೆ. ಇತ್ತೀಚೆಗೆ ವ್ಯಾಟ್ಸಾಪ್ ಡಿಪಿ ಸ್ಕ್ಯಾಮ್ ಎಲ್ಲೆಡೆ ಪತ್ತೆಯಾಗುತ್ತಿದೆ. ಇದೀಗ ಭಾರತದ ಮಾಜಿ ಪ್ರಧಾನಿ ಐಕೆ ಗುಜ್ರಾಲ್ ಪುತ್ರ ನರೇಶ್ ಗುಜ್ರಾಲ್‌ಗೂ ಇದೇ ವ್ಯಾಟ್ಸಾಪ್ ಡಿಪಿ ಸ್ಕ್ಯಾಮ್ ಮೂಲಕ ವಂಚಿಸಲಾಗಿದೆ. ಪರಿಣಾಮ ನರೇಶ್ ಗುಜ್ರಾಲ್ ಬರೋಬ್ಬರಿ 7.8 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
7.8 ಕೋಟಿ ರೂಪಾಯಿಯಲ್ಲಿ 4 ಕೋಟಿ ರೂ ಫ್ರೀಝ್
ನರೇಶ್ ಗುಜ್ರಾಲ್ ಖಾತೆಯಿಂದ ವಂಚಕರು 7.8 ಕೋಟಿ ರೂಪಾಯಿ ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಂಚನೆ ನಡೆದಿದೆ ಅನ್ನೋದು ಗೊತ್ತಾಗುತ್ತಿದ್ದಂತೆ ರಾಜ್ಯಸಭಾ ಸದಸ್ಯ ನರೇಶ್ ಗುಜ್ರಾಲ್ ಸೈಬರ್ ಪೊಲೀಸರ ಸಂಪರ್ಕಿಸಿದ್ದಾರೆ. ಹೀಗಾಗಿ ಪೊಲೀಸರು 4 ಕೋಟಿ ರೂಪಾಯಿ ಫ್ರೀಝ್ ಮಾಡಿದ್ದಾರೆ. ಬ್ಯಾಂಕಿಂಗ್ ಸರ್ವರ್‌ನಲ್ಲಿ ಫ್ರೀಝ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಜಿ ಪ್ರಧಾನಿ ಪುತ್ರನಿಗೆ ವಂಚಿಸಿದ್ದು ಹೇಗೆ?
ಸೈಬರ್ ವಂಚಕರು ವ್ಯಾಟ್ಸಾಪ್‌ನಲ್ಲಿ ನರೇಶ್ ಗುಜ್ರಾಲ್ ಫೋನ್ ನಂಬರ್‌ಗೆ ಹೋಲುವ ನಂಬರ್ ಬಳಸಿ ವ್ಯಾಟ್ಸಾಪ್ ತೆರೆದಿದ್ದಾರೆ. ಬಳಿಕ ನರೇಶ್ ಗುಜ್ರಾಲ್ ಬಳಸಿರುವ ಡಿಪಿ ಫೋಟೋವನ್ನೇ ಇಲ್ಲೂ ಬಳಸಲಾಗಿದೆ. ವಂಚಕರು ನೇರವಾಗಿ ನರೇಶ್ ಗುಜ್ರಾಲ್ ಕಂಪನಿಯ ಉದ್ಯೋಗಿಯನ್ನು ವ್ಯಾಟ್ಸಾಪ್ ಮೂಲಕ ಸಂಪರ್ಕಿಸಿದ್ದಾರೆ. ತಕ್ಷಣವೇ 7.8 ಕೋಟಿ ರೂಪಾಯಿ ಕೆಳಗಿನ ಖಾತೆಗೆ ವರ್ಗಾವಣೆ ಮಾಡುವಂತೆ ಸಂದೇಶ ರವಾನಿಸಿದ್ದಾರೆ.
ಸಿಬ್ಬಂದಿಗಳ ಎಡವಟ್ಟಿನಿಂದ ಹಣ ಗುಳುಂ
ನರೇಶ್ ಗುಜ್ರಾಲ್ ಮೆಸೇಜ್ ಮಾಡಿದ ರೀತಿಯಲ್ಲಿ ಸಂದೇಶ ಕಳುಹಿಸಲಾಗಿದೆ. ಇದರಂತೆ ಕಂಪನಿ ಸಿಬ್ಬಂದಿ 4 ಹಂತದಲ್ಲಿ ಒಟ್ಟು 7.8 ಕೋಟಿ ರೂಪಾಯ ಮೊತ್ತವನ್ನು ಆರ್‌ಟಿಜಿಎಸ್ ಮೂಲಕ ವಂಚಕರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಜೂನ್ 16ರಂದು ನರೇಶ್ ಗುಜ್ರಾಲ್ ಹಣ ವರ್ಗಾವಣೆ, ಹಣದ ಟ್ಯಾಲಿಯಲ್ಲಿ ವ್ಯತ್ಯಾಸ ಬರುತ್ತಿರುವುದು ಗಮನಿಸಿ ವಿಚಾರಿಸಿದಾಗ ಪ್ರಕರಣ ಬೆಳೆಕಿಗೆ ಬಂದಿದೆ.
3.8 ಕೋಟಿ ರೂ ವಂಚಕರ ಕೈಗೆ
ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ 4 ಕೋಟಿ ರೂಪಾಯಿ ಫ್ರೀಝ್ ಮಾಡಲಾಗಿದೆ. ಅಷ್ಟರೊಳಗೆ 3.8 ಕೋಟಿ ರೂಪಾಯಿ ವಂಚಕರ ಕೈಸೇರಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸೈಬರ್ ವಂಚನೆ ತಡೆಯಲು ಪೊಲೀಸರು ಕಸರತ್ತು ನಡೆಸುತ್ತಿದ್ದರೆ, ಹೊಸ ರೂಪದಲ್ಲಿ ವಂಚನೆ ನಡೆಯುತ್ತಿದೆ.
ಡಿಪಿ ಸ್ಕ್ಯಾಮ್ ಬಗ್ಗೆ ಇರಲಿ ಎಚ್ಚರ
ವ್ಯಾಟ್ಸಾಪ್ ಡಿಪಿ ಸ್ಕ್ಯಾಮ್‌ಗೆ ಹಲವರು ಹಣ ಕಳೆದುಕೊಂಡಿದ್ದಾರೆ. ಪ್ರಮುಖ ಉದ್ಯಮಿಗಳು, ಪ್ರಭಾವಿ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಲಾಗುತ್ತದೆ. ಬಳಿಕ ಇವರ ಕಂಪನಿಗಳ ಉದ್ಯೋಗಿಗಳಿಗೆ ಕಂಪನಿ ಮಾಲೀಕರೇ ಮೆಸೇಜ್ ಮಾಡಿದಂತೆ ಸಂದೇಶ ಕಳುಹಿಸಲಾಗುತ್ತದೆ. ಈ ಮೂಲಕ ವಂಚಿಸಲಾಗುತ್ತದೆ. ಹೀಗಾಗಿ ಅತೀವ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

